ಶನಿವಾರ, ಜನವರಿ 18, 2020
20 °C

ರಸ್ತೆ ಅತಿಕ್ರಮಣ ನೈರ್ಮಲ್ಯಕ್ಕೂ ಕುತ್ತು

–ನಾಗರಿಕ Updated:

ಅಕ್ಷರ ಗಾತ್ರ : | |

ನಗರದ ಬಹುತೇಕ ಪ್ರದೇಶಗಳಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳು ಮತ್ತು ‘ವಿಲ್ಲಾ’ಗಳು ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನಿಗದಿತ ನಿಯಮಗಳನ್ನು ಪಾಲಿಸದ ಇವುಗಳ ಕಾಮಗಾರಿಯಿಂದ ನಗರದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ  ತೊಂದರೆಯಾಗುತ್ತಿರುವುದು ವಿಷಾದನೀಯ.ಕಟ್ಟಡ ಸಾಮಗ್ರಿಗಳು ಅರ್ಧಭಾಗ ರಸ್ತೆಯನ್ನೇ ಆಕ್ರಮಿಸಿಕೊಂಡು ವಾಹನಗಳು ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಟ್ಟಡ ಕಾರ್ಮಿಕರು ಮತ್ತು ಅವರ ಸಂಸಾರಕ್ಕೆ ನಿರ್ಮಾಣ ಹಂತದ ಕಟ್ಟಡದಲ್ಲೇ ವಾಸ್ತವ್ಯ. ಕಟ್ಟಡದ ಮಾಲೀಕರು ಇವರಿಗೆಲ್ಲ ಶೌಚಾಲಯ, ಸ್ನಾನಗೃಹ ಒದಗಿಸುವ ಮಾತಿರಲಿ, ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸುವುದಿಲ್ಲ. ಹೊಸದಾಗಿ ಕೊರೆದ ಕೊಳವೆ ಬಾವಿಗಳ ನೀರು ಬಹುತೇಕ ಕಡೆ ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿರುವುದಿಲ್ಲ. ಕಾರ್ಮಿಕರು ಅಕ್ಕಪಕ್ಕದ ಮನೆಗಳಿಂದ ಕುಡಿಯುವ ನೀರು ಬೇಡಿ ಪಡೆಯುತ್ತಾರೆ.ಅಷ್ಟೂ ಜನ ಕಾರ್ಮಿಕರು ಕಟ್ಟಡದ ಮುಂಭಾಗದಲ್ಲೇ ಸ್ನಾನ ಮಾಡುವುದು, ಮುಸುರೆ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇವೆಲ್ಲವನ್ನೂ ಮಾಡುತ್ತಾರೆ. ಒಳಚರಂಡಿ ಸಂಪರ್ಕವಿಲ್ಲದ ಕಾರಣ ರಸ್ತೆ ತುಂಬಾ ಆ ನೀರು ನಿಲ್ಲುತ್ತದೆ. ಇದರಿಂದ ಡೆಂಗೆ ಮತ್ತಿತರ ರೋಗಗಳನ್ನು ಹರಡುವ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ಇವೆಲ್ಲದರ ಸ್ಪಷ್ಟ ಚಿತ್ರಣವನ್ನು ಇಂದಿರಾನಗರ ಎರಡನೇ ಹಂತದ 9ನೇ ಮುಖ್ಯ ರಸ್ತೆಯಲ್ಲಿ (17 ‘ಸಿ’ ಕ್ರಾಸ್‌ ಮತ್ತು 14ನೇ ಕ್ರಾಸ್‌ ನಡುವೆ) ಕಾಣಬಹುದಾಗಿದೆ.ಪಾಲಿಕೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳು ಈ ಕುರಿತು ಮೌನವನ್ನು ಕಳೆದ ನಾಲ್ಕೈದು ತಿಂಗಳಿನಿಂದಲೂ ತಳೆದಿದೆ. ಸದಾ ಈ ರಸ್ತೆಯನ್ನು ಬಳಸುವ ವಾಹನ ಚಾಲಕರು ಮತ್ತು ಪಾದಚಾರಿಗಳು ಈ ಮೌನವನ್ನು ಬೇರೆ ರೀತಿಯೇ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆಯಲ್ಲವೆ?

–ನಾಗರಿಕ

ಪ್ರತಿಕ್ರಿಯಿಸಿ (+)