ಭಾನುವಾರ, ಡಿಸೆಂಬರ್ 8, 2019
21 °C

ರಸ್ತೆ ದುರಸ್ತಿಗೆ ಉಪ್ಪಿ ಬೆಂಬಲ

Published:
Updated:
ರಸ್ತೆ ದುರಸ್ತಿಗೆ ಉಪ್ಪಿ ಬೆಂಬಲ

ಜನಲೋಕಪಾಲ್ ಮಸೂದೆ ಜಾರಿಗೆ ಅಣ್ಣಾ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದರೆ, ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ರೇಡಿಯೊ ಜಾಕಿಗಳು ಜೈಲು ಸೇರಿದ್ದಾರೆ! ಆಶ್ಚರ್ಯ ಪಡಬೇಡಿ, ಇವರು ನಿಜಕ್ಕೂ ಜೈಲಿಗೆ ಹೋಗಿಲ್ಲ; ಹೋಗಿರುವುದು ಕೃತಕ ಜೈಲಿಗೆ!`ಎದ್ದೇಳು ಬೆಂಗಳೂರು~ ಎಂಬ ಕಾರ್ಯಕ್ರಮದ ಅಂಗವಾಗಿ 92.7 ಬಿಗ್ ಎಫ್.ಎಂ. ವಾಹಿನಿಯು ಗರುಡಾ ಮಾಲ್‌ನಲ್ಲಿ `ಜೈಲ್ ದಿ ಜಾಕ್ಸ್~ ಹೆಸರಿನ ಕಾರ್ಯಕ್ರಮ ಆಯೋಜಿಸಿತ್ತು. ಕೃತಕ ಜೈಲ್ ನಿರ್ಮಿಸಿ ಅದರೊಳಗೆ ರೇಡಿಯೊ ಜಾಕಿಗಳಾದ ಹರ್ಷಾ, ಶ್ರುತಿ ಅವರನ್ನು ಕಳುಹಿಸಲಾಗಿತ್ತು.

 

ಸಂಜೆ 7.30ಕ್ಕೆ ಚಿತ್ರನಟ ಉಪೇಂದ್ರ ಬಂದು ಜಾಮೀನು ನೀಡಿ, ರಸ್ತೆಗಳನ್ನು ಸರಿಪಡಿಸುವ ಕಾರ್ಯಕ್ಕೆ ನನ್ನದು ಸಹಕಾರವಿದೆ ಎಂದು ಸಹಿ ಮಾಡುವ ಮೂಲಕ ಇಬ್ಬರು ರೇಡಿಯೊ ಜಾಕಿಗಳನ್ನು ಬಿಡುಗಡೆಗೊಳಿಸಿದರು.ಇದೊಂದು ಅಣುಕು ಪ್ರದರ್ಶನದಂತೆ ಕಂಡರೂ, ನಗರದ ಬಡಾವಣೆಗಳ ಕೆಲ ಹದಗೆಟ್ಟ ರಸ್ತೆಗಳನ್ನು ಸರ್ಕಾರ ಇಲ್ಲವೇ ಸಾರ್ವಜನಿಕರೇ ಜಾಗೃತಿವಹಿಸಿ ದುರಸ್ತಿಗೆ ಮುಂದಾಗಬೇಕು ಎಂಬುದನ್ನು ಮನವರಿಕೆ ಮಾಡಿಸುವಂತಿತ್ತು. ಕಾರ್ಯಕ್ರಮಕ್ಕೆ ಸಾಥ್ ನೀಡಲು ರಿಯಲ್ ಸ್ಟಾರ್ ಉಪೇಂದ್ರ ಬರುತ್ತಿದ್ದಂತೆ ಅಲ್ಲಿದ್ದ ಅಭಿಮಾನಿಗಳಿಂದ ಕೇಕೆ, ಹರ್ಷೋದ್ಗಾರ ಹೆಚ್ಚಾಯಿತು. ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳಿವೆ.

 

ಸಂಚಾರ ದಟ್ಟಣೆಯೂ ಇದೆ. ಜೊತೆಗೆ ಕೆಲಸವಿಲ್ಲದೆ ಅಡ್ಡಾಡುವ ಸೋಮಾರಿಗಳಿದ್ದಾರೆ. ಮೊದಲು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಶಾಪಿಂಗ್ ಮಾಡ್ತಾರೊ ಇಲ್ಲವೋ ಮಾಲ್‌ಗಳಿಗೆ ಬಂದು ಹೋಗುತ್ತಾರೆ. ರಸ್ತೆ ಸರಿಯಿಲ್ಲ, ಸಂಚಾರ ದಟ್ಟಣೆ ಎಲ್ಲಾ ಸಮಸ್ಯೆಗೆ ರಾಜಕಾರಣಿಗಳು ಕಾರಣರಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಇರುತ್ತದೆ ಎಂದು ತಮ್ಮ ಆರಕ್ಷಕ  ಚಿತ್ರದ `ಥೂ ನನ್ ಮಕ್ಳಾ ಗಂಡಸ್ರಾ ನೀವ್ ಮೀಸೆ ಇದ್ದರೇ~ ಹಾಡನ್ನು ಹೇಳುವ ಮೂಲಕ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.ನಂತರ ರೇಡಿಯೊ ಜಾಕಿಗಳೊಂದಿಗೆ ನರ್ತಿಸಿ ಅಭಿಮಾನಿಗಳನ್ನು ರಂಜಿಸಿದರು.

`ಎದ್ದೇಳು ಬೆಂಗಳೂರು~ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಿಗ್ಗೆಸ್ಟ್ ಕಿರಿಕಿರಿ ಯಾವುದೆಂಬ ಪ್ರಶ್ನೆಗೆ ಕೇಳುಗರಿಂದ ಬಂದ ಉತ್ತರ- ಸಂಚಾರ ದಟ್ಟಣೆ, ಕೆಟ್ಟ ರಸ್ತೆಗಳು. ಹಾಗಾಗಿ ರಸ್ತೆ ದುರಸ್ತಿ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಮಾರುತಿ ಸೇವಾನಗರ, ಡಿ.ಜೆ. ಹಳ್ಳಿ, ಚಾಮುಂಡಿನಗರ, ಮಲ್ಲೇಶ್ವರಂನ ಸಂಪಿಗೆ ರಸ್ತೆ ಹಾಗೂ ಎಂ.ಜಿ.ರಸ್ತೆಗಳಿಗೆ ಹೋಗಿ ಅಲ್ಲಿನ ಪಾಲಿಕೆ ಸದಸ್ಯರ, ಜನರ ಸಹಕಾರದಿಂದ ಹದಗೆಟ್ಟ ರಸ್ತೆಗಳಿಗೆ ದುರಸ್ತಿ ಮಾಡುವ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ರೇಡಿಯೊ ಜಾಕಿ ಹರ್ಷ.ಇದು ಕೇವಲ ಜಾಗೃತಿ ಮೂಡಿಸಲು ಆಯೋಜಿಸಿರುವ ಕಾರ್ಯಕ್ರಮ. ಇದರಿಂದ ಸಾರ್ವಜನಿಕರು, ಸರ್ಕಾರ ಮೂಲ ಸೌಲಭ್ಯ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎನ್ನುತ್ತಾರೆ ಅವರು. ಸಾರ್ವಜನಿಕರು 92.7ಬಿಗ್ ಎಫ್.ಎಂ ವಾಹಿನಿ ಕೇಳುವ ಮೂಲಕವೂ ತಮ್ಮ ಬಡಾವಣೆಗಳಲ್ಲಿ ಇರುವ ಕೆಟ್ಟ ರಸ್ತೆಗಳ ಬಗ್ಗೆ ಸಂದೇಶ ಕಳುಹಿಸಬಹುದು.

ಡಿ.ಜೆ.ಹಳ್ಳಿ, ಸುಭಾಷ್‌ನಗರ, ಮಾರುತಿ ಸೇವಾ ನಗರ ಹಾಗೂ ಎ.ನಾರಾಯಣಪುರದ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)