ರಸ್ತೆ ದುರಸ್ತಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

7

ರಸ್ತೆ ದುರಸ್ತಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

Published:
Updated:

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಾಗವಲ್ಲಿ ಗ್ರಾಮದಲ್ಲಿ ಮಂಗಳವಾರ ರಸ್ತೆತಡೆ ನಡೆಸಿದರು.ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ, ಹೆಬ್ಬೂರು, ಗೂಳೂರು, ಬೆಳ್ಳಾವಿ, ಕಸಬಾ ಮತ್ತು ಊರ್ಡಿಗೆರೆ ಹೋಬಳಿಗಳ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಆದರೂ ದುರಸ್ತಿ ಮಾಡಿಸಿಲ್ಲ ಎಂದು ಆರೋಪಿಸಿದರು. ಹದಗೆಟ್ಟ ರಸ್ತೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.ಲೋಕೋಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರಸ್ತೆಗಳು ಮತ್ತು ಕೆಶಿಪ್ ನಿರ್ವಹಣೆ ಜವಾಬ್ದಾರಿ ಪಡೆದಿರುವ ತುಮಕೂರು- ಕುಣಿಗಲ್ ರಸ್ತೆಗಳಲ್ಲಿ ಮೊಳಕಾಲುದ್ದ ಗುಂಡಿ ಬಿದ್ದಿವೆ. ಮಳೆಗಾಲ ಬಂದಾಗ ಗ್ರಾಮಾಂತರ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸಂಚಾರವೂ ದುಃಸ್ತರವೆನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ರೂ. 500 ಕೋಟಿ ಮಂಜೂರು ಮಾಡಿದೆ ಎಂದು ಶಾಸಕರು ಹೇಳುತ್ತಾರೆ. ಕ್ಷೇತ್ರದಲ್ಲಿ ಯಾವುದೇ ಹೊಸ ಕಾಮಗಾರಿ ಪ್ರಾರಂಭವಾಗಿಲ್ಲ. ಮಂಜೂರಾದ ಹಣವನ್ನು ಶಾಸಕರು ಏನು ಮಾಡಿದರು ಎನ್ನುವುದೇ ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದರು.ಇನ್ನು 15 ದಿನದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗದಿದ್ದರೆ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಬೋರೇಗೌಡ, ರಾಮು, ವಿಜಯಕುಮಾರ್, ಹನುಮಂತೇಗೌಡ, ಮಂಜುನಾಥ್ ಉಪಸ್ಥಿತರಿದ್ದರು.ಕಾಮಗಾರಿ ಶೀಘ್ರ ಪ್ರಾರಂಭ:

ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಕೊರಟಗೆರೆ- ಬಾವಲಿ ರಸ್ತೆಯನ್ನು ಸಮಗ್ರ ಅಭಿವೃದ್ಧಿಗಾಗಿ ಕೆಶಿಪ್‌ಗೆ ವಹಿಸಬೇಕಾಗಿದೆ. ಶೀಘ್ರ ಗುಂಡಿಗಳನ್ನು ಮುಚ್ಚಿಸುವ ಭರವಸೆ ನೀಡಿದರು.ನಾಗವಲ್ಲಿ- ಹೊನ್ನುಡಿಕೆ ರಸ್ತೆಯನ್ನು ರೂ. 4.9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗುತ್ತಿಗೆದಾರರನ್ನು ಈಗಾಗಲೇ ಗುರುತಿಸಲಾಗಿದೆ. ಇನ್ನೆರೆಡು ದಿನದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ನಾಗವಲ್ಲಿ- ಸಿರವರ ರಸ್ತೆಯನ್ನು ರೂ. 4.9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಶೀಘ್ರ ನಾಗವಲ್ಲಿ ಗ್ರಾಮದಲ್ಲಿ ರಸ್ತೆ, ಚರಂಡಿಗೆ ಕಾಂಕ್ರಿಟ್ ಹಾಕಲಾಗುವುದು ಎಂದು ಭರವಸೆ ನೀಡಿದರು.ಕೇಂದ್ರದ ವಿರುದ್ಧ ಬಿಜೆಪಿ ಪ್ರತಿಭಟನೆ

ತುಮಕೂರು: ರಾಜ್ಯದ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ತಲೆದೋರಿದೆ. ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಪತ್ರ ರವಾನಿಸಿದರು.ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್, ಛತ್ತೀಸ್‌ಗಡ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವಿದ್ಯುತ್ ಖರೀದಿಸಿದ್ದರೂ ವಿದ್ಯುತ್ ಸಾಗಣೆ ಕಾರಿಡಾರ್‌ನಲ್ಲಿ ಆಂಧ್ರಕ್ಕೆ ಹೆಚ್ಚು ಆದ್ಯತೆ ಸಿಗುತ್ತಿರುವುದರಿಂದ ರಾಜ್ಯದ ವಿದ್ಯುತ್ ಕೊರತೆ ಪರಿಸ್ಥಿತಿ ಸುಧಾರಣೆ ಸಾಧ್ಯವಾಗಿಲ್ಲ ಎಂದರು.ರಾಜ್ಯದ ಶಾಖೋತ್ಪನ್ನ ಘಟಕಗಳಿಗೆ ನಾಗಪುರ, ತಲ್ಮೇರಾ, ಸಿಂಗರೇಣಿ ಗಣಿಗಳಿಂದ ಕಳೆದ 6 ತಿಂಗಳಿನಿಂದ ಅಗತ್ಯ ಪ್ರಮಾಣದ ಕಲ್ಲಿದ್ದಲು ಸರಬರಾಜಾಗುತ್ತಿಲ್ಲ. ಕೇಂದ್ರೀಯ ಸ್ಥಾವರಗಳಿಂದ ಒಟ್ಟು 1534 ಮೆಗಾ ವಾಟ್ ವಿದ್ಯುತ್ ನೀಡಬೇಕಿದ್ದ ಕೇಂದ್ರ ಸರ್ಕಾರ ಕೇವಲ 950 ಮೆಗಾ ವಾಟ್ ವಿದ್ಯುತ್ ನೀಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ತಲೆದೋರಿದೆ ಎಂದು ದೂರಿದರು.ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಛತ್ತೀಸ್‌ಗಡ, ಯಡ್ಲಾಪುರ, ಬಳ್ಳಾರಿ, ಜೇವರ್ಗಿಗಳಲ್ಲಿ ವಿದ್ಯುತ್ ಯೋಜನೆ ಪ್ರಾರಂಭಿಸುವ ಯತ್ನಗಳು ನಡೆದಿವೆ. ಆದರೆ ತಾಂತ್ರಿಕ ಅನುಮತಿ ಮತ್ತು ಕಲ್ಲಿದ್ದಲು ಪೂರೈಕೆ ಷರತ್ತುಗಳಲ್ಲಿ  ಕೇಂದ್ರ ತಡ ಮಾಡುತ್ತಿರುವುದರಿಂದ ಅನುಷ್ಠಾನ  ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ನೀತಿ ಅನುಸರಿಸುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಮುಖಂಡರು ಮೌನವಹಿಸಿ, ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ರುದ್ರೇಶ್, ನಗರಸಭೆ ಅಧ್ಯಕ್ಷೆ ಯಶೋಧಾ ಗಂಗಪ್ಪ, ಮುಖಂಡರಾದ ರಾಮಾಂಜಿನಪ್ಪ, ಪ್ರೇಮಾ ಹೆಗಡೆ, ಭೈರಪ್ಪ ಮತ್ತಿತರರು ಉಪಸ್ಥಿತರಿದ್ದರು.ವಿದೇಶಿ ಹಣ ವಾಪಸ್‌ಗೆ ಆಗ್ರಹ

ತುಮಕೂರು: ವಿದೇಶಿ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ತಕ್ಷಣ ದೇಶಕ್ಕೆ ವಾಪಸ್ ತರಬೇಕೆಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು.

 

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಶ್ರೀನಿವಾಸ್, ಜನರ ದುಡಿಮೆಯ ರೂ. 400 ಲಕ್ಷ ಕೋಟಿ ಹಣವನ್ನು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ರಷ್ಯ, ಜರ್ಮನಿ, ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಕಪ್ಪು ಹಣವನ್ನು ಬಚ್ಚಿಟ್ಟಿದ್ದಾರೆ. ಸ್ವಿಸ್ ಬ್ಯಾಂಕ್‌ನಲ್ಲಿದ್ದ ಹಣವನ್ನು ಚಾಣಾಕ್ಷತನದಿಂದ ಇತರ ದೇಶಗಳಿಗೆ ವರ್ಗಾಯಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತ ಗಮನವನ್ನೇ ಹರಿಸುತ್ತಿಲ್ಲ ಎಂದು ದೂರಿದರು.ಭಾರತೀಯರು ಇಟ್ಟಿರುವ ಹಣವನ್ನು ವಾಪಸ್ ನೀಡಲು ಸ್ವಿಸ್ ಬ್ಯಾಂಕ್ ಸಿದ್ಧವಾಗಿದ್ದರೂ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಎಲ್ಲ ಭಾರತೀಯರ ಹೆಸರು ಬಹಿರಂಗವಾಗಬೇಕು. ಸ್ವಿಡ್ಜರ್‌ಲ್ಯಾಂಡ್‌ಗೆ ಯಾತ್ರೆ ತೆರಳುವರ ಚಟುವಟಿಕೆ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದರು.ಮುಖಂಡರಾದ ರವಿಶರಣ್, ಅಭಿಷೇಕ್, ರೂಪೇಶ್, ಹರಿಪ್ರಸಾದ್, ಚೈತ್ರಾ, ಸವಿತಾ, ನವೀನ್, ಶಿವರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry