ರಸ್ತೆ ಅಭಿವೃದ್ಧಿಗೆ ಕೋರ್ಟ್ ಸೂಚನೆ

7

ರಸ್ತೆ ಅಭಿವೃದ್ಧಿಗೆ ಕೋರ್ಟ್ ಸೂಚನೆ

Published:
Updated:

ಔರಾದ್: ರಾಜ್ಯ ರಸ್ತೆ ಅಭಿವೃದ್ಧಿ ನಿಯಮದ ಪ್ರಕಾರ ವನಮಾರಪಳ್ಳಿ-ರಾಯಚೂರು ರಾಜ್ಯ ಹೆದ್ದಾರಿ 15ರ ವ್ಯಾಪ್ತಿಯಲ್ಲಿ ಬರುವ ಬೀದರ್-ಔರಾದ್ ನಡುವಿನ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಜರುಗಿಸುವಂತೆ ಹೈಕೋರ್ಟ್ ಸಂಬಂಧಿತರಿಗೆ ಸೂಚನೆ ನೀಡಿದೆ.ಹದಗೆಟ್ಟ ಬೀದರ್-ಔರಾದ್ ರಸ್ತೆ ನಿರ್ಮಾಣ ಕುರಿತು ಔರಾದ್ ನಿವಾಸಿ ಪತ್ರಕರ್ತ ಗುರುನಾಥ ವಡ್ಡೆ ಹೈಕೋರ್ಟ್‌ಗೆ ಸಲ್ಲಿಸಿದ ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ವಿಕ್ರಮಜೀತಸೇನ್ ಮೂರು ತಿಂಗಳಲ್ಲಿ ಅರ್ಜಿದಾರರ ಬೇಡಿಕೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಿದ್ದಾರೆ.ಸುಮಾರು 30-40 ವರ್ಷಗಳ ಹಿಂದೆ ನಿರ್ಮಿಸಲಾದ ಬೀದರ್- ಔರಾದ್ ರಸ್ತೆ ಪದೇ ಪದೇ ದುರಸ್ತಿ ಮಾಡಿದರೂ ಉಳಿಯದೆ ಪ್ರಯಾಣಿಕರು ಪರದಾಡಬೇಕಾಗಿದೆ. ಅಂತರರಾಜ್ಯ ಸಂಪರ್ಕದ ಈ ರಸ್ತೆ ಮೇಲೆ ನಿತ್ಯ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ಮಹಾರಾಷ್ಟ್ರದ ನಾಂದೇಡ್ ಸೇರಿದಂತೆ ಆ ಭಾಗದ ಪ್ರಯಾಣಿಕರು ಹೈದರಾದ್‌ಗೆ ಈ ರಸ್ತೆ ಮೂಲಕ ಸಂಚರಿಸುತ್ತಾರೆ. ಮುಖ್ಯವಾಗಿ ಸಿಖ್ ಬಾಂಧವರು ಬೀದರ್ ಗುರುದ್ವಾರಕ್ಕೆ ಇಲ್ಲಿಂದಲೇ ಹೋಗಿ ಬರುತ್ತಾರೆ. ಈ ಕಾರಣ ಈ ರಸ್ತೆ ಈಗ ಭಾರಿ ವಾಹನದಟ್ಟಣೆಯಿಂದ ಕೂಡಿದೆ ಎಂದು ಗುರುನಾಥ ವಡ್ಡೆ ನ್ಯಾಯಾಲಯಕ್ಕೆ ರಸ್ತೆ ಸ್ಥಿತಿಗತಿ ವರದಿ ನೀಡಿದ್ದಾರೆ.ಈಗಾಗಲೇ ನಿರ್ಮಿಸಲಾದ ಕಮಲನಗರ-ಗುನ್ನಳ್ಳಿ ರಾಜ್ಯ ಹೆದ್ದಾರಿ-4ರ ಮಾದರಿಯಲ್ಲಿ ಬೀದರ್-ಔರಾದ್ ರಸ್ತೆ ನಿರ್ಮಾಣ ಮಾಡಬೇಕು. 2 ಮೀಟರ್ ಆಳದ ಅಡಿಪಾಯ ಹಾಕಿ 7.50 ಮೀಟರ್ ಅಗಲದ ರಸ್ತೆ ಅಭಿವೃದ್ಧಿಪಡಿಸುವಂತೆ ಬೇಡಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ವಕೀಲ ಸಿದ್ದವೀರ ಚಕ್ಕಿ ವಡ್ಡೆ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಸಂವಿಧಾನದ ಕಲಂ 266 ಮತ್ತು 277 ಪ್ರಕಾರ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.ಹೈಕೋರ್ಟ್ ಪ್ರತಿಯೊಂದಿಗೆ ಗುರುನಾಥ ವಡ್ಡೆ ಮುಖ್ಯಮಂತ್ರಿ, ಬೀದರ್ ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಕೇಳಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry