ರಸ್ತೆ ಅಪಘಾತ: ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಇಬ್ಬರ ಸಾವು

7

ರಸ್ತೆ ಅಪಘಾತ: ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ನಗರದ ವೈಟ್‌ಫೀಲ್ಡ್ ಮತ್ತು ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.ಐಟಿಪಿಎಲ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಕಾಶ್ ರಾಮಚಂದ್ರನ್ (27) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ್ದಾರೆ.ತಮಿಳುನಾಡು ಮೂಲದ ಪ್ರಕಾಶ್ ರಾಮಚಂದ್ರನ್, ಮಾರತ್‌ಹಳ್ಳಿಯಲ್ಲಿ ವಾಸವಾಗಿದ್ದರು. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ಅವರು, ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ವಾಹನ ಗುದ್ದಿಸಿದ್ದಾರೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ನಸುಕಿನಲ್ಲಿ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಬಾಗಲೂರು ಮುಖ್ಯರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸೈಯದ್ ತಬ್ರೇಜ್ (24) ಎಂಬುವರು ಮೃತಪಟ್ಟಿದ್ದಾರೆ.ಯಲಹಂಕ ಬಳಿಯ ಕೊಂಡಪ್ಪ ಲೇಔಟ್ ನಿವಾಸಿಯಾದ ಸೈಯದ್, ಗಾರೆ ಕೆಲಸ ಮಾಡುತ್ತಿದ್ದರು. ಅವರು ಸೂರಿ ಎಂಬ ಸ್ನೇಹಿತನ ಜತೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಬಿಎಂಟಿಸಿ ಬಸ್, ಅವರ ಬೈಕ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸೈಯದ್ ಅವರ ಮೇಲೆ ಅದೇ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿಂಬದಿ ಸವಾರ ಸೂರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry