ಗುರುವಾರ , ಜನವರಿ 23, 2020
22 °C
ಮರಳು ಸಾಗಣೆಗೆ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ

ರಸ್ತೆ ತೆರವಿಗೆ ಮುಂದಾದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ತೆರವಿಗೆ ಮುಂದಾದ ಅಧಿಕಾರಿಗಳು

ಯಾದಗಿರಿ: ಜಿಲ್ಲೆಯಲ್ಲಿ ಹರಿದಿರುವ ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರುಗಳು ಕೇಳಿ ಬರುತ್ತಲೇ ಇವೆ. ಇದರ ಮಧ್ಯೆಯೇ ಜಿಲ್ಲೆಯ ಹಯ್ಯಾಳ ಬಿ. ಗ್ರಾಮದಿಂದ ಪಕ್ಕದ ರಾಯಚೂರು ಜಿಲ್ಲೆಗೆ ಮರಳು ಸಾಗಣೆ ಮಾಡಲು ನದಿಗೆ ಅಡ್ಡಲಾಗಿ ರಸ್ತೆಯನ್ನೇ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.ಈ ರಸ್ತೆ ನಿರ್ಮಾಣಕ್ಕೆ ಕೃಷ್ಣಾ ಭಾಗ್ಯ ಜಲನಿಗಮದಿಂದ ಒಂದು ವರ್ಷದ ಅವಧಿಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾದಗಿರಿ ಜಿಲ್ಲಾಡಳಿತ ಮಾತ್ರ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಿಯೇ ಇಲ್ಲ. ಮರಳು ಸಾಗಣೆಗಾಗಿ ಕೃಷ್ಣಾ ನದಿಯ ನೀರಿನ ಹರಿವಿಗೂ ತಡೆ ಒಡ್ಡಿದಂತಾಗಿದೆ.ರಾಯಚೂರು ಜಿಲ್ಲೆಯ ಕೋಣಚಪ್ಪಲಿ ಗ್ರಾಮದ ಬ್ಲಾಕ್‌ ನಂ. 4 ರಿಂದ ಯಾದಗಿರಿ ಜಿಲ್ಲೆಯ ಹಯ್ಯಾಳ ಬಿ. ಗ್ರಾಮದವರೆಗೆ ಮರಳನ್ನು ಸಾಗಿಸಲು ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಖಾನಾಪೂರ ವಿಭಾಗದ ಅಧಿಕಾರಿಗಳು ಒಂದು ವರ್ಷದ ಅವಧಿಗೆ ಅನುಮತಿ ನೀಡಿದ್ದಾರೆ. ಆದರೆ ಅನುಮತಿ ನೀಡಿರುವ ಪತ್ರದಲ್ಲಿ ದಿನಾಂಕವನ್ನೇ ನಮೂದಿಸದೇ ಇರುವುದು ಹಲವಾರು ಅನುಮಾನ­ಗಳಿಗೆ ಎಡೆಮಾಡಿಕೊಟ್ಟಿದೆ.ಇನ್ನೊಂದೆಡೆ ರಾಯಚೂರು ಜಿಲ್ಲಾಧಿಕಾರಿ, ದೇವದುರ್ಗ ತಾಲ್ಲೂಕಿನ ಕೋಣಚಪ್ಪಲಿ ಗ್ರಾಮ­ದಲ್ಲಿ ನದಿಯ ಆಚೆಗೆ ರಸ್ತೆ ನಿರ್ಮಿಸಿ ಮರಳು ಸಾಗಣೆ ಮಾಡಲು ಅನುಮತಿ ನೀಡುವಂತೆ ರಾಯಚೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕಳೆದ ಜುಲೈ 4 ರಂದು ಪತ್ರ ಬರೆದಿದ್ದಾರೆ. ನದಿಯ ಆಚೆಗೆ ರಸ್ತೆ ನಿರ್ಮಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ ನದಿಯಲ್ಲಿಯೇ ರಸ್ತೆ ನಿರ್ಮಾಣ ಮಾಡುವ ಮೂಲಕ ಗುತ್ತಿಗೆದಾರರು ಸರ್ಕಾರದ ಸೂಚನೆ­ಯನ್ನೂ ಉಲ್ಲಂಘಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳ ಭೇಟಿ: ಹಲವಾರು ದಿನಗಳಿಂದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಸ್ತೆಯಲ್ಲಿ ಅವ್ಯಾಹತ­ವಾಗಿ ಮರಳು ಸಾಗಣೆ ಮಾಡ­ಲಾಗುತ್ತಿದೆ. ಈ ಬಗ್ಗೆ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಹಾಗೂ ಶಹಾಪುರ ತಹಶೀಲ್ದಾರ್‌ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ‘ಪ್ರಜಾವಾಣಿ’­ಯೊಂದಿಗೆ ಮಾತನಾಡಿದ ಶಹಾಪುರ ತಹಶೀಲ್ದಾರ್‌ ಡಿ.ವೈ.ಪಾಟೀಲ, ಹಯ್ಯಾಳ ಗ್ರಾಮದಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೊಣಚಪ್ಪಲಿ ಗ್ರಾಮದವರೆಗೆ ಕೃಷ್ಣಾ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಯಾದಗಿರಿ ಜಿಲ್ಲಾಡಳಿತವಾಗಲಿ, ಶಹಾಪುರ ತಾಲ್ಲೂಕು ಆಡಳಿತವಾಗಲಿ ಯಾವುದೇ ಅನುಮತಿ ನೀಡಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದವರು ಅನುಮತಿ ನೀಡಿದ್ದು, ಇದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ತೆರವು­ಗೊಳಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ತಾವು ಹಾಗೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್‌ ಮಹ್ಮದ್ ಸಿದ್ದಿಕಿ, ನಿಗಮದ ಹಿಂದಿನ ಎಂಜಿನಿಯರ್‌ ಈ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ನಿಗಮದ ಅಧೀಕ್ಷಕ ಎಂಜಿನಿಯರ್‌ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ರಸ್ತೆಯನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಮೇಲಧಿಕಾರಿ­ಗಳು ಇಂದೇ ಪತ್ರವನ್ನು ಫ್ಯಾಕ್ಸ್‌ ಮಾಡುತ್ತಿದ್ದು, ಅನುಮತಿ ಪಡೆದು ಕೂಡಲೇ ರಸ್ತೆತೆರವುಗೊಳಿಸುವುದಾಗಿ ಹೇಳಿದ್ದಾರೆ.ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಕೆಳಭಾಗದ ರೈತರಿಗೆ ನೀರು ಸರಿಯಾಗಿ ದೊರೆ­ಯುತ್ತಿಲ್ಲ. ಅಲ್ಲದೇ ಜಿಲ್ಲೆಯ ಮರಳನ್ನು ಅವ್ಯಾಹತವಾಗಿ ಸಾಗಣೆ ಮಾಡ­ಲಾಗುತ್ತಿದೆ. ಈ ರಸ್ತೆಯನ್ನು ತೆರವು­ಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ರಸ್ತೆ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ­ದ್ದಾರೆ.ರಸ್ತೆ ತೆರವುಗೊಳಿಸದೇ ಇದ್ದಲ್ಲಿ, ಹೋರಾಟ ನಡೆಸಲಾಗುವುದು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್‌. ಭೀಮುನಾಯಕ ಎಚ್ಚರಿಸಿ­ದ್ದಾರೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಶಾಂತಪ್ಪ ಟಕ್ಕಳಕಿ, ಕರವೇ ಕಾರ್ಯಕರ್ತರಾದ ಶಿವು­ಕುಮಾರ, ಅಬ್ದುಲ್‌ ಚಿಗಾನೂರ, ಮಹಾವೀರ ಲಿಂಗೇರಿ, ಮಲ್ಲು ವರ್ಕನಳ್ಳಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಜೆ.ಎಚ್‌. ನ್ಯಾಮಗೌಡ ಇದ್ದರು.

ಪ್ರತಿಕ್ರಿಯಿಸಿ (+)