ಶನಿವಾರ, ಜೂನ್ 19, 2021
27 °C
ಶಾಮನೂರು ಕುಟುಂಬದ ವಿರುದ್ಧ ಬಿಜೆಪಿ ಮುಖಂಡರ ಆರೋಪ

ರಸ್ತೆ ಒತ್ತುವರಿಯೇ ಕಾಂಗ್ರೆಸ್‌ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಲಕ್ಷ್ಮೀ ಫ್ಲೋರ್‌ ಮಿಲ್‌ ಬಳಿ 30 ಅಡಿ ರಸ್ತೆ ಹಾಗೂ ಕುಂದುವಾಡ ಕೆರೆಯ ಬಳಿ ಎರಡು ಎಕರೆ ಜಮೀನು ಒತ್ತುವರಿ ಮಾಡಿರುವುದೇ ಕಾಂಗ್ರೆಸ್ ಸಾಧನೆ. ಕಾಂಗ್ರೆಸ್‌ ಮುಖಂಡರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಮುಖಂಡ, ‘ದೂಡಾ’ದ ಮಾಜಿ ಅಧ್ಯಕ್ಷ ಯಶವಂತ್‌ರಾವ್‌ ಜಾಧವ್‌ ಹೇಳಿದರು.ಕಾಂಗ್ರೆಸ್‌ ವಕ್ತಾರ ರಾಘವೇಂದ್ರ ನಾಯ್ಕ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರು ಗಣಿಧಣಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖಂಡ ಶಿವನಹಳ್ಳಿ ರಮೇಶ್‌ ಅವರೂ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇವು ಸತ್ಯಕ್ಕೆ ದೂರವಾದವು. ರಮೇಶ್‌ ಒಬ್ಬ ವಿದ್ಯಾವಂತ ಮುಖಂಡ. ಅರಿತು ಮಾತನಾಡುವುದನ್ನು ಕಲಿಯಬೇಕು. ರಾಘವೇಂದ್ರ ನಾಯ್ಕ ಅವರ ವಿದ್ಯಾಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪ ಮಾಡಿದರು.ಕಾಂಗ್ರೆಸ್‌ ಮುಖಂಡರ ವಂಶಾಡಳಿತ ಈ ಬಾರಿ ಕೊನೆಯಾಗಲಿದೆ. ಒಂದೇ ಮನೆತನಕ್ಕೆ ಶಾಸಕ, ಮಂತ್ರಿ ಸ್ಥಾನಮಾನ ಹಾಗೂ ಲೋಕಸಭೆ ಸ್ಥಾನ ಎಲ್ಲವೂ ಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ಪುತ್ರ ಮಹಿಮ ಪಟೇಲ್‌ ಅವರಿಗೆ ಟಿಕೆಟ್‌ ನೀಡಿದರೆ ಸೋಲುತ್ತಾರೆ ಎಂದು ಕಾಂಗ್ರೆಸ್‌ ಮುಖಂಡರೇ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.ಸಿದ್ದೇಶ್ವರ ಹಫ್ತಾ ವಸೂಲಿ ಮಾಡಿ ಜೀವನ ನಡೆಸಬೇಕಾಗಿಲ್ಲ. ಅದರ ಅಗತ್ಯವೂ ಇಲ್ಲ. ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ರಾಘವೇಂದ್ರ ನಾಯ್ಕ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು ಮತ್ತೊಬ್ಬರ ತಟ್ಟೆಯಲ್ಲಿ ನೋಣ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.ಸಿದ್ದೇಶ್ವರ ಅವರು ಸಂಸತ್‌ನಲ್ಲಿ ಪ್ರಶ್ನೆಯನ್ನೇ ಕೇಳಿಲ್ಲ, ಅನುದಾನ ತಂದಿಲ್ಲ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ಅನುದಾನವೇ ಹಾಗೆಯೇ ಹರಿದು ಬರುವಂತೆ ಇದ್ದರೆ ಲೋಕಸಭಾ ಸದಸ್ಯರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಬೇಕು ಎಂದು ಅವರು, ಕಾಂಗ್ರೆಸ್‌ ಮುಖಂಡರು ಪ್ರತಿ ಬಾರಿಯೂ ನಾವು 15 ಸಾವಿರ ಆಶ್ರಯ ಮನೆ ಕಟ್ಟಿಸಿಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆ ಮನೆಗಳನ್ನು ಇವರೇನು ವಿಶೇಷ ಒತ್ತು ನೀಡಿ ತಂದಿಲ್ಲ. ರಾಜ್ಯದ ಎಲ್ಲ ಭಾಗಕ್ಕೂ ನೀಡಿದಂತೆಯೇ ದಾವಣಗೆರೆಗೂ ಆಶ್ರಯ ಮನೆಗಳು ಮಂಜೂರಾಗಿವೆ ಎಂದು ಹೇಳಿದರು.ಶಾಮನೂರು ಶಿವಶಂಕರಪ್ಪ ಸದನದಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದನ್ನು ಜನರಿಗೆ ಬಹಿರಂಗ ಪಡಿಸಲಿ. ಅಪಪ್ರಚಾರ ಮಾಡಿ ಗೆಲುವು ಸಾಧಿಸುವ ಬದಲು ನಿಜವಾಗಿ ಹೋರಾಟ ನಡೆಸಲಿ ಎಂದು ಆಗ್ರಹಿಸಿದರು.ಲಕ್ಷ್ಮೀ ಫ್ಲೋರ್‌ ಮಿಲ್‌ಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ 30 ಸಾವಿರ ಅಡಿಯಷ್ಟು ರಸ್ತೆಯನ್ನೇ ಒತ್ತುವರಿ ಮಾಡಿ ಕಾಂಪೌಂಡ್‌ ನಿರ್ಮಿಸಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅಥವಾ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ ಒತ್ತುವರಿ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಲಿ. ಆ ಕೂಡಲೇ ಲಕ್ಷ್ಮೀ ಫ್ಲೋರ್‌ ಮಿಲ್‌ನಿಂದ ನಡೆದ ರಸ್ತೆ ಒತ್ತುವರಿ ಹಾಗೂ ಕುಂದುವಾಡ ಕೆರೆಯ ಬಳಿ ಎರಡು ಎಕರೆ ಒತ್ತುವರಿ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಂಡಜ್ಜಿ ಜಯಪ್ರಕಾಶ, ಕೆ.ಓಂಕಾರಪ್ಪ, ರಾಮಚಂದ್ರ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.