ಮಂಗಳವಾರ, ಮಾರ್ಚ್ 9, 2021
18 °C
ಟೋಲ್‌ ದರ ಹೆಚ್ಚಳಕ್ಕೆ ಮುಂದುವರಿದ ಆಕ್ರೋಶ

ರಸ್ತೆ ತಡೆ, ಕಲ್ಲು ತೂರಾಟ: 400 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ತಡೆ, ಕಲ್ಲು ತೂರಾಟ: 400 ಮಂದಿ ಬಂಧನ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎನ್‌ಎಚ್‌7ರಲ್ಲಿ ಟೋಲ್‌ ದರ ಹೆಚ್ಚಳ ಮಾಡಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೇರಿ­ದಂತೆ ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ಟೋಲ್‌ ಕೇಂದ್ರಗಳಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದರು.ಬೆಳಿಗ್ಗೆ 10.30ರ ಸುಮಾರಿಗೆ ಸಾದರಹಳ್ಳಿ ಗೇಟ್, ದೇವನಹಳ್ಳಿ ಹಾಗೂ ಯಲಹಂಕ ಕಡೆಯಿಂದ ತಂಡೋಪ ತಂಡವಾಗಿ ಬಂದ ಪ್ರತಿಭಟನಾಕಾರರು ಟೋಲ್‌ ಸಂಗ್ರಹ ಕೇಂದ್ರಗಳ ಕಡೆಗೆ ಧಾವಿಸಿದರು. ಈ ವೇಳೆಗಾಗಲೇ ಕೆಲ ಟ್ಯಾಕ್ಸಿ ಚಾಲಕರು ಸೇರಿದಂತೆ ಇತರೆ ಸರಕು ಸಾಗಣೆ ವಾಹನಗಳ ಸವಾರರು ಹೆಚ್ಚಿನ ಟೋಲ್‌ ಶುಲ್ಕ ನೀಡುವುದಿಲ್ಲ ಎಂದು ನವಯುಗ ಕಂಪೆನಿಯ ಸಿಬ್ಬಂದಿ ಜತೆ ಜಗಳಕ್ಕೆ ಇಳಿದಿದ್ದರು.ಅಲ್ಲದೆ, ಟೋಲ್‌ ಕೇಂದ್ರದ ದ್ವಾರಗಳಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಯನ್ನೂ ಆರಂಭಿಸಿದ್ದರು. ಇದರಿಂದಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರವೂ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.ನವಯುಗ ಕಂಪೆನಿಯ ಸಿಬ್ಬಂದಿ ಜತೆಗಿನ ಅರ್ಧ ತಾಸಿನ ವಾಗ್ವಾದದ ನಂತರ ರೊಚ್ಚಿಗೆದ್ದ ಪ್ರತಿಭಟನಾಕಾರರು, ಬಿಎಂಟಿಸಿ ಬಸ್‌ ಹಾಗೂ ಟೋಲ್‌ ಕೇಂದ್ರದ ಕಡೆಗೆ ಕಲ್ಲು ತೂರಿದರು. ಆಗ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಸುಮಾರು 400 ಕಾರ್ಯಕರ್ತರನ್ನು ಬಂಧಿಸಿದರು.‘400 ಪ್ರತಿಭಟನಾಕಾರರನ್ನು ಬಂಧಿಸಿ ಥಣಿಸಂದ್ರ ಸಮೀಪದ ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಆರ್‌) ಮೈದಾನಕ್ಕೆ ಕರೆದೊಯ್ಯಲಾಯಿತು. ನಂತರ ಅವರಿಂದ ಮುಚ್ಚಳಿಕೆ ಬರೆಸಿ­ಕೊಂಡು ಮಧ್ಯಾಹ್ನ 3.30ರ ಸುಮಾರಿಗೆ ಬಿಡುಗಡೆ ಮಾಡಲಾ­ಯಿತು. ಟೋಲ್‌ ಕೇಂದ್ರಗಳ ಬಳಿ ಬೆಳಿಗ್ಗೆ 300 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ಸಂಖ್ಯೆಯನ್ನು ಪುನಃ ಹೆಚ್ಚಿಸುವ ಮೂಲಕ ಭದ್ರತೆಯನ್ನು ಬಿಗಿಗೊಳಿಸಲಾಗುವುದು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಆರ್.ಅಶೋಕ ಮಾತನಾಡಿ, ‘ನವಯುಗ ಕಂಪೆನಿಯು ಈಗಾಗಲೇ ಮೂರು ಸಲ ಟೋಲ್‌ ಶುಲ್ಕ ಹೆಚ್ಚಿಸಿದೆ. ಈ ಬಾರಿ ಮೂರ್ನಾಲ್ಕು ಪಟ್ಟು ಏರಿಸಿರುವುದು  ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಸರ್ಕಾರ  ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಿತು. ವಿದ್ಯುತ್‌  ಕಡಿತ ಮಾಡಿತು. ಅಲ್ಲದೆ, ನವಯುಗ ಕಂಪೆನಿ ಜತೆ ಸೇರಿಕೊಂಡು ಟೋಲ್‌ ವಸೂಲಿ ಮೂಲಕ ಹಗಲು ದರೋಡೆ ಆರಂಭಿಸಿತು’ ಎಂದು ಆರೋಪಿಸಿದರು.ಬಿಜೆಪಿ ಮಖಂಡ ಬಿ.ಎನ್‌.ಬಚ್ಚೇಗೌಡ ಮಾತನಾಡಿ, ‘ಟೋಲ್‌ ಕೇಂದ್ರದ ಮೂಲಕ ಒಮ್ಮೆ ಹಾದು ಹೋಗಲು ನೂರಾರು ರೂಪಾಯಿ ಪಾವತಿಸಬೇಕೆಂದರೆ ಜನಸಾಮಾನ್ಯರ ಪಾಡೇನು. ಯಾವ ಆಧಾರದಲ್ಲಿ ಈ ಪ್ರಮಾಣದಲ್ಲಿ ಟೋಲ್‌ ಶುಲ್ಕ ಹೆಚ್ಚಳ ಮಾಡಲಾಗಿದೆ. ಸರ್ವಿಸ್‌ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದರೆ ರಾಷ್ಟ್ರೀಯ ಹೆದ್ದಾರಿಯ ಅಗತ್ಯವಿಲ್ಲ’ ಎಂದರು.ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ‘ಸಾಲ ಮಾಡಿ ವಾಹನಗಳನ್ನು ಖರೀದಿಸುವ ಸಾರ್ವಜನಿಕರು, ಆ ವಾಹನ ಬಳಸಲು ಟೋಲ್‌ ರೂಪದಲ್ಲಿ ಹಣ ನೀಡಬೇಕೆಂಬುದು ಯಾವ ನ್ಯಾಯ. ಇಷ್ಟೆಲ್ಲ ಹೋರಾಟಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ನವಯುಗ ಕಂಪೆನಿ ನೀಡುವ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಟೋಲ್‌ ವಸೂಲಿಯನ್ನು ರದ್ದು ಮಾಡದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ಸಣ್ಣೀರಪ್ಪ ಮಾತನಾಡಿ, ‘ನವಯುಗ ಕಂಪೆನಿಯು 2010ರಲ್ಲಿ ಟೋಲ್‌ ಸಂಗ್ರಹಿಸುವಾಗಲೇ ಪ್ರತಿಭಟನೆ ಮಾಡಲಾಗಿತ್ತು. ಆದರೆ, ಆಗಿನ ಬಿಜೆಪಿ ಸರ್ಕಾರ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಇದರಿಂದಾಗಿ ಮತ್ತೆ ಬೀದಿಗಿಳಿಯಬೇಕಾದ ಅನಿವಾರ್ಯತೆ ಬಂದಿದೆ. ಖಾಸಗಿ ಕಂಪೆನಿಗಳ ಜತೆ ಸೇರಿಕೊಂಡಿರುವ ಸರ್ಕಾರ, ರಸ್ತೆ ಅಭಿವೃದ್ಧಿ ಹಾಗೂ ಸುಗಮ ಸಂಚಾರದ ನೆಪದಲ್ಲಿ ‘ಟೋಲ್‌ ಸಂಗ್ರಹ’ ಎಂಬ ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ಜಾರಿಗೆ ತಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಹನ ಸಂಖ್ಯೆ ಹೆಚ್ಚಾದರೂ ದರ ಏರಿಕೆ

‘ಲೋಕಸಭೆ ಚುನಾವಣೆ ನಂತರ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್‌ ದರ ಹೆಚ್ಚಿಸಲಾಗಿದೆ.  ನಿಯಮಗಳ ಪ್ರಕಾರ ಶೇಕಡ 12.5ಕ್ಕಿಂತ ವಾಹನಗಳ ಸಂಖ್ಯೆ ಹೆಚ್ಚಾದರೆ ಟೋಲ್‌ ದರ ಕಡಿಮೆಯಾಗ­ಬೇಕು. ಆದರೆ, ಈ ಹೆದ್ದಾರಿಯಲ್ಲಿ ಶೇಕಡ 40ಕ್ಕಿಂತ ವಾಹನಗಳ ಸಂಖ್ಯೆ ಹೆಚ್ಚಾದರೂ ದರ ಹೆಚ್ಚಿಸಲಾಗಿದೆ. ದಿಢೀರನೆ ನಾಲ್ಕೈದು ಪಟ್ಟು ದರ ಹೆಚ್ಚಿಸುವ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ ಸಂಶಯ ಮೂಡಿಸಿದೆ. ಈ ರೀತಿಯ ಒಪ್ಪಂದಗಳಿಂದಲೇ ಚುನಾವಣೆ ವೆಚ್ಚವನ್ನು ಕಾಂಗ್ರೆಸ್‌ ನಿಭಾಯಿಸಿರಬಹುದು’

ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್ಆಸ್ಕರ್‌ ಮಧ್ಯಪ್ರವೇಶಕ್ಕೆ ಆಗ್ರಹ

ಬೆಂಗಳೂರು
: ‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್‌ ದರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್‌ ಫರ್ನಾಂಡಿಸ್‌ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಸಂಸದ ಅನಂತ ಕುಮಾರ್‌ ಮನವಿ ಮಾಡಿದ್ದಾರೆ.ಈ ಸಂಬಂಧ ಆಸ್ಕರ್‌ ಅವರಿಗೆ ಮಂಗಳವಾರ ಪತ್ರ ಬರೆದಿರುವ ಅವರು, ‘ಟೋಲ್‌ ಶುಲ್ಕವನ್ನು ಶೇ 100ರಿಂದ ಶೇ 380ರ ವರೆಗೆ ಏರಿಸಿರುವುದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇವನಹಳ್ಳಿ ಆಸುಪಾಸಿನ ಜನರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಪರ್ಯಾಯ ಮಾರ್ಗಗಳೇ ಇಲ್ಲ. ಪ್ರತಿನಿತ್ಯದ ಚಟುವಟಿಕೆಗಳಿಗೆ ತೆರಳುವಾಗ ದುಬಾರಿ ಮೊತ್ತ ತೆತ್ತು ಅವರು ಈಗ ಸಂಚರಿಸುತ್ತಿದ್ದಾರೆ’ ಎಂದು ಗಮನ ಸೆಳೆದಿದ್ದಾರೆ.‘ಬಿಎಂಟಿಸಿ ಕೆಲವು ದಿನಗಳ ಹಿಂದೆ ಬಸ್‌ ಪ್ರಯಾಣ ದರ ಏರಿಸಿತ್ತು. ಈಗ ಟೋರ್‌ ದರ ಏರಿಕೆ ಹೊರೆಯನ್ನೂ ಪ್ರಯಾಣಿಕರಿಗೆ ವರ್ಗಾಯಿಸಲು ಮುಂದಾ­­­ಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಹಾಗೂ ಪ್ರಯಾಣಿಕರ ದೃಷ್ಟಿಯಿಂದ ಟೋಲ್‌ ದರ ಇಳಿಸಬೇಕು’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.ಟೋಲ್‌: ಹೆಚ್ಚಳಕ್ಕೆ ಆಸ್ಕರ್‌ ಸಮರ್ಥನೆ

ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ದರ ಏರಿಕೆಯನ್ನು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್‌ ಫರ್ನಾಂಡಿಸ್‌್ ಸಮರ್ಥಿಸಿಕೊಂಡಿದ್ದಾರೆ.ನಿಯಮದಂತೆಯೇ  ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಆ ಪ್ರಕಾರವೇ  ಟೋಲ್‌ ದರ ಸಂಗ್ರಹ ಮಾಡುತ್ತಿರು­ವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ  ತಿಳಿಸಿದ್ದಾರೆ.‘ಸಾರ್ವಜನಿಕ–ಖಾಸಗಿ ಸಹ­ಭಾಗಿತ್ವದಲ್ಲಿ ಈ ರಸ್ತೆ ನಿರ್ಮಿಸಲಾಗಿದೆ.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ

(ಎನ್‌ಎಸ್‌ಎಐ) ಜತೆ ಮಾಡಿಕೊಂಡ ಒಪ್ಪಂದದ ಪ್ರಕಾರವೇ ಖಾಸಗಿ ಕಂಪೆನಿಗೆ ಟೋಲ್‌್ ಸಂಗ್ರಹಿಸಲು ಅವಕಾಶ ನೀಡಲಾಗಿದೆ’ ಎಂದಿದ್ದಾರೆ.‘1956ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಸೆಕ್ಷನ್‌ 9ರ ಪ್ರಕಾರ ಕೇಂದ್ರ ಸರ್ಕಾರ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿಗದಿ ಮತ್ತು ಸಂಗ್ರಹ) ನಿಯಮಾವಳಿ ಪ್ರಕಾರ,  ಕಾಮಗಾರಿಗೆ ತಗು­ಲಿದ ವೆಚ್ಚವನ್ನು ಆಧರಿಸಿ ಬಳಕೆದಾರರ ಶುಲ್ಕ ನಿಗದಿ ಮಾಡಲಾಗಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಇಡೀ ಯೋಜನೆಗೆ  ₨680 ಕೋಟಿ ವೆಚ್ಚವಾಗಿದೆ. ಆರು ಪಥಗಳಿರುವ 22 ಕಿ.ಮೀ ಉದ್ದದ ಈ ರಸ್ತೆಯಲ್ಲಿ 4.9 ಕಿ.ಮಿ ಮೇಲುರಸ್ತೆ ಇದೆ. ಈ ಎಲ್ಲ ಅಂಶಗಳನ್ನು ಪರಿಗ­ಣಿಸಿದರೆ ಶುಲ್ಕದ ಪ್ರಮಾಣ ಖಂಡಿತ­ವಾಗಿಯೂ ಹೆಚ್ಚಾಗುತ್ತದೆ’ ಎಂದೂ ಅವರು ವಿವರಿಸಿದ್ದಾರೆ.2008ಕ್ಕೆ ಮುನ್ನ, ರಸ್ತೆಯ ಉದ್ದ­ಆಧರಿಸಿ ಟೋಲ್‌ ನಿಗದಿ ಮಾಡ­ಲಾ­ಗುತ್ತಿತ್ತು. ಆದರೆ ಈ ನಿಯಮಕ್ಕೆ 2010 ಹಾಗೂ 2011ರಲ್ಲಿ ತಿದ್ದುಪಡಿ ತರ­ಲಾಯಿತು.  ಆದರೂ, ರಾಷ್ಟ್ರೀಯ ಹೆದ್ದಾರಿ 7ರ ಹೆಬ್ಬಾಳ–ದೇವನಹಳ್ಳಿ ಮಾರ್ಗಕ್ಕೆ ಈ ನಿಯಮ ಅನ್ವಯವಾಗಿರಲಿಲ್ಲ.  ಆದರೆ, ಸಗಟು ಬೆಲೆ ಸೂಚ್ಯಂಕ ಪ್ರಕಾರ ಪ್ರತಿ ವರ್ಷ ಏಪ್ರಿಲ್‌ ಒಂದರಂದು ವಿಮಾನ ನಿಲ್ದಾಣ ರಸ್ತೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ.ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಹಾಗೂ ಹಸ್ತಾಂತರ (ಡಿಬಿಎಫ್‌ಒಟಿ) ಆಧಾರದಲ್ಲಿ ಈ ಕಾಮಗಾರಿಯನ್ನು ನವಯುಗ ಎಂಜಿನಿಯ­ರಿಂಗ್‌ ಕಂಪೆನಿ ಲಿಮಿಟೆಡ್‌ಗೆ  ವಹಿಸಲಾಗಿತ್ತು. ಎರಡು ವರ್ಷಗಳ ನಿರ್ಮಾಣ ಅವಧಿ ಸೇರಿದಂತೆ 20 ವರ್ಷಗಳವರೆಗೆ  ಟೋಲ್‌ ಸಂಗ್ರಹಿ­ಸಲು ಕಂಪೆನಿಗೆ ಅವಕಾಶ ನೀಡಲಾಗಿತ್ತು.ಈ ವರ್ಷದ ಆರಂಭದಲ್ಲಿ ಕಾಮಗಾರಿ ಪೂರ್ಣಗೊಂಡ ಕಾರಣ, ಪರಿಷ್ಕೃತ ಟೋಲ್‌ ದರಕ್ಕೆ  ಏಪ್ರಿಲ್‌ 24ರಂದು ಹೆದ್ದಾರಿ ಪ್ರಾಧಿಕಾರ ಅನು­ಮೋದನೆ ನೀಡಿತ್ತು. ಅಲ್ಲದೇ, 2014ರ ಮೇ 1ರಿಂದ   ಟೋಲ್‌ಸಂಗ್ರಹಿಸಲು ಕಂಪೆನಿಗೆ ಅನುಮತಿ ನೀಡಲಾಗಿದೆ.‘ಟೋಲ್‌್ ದರ ದುಬಾರಿ ಎನಿಸಿ­ದರೂ,  ಬಳಕೆದಾರರಿಗೆ ಅನು­ಕೂಲ­ವಾಗಿದೆ.  ಹೆಬ್ಬಾಳದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿ ಒಂದು ತಾಸಿನಿಂದ 20 ನಿಮಿಷಕ್ಕೆ ಇಳಿದಿದೆ’ ಎಂದೂ ಅಧಿಕಾರಿ ಹೇಳಿದ್ದಾರೆ.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.