ರಸ್ತೆಯೇ ಗ್ಯಾಲರಿಯಾದ ಚಿತ್ರ ಸಂತೆ

7

ರಸ್ತೆಯೇ ಗ್ಯಾಲರಿಯಾದ ಚಿತ್ರ ಸಂತೆ

Published:
Updated:

ಬೆಂಗಳೂರು: ಅಲ್ಲಿ ರಸ್ತೆಯೇ ಗ್ಯಾಲರಿಯಾಗಿತ್ತು. ಬಣ್ಣ ಬಣ್ಣದ ಚಿತ್ರಗಳು ರಸ್ತೆಯ ಇಕ್ಕೆಲಗಳಲ್ಲಿ ನೋಡುಗ­ರನ್ನು ಆಕರ್ಷಿಸುತ್ತಿದ್ದವು. ಕೆಲವರು ತಮ್ಮ ಭಾವಚಿತ್ರ­ಗಳನ್ನು ಕಲಾವಿದರಿಂದ ಸ್ಥಳದಲ್ಲೇ ರಚಿಸಿಕೊಳ್ಳುವ  ಧಾವಂತದಲ್ಲಿದ್ದರೆ, ಇನ್ನು ಕೆಲವರು ಕಲಾಕೃತಿಗಳನ್ನು ತಲ್ಲೀನರಾಗಿ ನೋಡುತ್ತಾ ಅವುಗಳ ಭಾವವನ್ನು ಸೂರೆ­ಗೊಳ್ಳುತ್ತಿದ್ದರು. ಕಲಾಪ್ರೇಮಿಗಳು ಜನಜಂಗುಳಿಯ ನಡುವೆಯೇ ಕಲಾಧ್ಯಾನದಲ್ಲಿ ಮುಳುಗಿದ್ದರು.ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ 11ನೇ ಚಿತ್ರಸಂತೆಯಲ್ಲಿ ಜನಮನ  ಕಲಾ ಸಂಗಮವಾಗಿತ್ತು. ಕುಮಾರಕೃಪಾ ರಸ್ತೆ ಅಕ್ಷರಶಃ ಕಲಾಲೋಕವಾಗಿ ಬದಲಾಗಿತ್ತು.ಸಾಂಪ್ರದಾಯಿಕ ಮೈಸೂರು, ತಂಜಾವೂರು, ರಾಜ­ಸ್ತಾನಿ, ಮಧುಬನಿ ಶೈಲಿಯ ಕಲಾಕೃತಿಗಳ ಜತೆಗೆ ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್‌, ಎಂಬೋ­ಸಿಂಗ್‌, ಗಾಜಿನ ಮೇಲೆ ರಚಿಸಿದ ಚಿತ್ರಗಳು ನೋಡುಗರ ಮನಸೂರೆಗೊಂಡವು. ಪೆನ್ಸಿಲ್‌ ಸ್ಕೆಚ್‌ಗಳು, ವ್ಯಂಗ್ಯ­ಚಿತ್ರಗಳು ಸೇರಿದಂತೆ ವಿವಿಧ ಮಾಧ್ಯಮದ ಕಲಾಕೃತಿ­ಗಳು ‘ಸಂತೆ’ಯಲ್ಲಿ ಮಾರಾಟವಾದವು.ಚಿತ್ರಕಲಾ ಪರಿಷತ್ತಿನ ಹೊರಗೆ ಚಿತ್ರಗಳನ್ನು ನೋಡಿ ಮುಂದೆ ಸಾಗಿದ ಕಲಾರಸಿಕರಿಗೆ ಪರಿಷತ್ತಿನ ಆವರಣ­ದಲ್ಲಿ ಶಿಲ್ಪಕಲಾಕೃತಿಗಳು ಮೋಡಿ ಹಾಕಲು ಕಾದಿದ್ದವು. ಕಬ್ಬಿಣ, ಮಿಶ್ರಲೋಹ ಹಾಗೂ ಬಹುಮಾಧ್ಯಮದಲ್ಲಿ ಮೂಡಿದ್ದ ಕುದುರೆ, ಮಹಿಳೆ, ಸಿಂಹ ಮತ್ತಿತರ ಶಿಲ್ಪಗಳಿಗೆ ನೋಡುಗರು ಮಾರುಹೋದರು. ಕಲಾಕೃತಿಗಳ ಪಕ್ಕ­ದಲ್ಲಿ ನಿಂತು ಮೊಬೈಲ್‌ನಲ್ಲಿ ಛಾಯಾಚಿತ್ರ ಕ್ಲಿಕ್ಕಿಸಿ­ಕೊಂಡರು.ಕಲಾಸಕ್ತರು– ಕಲಾವಿದರ ಮಿಲನ: ಸಂತೆಯಲ್ಲಿ ಕಲಾವಿ­ದರು ತಮ್ಮ ಕಲಾಕೃತಿಗಳನ್ನು ಮಾರಲು ತಂದಿದ್ದರೆ, ಕಲಾಸಕ್ತರು ತಮಗೆ ಇಷ್ಟವಾಗುವ ಕಲಾಕೃತಿಗಳನ್ನು ಕೊಳ್ಳಲು ಸಂತೆಯಲ್ಲಿ ತಿರುಗಾಡುತ್ತಿದ್ದುದು ಸಾಮಾನ್ಯ­ವಾಗಿತ್ತು. ಅಲ್ಲಲ್ಲಿ ಕಲಾಕೃತಿ ಕೊಳ್ಳಲು ಚೌಕಾಶಿಯೂ ನಡೆಯುತ್ತಿತ್ತು. ಕಲಾವಿದ ಹಾಗೂ ಕಲಾಸಕ್ತರ ಮಧ್ಯೆ ಮಧ್ಯವರ್ತಿ ಇಲ್ಲದ ಕಲಾಮಿಲನ ಅಲ್ಲಿ ಸಂಭವಿಸಿತ್ತು.

‘ತಂತ್ರಜ್ಞಾನದ ಬೆಳವಣಿಗೆಯಿಂದ ಚಿತ್ರರಚನೆಯೂ ಡಿಜಿಟಲ್‌ ಆಗಿದೆ. ಆದರೆ, ಕ್ಯಾನ್ವಾಸ್‌ ಹಾಗೂ ಪೇಪರ್‌ ಮೇಲಿನ ಚಿತ್ರಗಳಿಗೆ ಇಂದಿಗೂ ಸಾಕಷ್ಟು ಬೇಡಿಕೆ ಇದೆ ಎಂಬುದಕ್ಕೆ ಈ ಚಿತ್ರಸಂತೆಯೇ ಸಾಕ್ಷಿ. ಸಂತೆಗೆ ಬಂದಿ­ರುವ ಜನರಿಗೆ ಕಲೆಯ ಬಗ್ಗೆ ಆಸಕ್ತಿ ಮೂಡುವುದಲ್ಲದೆ, ಕಲಾ­ಕೃತಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದ ಖುಷಿಯೂ ಸಿಗುತ್ತದೆ’ ಎಂದಿದ್ದು ಬೆಳಗಾವಿಯ ಕಲಾವಿದ ಶೇಖರ್‌.‘ಪ್ರತಿ ಬಾರಿಯೂ ಚಿತ್ರಸಂತೆಗೆ ಬರುತ್ತಿದ್ದೇನೆ. ಅವರ­ವರ ಸ್ಥಿತಿಗೆ ಅನುಗುಣವಾಗಿ ಕಲಾಕೃತಿಗಳನ್ನು ಕೊಳ್ಳಲು ಸಾಧ್ಯವಾಗುವುದು ಚಿತ್ರಸಂತೆಯಲ್ಲಿ ಮಾತ್ರ. ಇಲ್ಲಿ ಮಧ್ಯವರ್ತಿಗಳಿಲ್ಲದೇ ಇರುವುದರಿಂದ ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಕೊಳ್ಳುವುದು ಖುಷಿ

ಎನಿಸು­ತ್ತದೆ’ ಎಂದವರು ರಾಜಾಜಿನಗರದ ನಿವಾಸಿ ಕಾಂಚನ್‌.1,200 ಮಳಿಗೆ, ಕೋಟಿಗೂ ಹೆಚ್ಚು ವಹಿವಾಟು: ಚಿತ್ರ­ಸಂತೆಯಲ್ಲಿ 1,200 ಮಳಿಗೆಗಳಲ್ಲಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿ­ದ್ದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಗೂ ತಮಿಳು­ನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯ­-ಗಳಿಂದ ಕಲಾವಿದರು ಸಂತೆಯಲ್ಲಿ ಪಾಲ್ಗೊಂಡಿ­ದ್ದರು.‘ಸಂತೆಯಲ್ಲಿ ರೂ100ರಿಂದ ಲಕ್ಷದವರೆಗಿನ ಬೆಲೆಯ ಕಲಾಕೃತಿಗಳು ಮಾರಾಟಕ್ಕಿದ್ದವು. ರೂ 1 ಕೋಟಿಗೂ ಹೆಚ್ಚಿನ ಮೌಲ್ಯದ ಕಲಾಕೃತಿಗಳು ಈ ಬಾರಿ ವ್ಯಾಪಾರ­ವಾಗಿವೆ. ಚಿತ್ರಸಂತೆಗೆ ಕಲಾವಿದರು ಹಾಗೂ ಜನರ ಸ್ಪಂದನೆ ಉತ್ತಮವಾಗಿದೆ’ ಎಂದು ಚಿತ್ರಸಂತೆ ಸಮಿತಿಯ ಅಧ್ಯಕ್ಷ ಟಿ.ಪ್ರಭಾಕರ್‌ ತಿಳಿಸಿದರು.ಹರಿದು ಬಂದ ಜನ ಸಾಗರ: ಸಂತೆಯನ್ನು ಕಣ್ತುಂಬಿ­ಕೊಳ್ಳಲು ಬೆಳಗ್ಗಿನಿಂದಲೇ ಕಲಾಸಕ್ತರು ಕುಮಾರಕೃಪಾ ರಸ್ತೆಯತ್ತ ಬರುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಕುಮಾರ­ಕೃಪಾ ರಸ್ತೆಯಲ್ಲಿ ಜನಸಾಗರವೇ ಹರಿಯಿತು. ಸಂತೆಗೆ ಭೇಟಿ ನೀಡಿದ ಜನ ತಮ್ಮ ಕೈಯ್ಯಲ್ಲೊಂದು ಕಲಾ­­ಕೃತಿಯನ್ನು ಹಿಡಿದು ಹೋಗುತ್ತಿದ್ದರು.‘ಸಂಜೆಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಜನ ಚಿತ್ರ­ಸಂತೆಗೆ ಬಂದು ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಜನ ಕಲೆಗೆ ಹೆಚ್ಚೆಚ್ಚು ಹತ್ತಿರಾಗುತ್ತಿದ್ದಾರೆ. ಚಿತ್ರ­ಸಂತೆಯ ಮೂಲ ಉದ್ದೇಶವೂ ಅದೇ ಆಗಿದೆ’ ಎಂದು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ತಿಳಿಸಿದರು.ಪುಸ್ತಕ, ಪರಿಕರಗಳ ಮಾರಾಟ: ಚಿತ್ರಕಲೆ ಹಾಗೂ ಶಿಲ್ಪಕಲೆಗೆ ಸಂಬಂಧಿಸಿದ ಪುಸ್ತಕಗಳು ಮತ್ತು ಚಿತ್ರ ರಚನೆಗೆ ಬೇಕಾದ ಕ್ಯಾನ್ವಾಸ್‌, ಬ್ರಷ್‌, ಬಣ್ಣ, ಸ್ಟ್ಯಾಂಡ್‌ ಸೇರಿದಂತೆ ಅಗತ್ಯ ಪರಿಕರಗಳ ಮಾರಾಟವೂ ಪರಿಷತ್ತಿನ ಆವರಣದಲ್ಲಿ ನಡೆಯಿತು.ಆಸಕ್ತರು ಡ್ರಾಯಿಂಗ್‌ ಶೀಟ್‌, ಬಣ್ಣ, ಬ್ರಷ್‌ಗಳನ್ನು ರಿಯಾ­ಯಿತಿ ದರದಲ್ಲಿ ಖರೀದಿಸಿದರು. ಪೆನ್ಸಿಲ್‌, ಡ್ರಾಯಿಂಗ್‌ ಶೀಟ್‌ ಕೊಂಡ ಪುಟ್ಟ ಮಕ್ಕಳು ಸ್ಥಳದಲ್ಲೇ ಚಿತ್ರ ರಚನೆಗೆ ತೊಡಗಿದ್ದರು.ಸ್ಪರ್ಧೆಯಲ್ಲಿ ಚಿತ್ರದ ರೂಪ ಪಡೆದ ಕನಸುಗಳು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಚಿತ್ರಸಂತೆಯಲ್ಲಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಚಿತ್ರಗಳನ್ನು ರಚಿಸಿದರು.ಐದು ವರ್ಷಗಳಿಂದ ನಡೆಯುತ್ತಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಈ ಬಾರಿ ಹೆಚ್ಚಿನ ಮಕ್ಕಳು ಪಾಲ್ಗೊಂಡು ತಮ್ಮ ಕನಸಿಗೆ ಚಿತ್ರದ ರೂಪ ನೀಡಿದರು.ಮನೆ, ಬೆಟ್ಟ, ಶಾಲೆಯ ಆವರಣದ ಪ್ರಾರ್ಥನೆಯ ವಸ್ತುವನ್ನು ಮಕ್ಕಳು ತಮ್ಮ ಚಿತ್ರ ರಚನೆಗೆ ಆಯ್ದು­ಕೊಂಡಿದ್ದರೆ, ಹಿರಿಯರ ವಿಭಾಗದಲ್ಲಿ ಯುವಕರು ಬಹು­ಮಾಧ್ಯಮ­ದ ಚಿತ್ರಗಳನ್ನು ರಚಿಸಿದರು.ಕಿರಿಯ, ಹಿರಿಯ ಹಾಗೂ ವಯಸ್ಕರ ವಿಭಾಗದಲ್ಲಿ ಚಿತ್ರ­ಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಹಾಳೆಯನ್ನು ಹರಡಿಕೊಂಡು ಖುಷಿಯಿಂದ ಚಿತ್ರಗಳನ್ನು ಬಿಡಿಸಿದರು. ಕೆಲ ಪುಟಾಣಿಗಳು ಚಿತ್ರ ಬಿಡಿಸುವ ಜತೆಗೆ ಮುಖ ಮೈಗೆಲ್ಲ ಬಣ್ಣ ಮೆತ್ತಿಕೊಂಡು ಸಂಭ್ರಮಿಸಿದರು.‘ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿಯಾಯಿತು. ನನ್ನ ಚಿತ್ರಕ್ಕೆ ಬಹುಮಾನ ಸಿಕ್ಕಿದ್ದು ಹೆಚ್ಚಿನ ಸಂತೋಷ ತಂದಿದೆ. ಮುಂದೆ ಚಿತ್ರಕಲೆಯನ್ನೇ ಅಭ್ಯಾಸ ಮಾಡಿ ದೊಡ್ಡ ಕಲಾವಿದನಾಗುತ್ತೇನೆ’ ಎಂದಿದ್ದು ಆರನೇ ತರಗತಿ ವಿದ್ಯಾರ್ಥಿ ಅರುಣ್‌ ಕುಮಾರ್‌.ವಿಜೇತರು: ಕಿರಿಯರ ವಿಭಾಗ: ಪ್ರಥಮ– ಆರ್‌.­ರಣಿತ್‌, ದ್ವಿತೀಯ– ಶ್ರೇಯಾ ಶೆಟ್ಟಿ, ಎಸ್‌.­ಸಹನಾ, ತೃತೀಯ– ರಿತೇಶ್‌, ಎಸ್‌.ಕೀರ್ತನಾ, ನಿವೇದಿತಾ.ಹಿರಿಯರ ವಿಭಾಗ: ಪ್ರಥಮ–ಅಪೇಕ್ಷಾ ಪೈ, ದ್ವಿತೀಯ–ವಿ. ವಿಭಾ, ಪ್ರಭಾ ಆರ್‌. ಮುದ್ದೇ­ಬಿಹಾಳ್‌, ತೃತೀಯ–ಹರಿಹರನ್‌, ಅರುಣ್‌ ಕುಮಾರ್‌,  ಪಿ.ಎನ್‌. ಚಕ್ರಪಾಣಿ.ವಯಸ್ಕರ ವಿಭಾಗ: ಪ್ರಥಮ– ಗೋಪಿ, ದ್ವಿತೀಯ– ಸಂಜುದಾಸ್‌, ಬಸವರಾಜ್‌ ಎಲ್‌. ದರೋಜಿ, ತೃತೀಯ–ರವಿನಾಯಕ, ವಿಜಯ್‌ ಕಡೋಲ್ಕರ್‌, ಆರ್‌.­ ಹೇಮಂತ್‌ ಕುಮಾರ್‌.ಕಲೆ ಪ್ರೋತ್ಸಾಹಕ್ಕೆ ನೆರವು

ಚಿತ್ರಸಂತೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕಲೆಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ. ಚಿತ್ರ­ಸಂತೆಯ ಮೂಲಕ ಕಲೆ ಜನ ಸಾಮಾನ್ಯರಿಗೆ ಹತ್ತಿರ­ವಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಜನ ಕಲಾಕೃತಿಗಳನ್ನು ಕೊಳ್ಳಲು ಚಿತ್ರಸಂತೆ ಸಹಕಾರಿ­ಯಾಗಿದೆ’ ಎಂದರು.‘ಚಿತ್ರಸಂತೆ’ಯ ಚಿತ್ರಕ್ಕೆ ರೂ 41 ಸಾವಿರ

ಚಿತ್ರಸಂತೆ ಪರಿಕಲ್ಪನೆಯ ಬಗ್ಗೆ ಹಿರಿಯ ಕಲಾವಿದ ಗುಜ್ಜಾರಪ್ಪ ರಚಿಸಿದ್ದ ಜನಜಂಗುಳಿಯ ‘ಚಿತ್ರ­ಸಂತೆ’ ಕಲಾಕೃತಿ ₨ 41 ಸಾವಿರಕ್ಕೆ ಹರಾಜಾ­ಯಿತು. ಅಂತಿಮವಾಗಿ ಹರಾಜು ಕೂಗಿದ ಚಿತ್ರ­ಕಲಾ ಪರಿಷತ್‌ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ.­ಚೌಟ ಕಲಾಕೃತಿಯನ್ನು ತಮ್ಮದಾಗಿಸಿಕೊಂಡರು.

ಚಿತ್ರಸಂತೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್‌ ಬಿ.ಎಸ್‌.­ಸತ್ಯ­ನಾರಾ­ಯಣ, ಸಾಹಿತಿ ಎಂ.ಎಚ್‌. ಕೃಷ್ಣಯ್ಯ, ಕಲಾವಿ­ದ­ರಾದ ವೆಂಕಟಾಚಲಪತಿ, ಡಾ.ಸಿ.­ಚಂದ್ರಶೇಖರ್‌ ಸೇರಿ­ದಂತೆ ಹಲವು ಪ್ರಮುಖರು ಹಸ್ತಾಕ್ಷರ ಹಾಕಿದ್ದ ಕಲಾಕೃತಿ ಇದಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry