ಶುಕ್ರವಾರ, ಏಪ್ರಿಲ್ 16, 2021
31 °C

ರಸ್ತೆ ದುರಸ್ತಿಗೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಮಳೆಯಿಂದ ಹಾಗೂ ಕಳಪೆ ಕಾಮಗಾರಿಗಳಿಂದ ಸಂಪೂರ್ಣ ಕೆಟ್ಟು ಹೋಗಿರುವ ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ನಗರ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.ಡಾ.ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಸುಮಾರು ಅರ್ಧ ತಾಸು ವಾಹನಗಳ ಸಂಚಾರವನ್ನೂ ತಡೆದರು. ಹೋರಾಟ ಸಮಿತಿ ಮುಖಂಡ ಸಿದ್ದರಾಜ ಹೊಳಿ, ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಅರವಿಂದ ಕೊಪ್ಪ, ದ.ಸಂ.ಸ. ಧುರೀಣ ಡಿ.ಬಿ. ಮುದೂರ, ಜಯ ಕರ್ನಾಟಕ ಸಂಘಟನೆಯ ನಾರಾಯಣ ಮಾಯಾಚಾರಿ, ಬಿಎಸ್‌ಪಿಯ ಪಿ.ಬಿ.ಗೌಡರ, ವಕೀಲ ಪಿ.ಬಿ. ಮಾತಿನ, ವೆಂಕನಗೌಡ ಪಾಟೀಲ, ಎಸ್.ಎಂ.ನೆರಬೆಂಚಿ ಮಾತನಾಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಅವರಿಗೆ ಮನವಿ ಸಮರ್ಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಪರಿಹಾರ ಮತ್ತು ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರರು, 15 ದಿನದಲ್ಲಿ ತನಿಖೆ ನಡೆಸಿ ನಾಗರಿಕರ ಬೇಡಿಕೆ ಈಡೇರಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕನ್ನಡಪರ ಸಂಘಟನೆಗಳು, ಜಯಕರ್ನಾಟಕ, ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ, ಸಂಜೀವಿನಿ ಯುವಕ ಸಂಘ, ನಿಸರ್ಗ ಯುವಕ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.