ರಸ್ತೆ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

7
ಹಂಪನೂರು ಗೇಟ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ರಸ್ತೆ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

Published:
Updated:

ಭರಮಸಾಗರ: ಹೋಬಳಿಯ ಹಂಪನೂರು ಗೇಟ್‌ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಗಾಯಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ಜರುಗಿದೆ.ಸಿರಿಗೆರೆ ಮಾರ್ಗದಿಂದ ಬೈಕ್‌ನಲ್ಲಿ ಬರುತ್ತಿದ್ದ ಮೇದೆಹಳ್ಳಿಯ ಪುರುಷೋತ್ತಮ ರೆಡ್ಡಿ (40) ಹಂಪನೂರು ಗೇಟ್‌ ಬಳಿ ಹೆದ್ದಾರಿ ದಾಟುತ್ತಿದ್ದ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ನೂರುಲ್ಲಾ ಎಂಬುವರು ತಮ್ಮ ಎರಡು ತಿಂಗಳ ಮಗುವನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಮಗುವಿನ ಶವವನ್ನು ಗೋವಾಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಸುಮಾರು ಎರಡು ಗಂಟೆಕಾಲ ಹೆದ್ದಾರಿ ತಡೆ ನಡೆಸಿದರು. ಇದರಿಂದ ಸುಮಾರು ಎರಡು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಗಂಗಯ್ಯ, ವೃತ್ತನಿರೀಕ್ಷಕಿ ಕನಕಲಕ್ಷ್ಮಿ, ಎಸ್‌ಐ ಪ್ರಕಾಶ್‌ ಪಟೇಲ್‌ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷವೇ ಚತುಷ್ಪಥ ರಸ್ತೆ ಅವ್ಯವಸ್ಥೆಗೆ ಕಾರಣವಾಗಿದೆ. ಇದರಿಂದ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈಚೆಗೆ ಕೇಂದ್ರ ಹೆದ್ದಾರಿ ಸಚಿವ ಆಸ್ಕರ್‌ಫರ್ನಾಂಡಿಸ್‌ ಇಲ್ಲಿಗೆ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲನೆ ನಡೆಸಿದರೂ ರಸ್ತೆ ಸುಧಾರಣೆ ಕಂಡಿಲ್ಲ.ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನು ವಶಪಡಿಸಿಕೊಳ್ಳುವ ಸರ್ಕಾರಕ್ಕೆ ಸಾರ್ವಜನಿಕರ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಎಂದು ಗ್ರಾಮಸ್ಥರು ದೂರಿದರು. ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.ಸೆ. 29ಕ್ಕೆ ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವರು ತಾಂತ್ರಿಕ ಸಮಿತಿ ತಂಡದೊಂದಿಗೆ ಇಲ್ಲಿನ ರಸ್ತೆ ಅವ್ಯವಸ್ಥೆ ಬಹ್ಹೆ ಪರಿಶೀಲನೆಗೆ ಬರಲಿದ್ದು ಅವರ ಬಳಿ ಮನವಿ ಮಾಡಿಕೊಳ್ಳುವುದಾಗಿ ವೃತ್ತನಿರೀಕ್ಷಕಿ ಕನಕಲಕ್ಷ್ಮೀ ಮನವಿ ಮಾಡಿಕೊಂಡ ನಂತರ ಪ್ರತಿಭಟನೆ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry