ಗುರುವಾರ , ಅಕ್ಟೋಬರ್ 17, 2019
26 °C

ರಸ್ತೆ ಕುಸಿತ: ಸಂಚಾರಕ್ಕೆ ಅಡ್ಡಿ

Published:
Updated:

ಬೆಂಗಳೂರು: ಲಾಲ್‌ಬಾಗ್‌ನ ಪಶ್ಚಿಮ ದ್ವಾರದ ಬಳಿ ಉಂಟಾದ ರಸ್ತೆ ಕುಸಿತದಿಂದಾಗಿ ದೊಡ್ಡ ಹಳ್ಳ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಡಕಾದ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಬೆಳಿಗ್ಗೆ 10.30ರ ಸುಮಾರಿಗೆ ಹಠಾತ್ತನೆ ರಸ್ತೆ ಕುಸಿತಗೊಂಡಿದ್ದರಿಂದ ಸುಮಾರು ಎಂಟು ಅಡಿ ಹಳ್ಳ ಬಿದ್ದಿದ್ದು ವಾಹನ ಸವಾರರು ಆತಂಕಗೊಂಡರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಹಳ್ಳದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪಕ್ಕದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಎಂ.ಸಿ. ಪ್ರಕಾಶ್ ಮಾತನಾಡಿ ಹತ್ತಿರದಲ್ಲಿ ಕೆರೆ ಇರುವುದರಿಂದ ಮಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿ ಘಟನೆ ಸಂಭವಿಸಿರಬಹುದು. ರಾತ್ರಿಯಿಂದಲೇ ದುರಸ್ತಿ ಕಾರ್ಯ ಆರಂಭಿಸಿ ಸೋಮವಾರ ಬೆಳಿಗ್ಗೆಯೊಳಗೆ ವಾಹನ ಸಂಚಾರವನ್ನು ಸುಗಮಗೊಳಿಸುವುದಾಗಿ ತಿಳಿಸಿದರು.ಈ ರಸ್ತೆಯಲ್ಲಿ ಪ್ರತಿದಿನ ಹೆಚ್ಚು ಪ್ರಯಾಣಿಕರು ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದರು. ಆದರೆ ಇಂದು ಭಾನುವಾರವಾದ್ದರಿಂದ ಸಂಚಾರ ಕಡಿಮೆಯಿದ್ದು ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಸೋಮವಾರ ಸಂಚಾರ ವ್ಯವಸ್ಥೆಗೆ ತೊಡಕಾಗುವ ಸಾದ್ಯತೆ ಇದೆ ಎಂದು ಪೊಲೀಸರು ಅವಮಾನ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಸಿವಿಲ್ ಎಂಜಿನಿಯರ್ ಶ್ರೀನಿವಾಸ್ ಮಾತನಾಡಿ ನಗರದಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋದಂತಹ ದೊಡ್ಡ ಕಾಮಗಾರಿಗಳಿಂದ ಬೃಹತ್ ಗಾತ್ರದ ವಾಹನಗಳು ಸಂಚಾರ ನಡೆಸುತ್ತಿವೆ ಆದರೆ ಘಟನೆಗೆ ಇದೇ ಕಾರಣವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.

Post Comments (+)