ರಸ್ತೆ, ಗಟಾರಕ್ಕೆ ಸೇರುತ್ತಿದೆ ನಲ್ಲಿ ನೀರು!

7

ರಸ್ತೆ, ಗಟಾರಕ್ಕೆ ಸೇರುತ್ತಿದೆ ನಲ್ಲಿ ನೀರು!

Published:
Updated:

ಮುಂಡರಗಿ: ಪುರಸಭೆ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ದಿನನಿತ್ಯ ಸಾರ್ವಜನಿಕರಿಗೆ ಪೂರೈಸುತ್ತಿರುವ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಪುರಸಭೆ ಮತ್ತು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳು ಜಲ ನಿರ್ವಹಣೆ ಮತ್ತು ರಕ್ಷಣೆ ಕುರಿತಂತೆ ಸಂಪೂರ್ಣವಾಗಿ ವಿಫಲವಾಗಿವೆ.ಪಟ್ಟಣದಲ್ಲಿ ವಾಣಿಜ್ಯ ಮತ್ತು ಗೃಹ ಬಳಕೆಗಾಗಿ ನೀರಿನ ಪ್ರತ್ಯೇಕ ಸಂಪರ್ಕ ಪಡೆದಿರುವ ಶೇ 80ರಷ್ಟು ಜನರು ತಮ್ಮ ನಲ್ಲಿಗಳಿಗೆ ನಳ   (ಟ್ಯಾಪ್) ಗಳನ್ನು ಅಳವಡಿಸದೆ ಇರುವುದರಿಂದ ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ದಿನನಿತ್ಯ ಸಾರ್ವಜನಿಕರಿಗಾಗಿ ವಿತರಿಸುತ್ತಿರುವ ಸುಮಾರು ಅರ್ಧ ಪ್ರಮಾಣದಷ್ಟು ಅಮೂಲ್ಯವಾದ ನೀರು ವ್ಯರ್ಥವಾಗಿ ಹರಿದು ಗಟಾರು ಅಥವಾ ರಸ್ತೆಗಳ ಪಾಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಪಟ್ಟಣದ ಬಹುತೇಕ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿದ್ದ ನಲ್ಲಿಗಳನ್ನು ಬಿಟ್ಟು ಸ್ವಂತ ಬಳಕೆಗೆ ಪುರಸಭೆಯಿಂದ ಪ್ರತ್ಯೇಕವಾಗಿ ನೀರಿನ ಸಂಪರ್ಕ ಪಡೆದುಕೊಂಡಿದ್ದು, ಎಲ್ಲರ ಮನೆಗಳ ಮುಂದೆ ನಲ್ಲಿಗಳು ರಾರಾಜಿಸುತ್ತಿವೆ. ಸಾರ್ವಜನಿಕರು ತಮ್ಮ ಸ್ವಂತ ನಲ್ಲಿಗಳಿಗೆ ಟ್ಯಾಪ್‌ಗಳನ್ನು ಅಳವಡಿಸದೇ ಇರುವುದರಿಂದ ಪುರಸಭೆಯವರು ಪೂರೈಸುವ ಅಪಾರ ಪ್ರಮಾಣದ ನೀರು ಗಟಾರು ಸೇರುತ್ತಲಿದೆ.ಅನಿಶ್ಚಿತ ಮಳೆ ಮತ್ತು ಏರುತ್ತಿರುವ ತಾಪಮಾನದಿಂದಾಗಿ ಬರಲಿರುವ ವರ್ಷಗಳಲ್ಲಿ ಜಗತ್ತಿನಾದ್ಯಂತ ಜನರು ನೀರಿಗಾಗಿ ಹಾಹಾಕಾರ ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಇಂದಿನಿಂದಲೇ ನೀರಿನ ಮಿತಬಳಕೆಯ ಜೊತೆಗೆ ಜಲ ಸಂಪನ್ಮೂಲಗಳನ್ನು ರಕ್ಷಿಸಬೇಕಾದ ಅಗತ್ಯವಿದೆ.ಬೆರಳೆಣಿಕೆಯ ಸದಸ್ಯರನ್ನು ಹೊಂದಿರುವ ಪಟ್ಟಣದ ಸಣ್ಣ ಕುಟುಂಬಗಳು ದಿನನಿತ್ಯ ತೀರ ಅಲ್ಪ ಪ್ರಮಾಣದ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದು, ಅವರ ನಲ್ಲಿಗಳಿಗೆ ನಳಗಳಿಲ್ಲದ್ದರಿಂದ ಮುಂಜಾನೆಯಿಂದ ಮಧ್ಯಾಹ್ನದವರೆಗೂ ನಲ್ಲಿಗಳಲ್ಲಿ ನೀರು ಧಾರಾಕಾರವಾಗಿ ಹರಿದು ಹೋಗುತ್ತದೆ.ನದಿ ದಂಡೆಯ ಗ್ರಾಮಗಳನ್ನು ಹಾಗೂ ದೊಡ್ಡ ಕೆರೆಗಳನ್ನು ಹೊಂದಿರುವ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಹೊರತುಪಡಿಸಿ ತಾಲ್ಲೂಕಿನ ಇನ್ನುಳಿದ ಗ್ರಾಮಗಳು ಜಲ ಸಂಪನ್ಮೂಲ ಕೊರತೆಯಿಂದ ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ.

 

ಅದಕ್ಕೆ ವಿರುದ್ಧವಾಗಿ ನದಿ ದಂಡೆಯ ಮೇಲಿರುವ ಕೆಲವು  ಗ್ರಾಮಗಳಲ್ಲಿ ಹೇರಳವಾದ ಜಲ ಸಂಪನ್ಮೂಲವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ನೀರನ್ನು ವ್ಯರ್ಥಮಾಡುವ ಪ್ರವೃತ್ತಿ ಜನಸಾಮಾನ್ಯರಲ್ಲಿ ಹೆಚ್ಚಾಗತೊಡಗಿದೆ.ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಇರುವ ನಲ್ಲಿಗಳನ್ನು ಒಳಗೊಂಡಂತೆ ಸಾರ್ವಜನಿಕರು ಖಾಸಗಿಯಾಗಿ ಪಡೆದುಕೊಂಡಿರುವ ತಮ್ಮ ಸ್ವಂತ ನಲ್ಲಿಗಳಿಗೆ ಕಡ್ಡಾಯವಾಗಿ ನಳಗಳನ್ನು ಜೋಡಿಸಬೇಕು. ಈ ಕುರಿತಂತೆ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.

 

ಗ್ರಾಮೀಣ ಭಾಗಗಳಲ್ಲಿಯೂ ಗ್ರಾಮ ಪಂಚಾಯ್ತಿಯವರು ಪೂರೈಸುತ್ತಿರುವ ಅಪಾರ ಪ್ರಮಾಣದ ನೀರನ್ನು ಜನರು ವ್ಯರ್ಥ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಲ್ಲಿ ನೀರಿನ ಮಹತ್ವ ಕುರಿತು ತಿಳಿವಳಿಕೆ ನೀಡಬೇಕಿದೆ. ನೀರು ಪೂರೈಕೆಯಂತಹ ಮೂಲ ಸೌಲಭ್ಯಗಳನ್ನು ಸರ್ಕಾರ ಖಾಸಗಿಯವರಿಗೆ ವಹಿಸುವ ಕುರಿತಂತೆ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅದರ ಸಾಧಕ ಬಾಧಕಗಳ ಕುರಿತು ಸಾರ್ವಜನಿಕರಲ್ಲಿ ತೀವ್ರ ಚರ್ಚೆ ನಡೆದಿರುವ ಈ ಸಂದರ್ಭದಲ್ಲಿ ನೀರು ಪೂರೈಕೆ, ಬಳಕೆಗಳನ್ನು ಕುರಿತಂತೆ ಜನಸಾಮಾನ್ಯರು ತಮ್ಮ ಕರ್ತವ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ.ನೀರು ಬಾರದಿದ್ದಾಗ ಬೊಬ್ಬೆ ಹಾಕುವ ಜನರು ತಮ್ಮ ನಲ್ಲಿಯಿಂದ ದಿನನಿತ್ಯ ವ್ಯರ್ಥವಾಗಿ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಕುರಿತು ಚಿಂತಿಸಬೇಕು. ಜಲ ರಕ್ಷಣೆಯ ಮೊದಲ ಹೆಜ್ಜೆಯಾಗಿ ಎಲ್ಲ ಜನರು ತಮ್ಮ ನಲ್ಲಿಗಳಿಗೆ ಕಡ್ಡಾಯವಾಗಿ ನಳಗಳನ್ನು ಜೋಡಿಸಿಕೊಳ್ಳುವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry