ರಸ್ತೆ ದುರಸ್ತಿಗೆ ಒತ್ತಾಯ

7

ರಸ್ತೆ ದುರಸ್ತಿಗೆ ಒತ್ತಾಯ

Published:
Updated:

 


ತಿಪಟೂರು: ನಗರದ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಳಂಬದಿಂದ ರಸ್ತೆ ಹಾಗೂ ಚರಂಡಿ ಹದಗೆಟ್ಟು ವ್ಯಾಪಾರಕ್ಕೆ ತೊಡಕಾಗಿದೆ ಎಂದು ಸ್ಥಳೀಯ ವರ್ತಕರು ಗುರುವಾರ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.

ಮಂದಗತಿಯಲ್ಲಿ ನಡೆದ ಒಳಚರಂಡಿ ಕಾಮಗಾರಿಯಿಂದಾಗಿ ದೊಡ್ಡಪೇಟೆ ರಸ್ತೆ ಸಂಚರಿಸಲಾಗದಷ್ಟು ಹದಗೆಟ್ಟಿದೆ. ಹೀಗಿದ್ದರೂ ರಿಪೇರಿ ಕಾಮಗಾರಿ ಪ್ರಾರಂಭಿಸಲು ನಗರಸಭೆ ಕ್ರಮ ಕೈಗೊಂಡಿಲ್ಲ. ರಸ್ತೆ ದೂಳುಮಯವಾಗಿರುವುದರಿಂದ, ಅಂಗಡಿ ತೆರೆಯುವುದೇ ಕಷ್ಟವಾಗಿದೆ. ದೂಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೂರಿದರು.ರಸ್ತೆಯಲ್ಲಿ ಸಮರ್ಪಕ ಚರಂಡಿ ನಿರ್ಮಿಸಿಲ್ಲ. ಅಲ್ಲಲ್ಲಿ ಕೊಳಚೆ ನೀರು ಕಟ್ಟಿಕೊಂಡು ದುರ್ವಾಸನೆ ಬರುತ್ತಿದೆ. ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗಿ ಓಡಾಟ ದುಸ್ತರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಬಂದು ನಗರಸಭೆ ಕಚೇರಿ ಮುಂದೆ ಧರಣಿ ನಡೆಸಿದರು. ನಗರಸಭೆ ಪ್ರಭಾರ ಅಧ್ಯಕ್ಷ ಟಿ.ಎನ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ಮತ್ತು ಆಯುಕ್ತ ಡಾ.ವೆಂಕಟೇಶಯ್ಯ ಪ್ರತಿಭಟನಾಕಾರರ ಅಹವಾಲು ಆಲಿಸಿದರು.ರಸ್ತೆಗೆ ಡಾಂಬರ್ ಹಾಕಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲು ರೂ 15 ಕೋಟಿ ಮಂಜೂರಾಯಿತು. ದೊಡ್ಡಪೇಟೆ ರಸ್ತೆ ಕೂಡ ಈ ಯೋಜನೆಯಲ್ಲಿ ಸೇರಿದೆ. ಅಂದಾಜು ಪಟ್ಟಿ ಸೇರಿದಂತೆ ಹಲವು ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿ ಮೊದಲ ವಾರದಲ್ಲಿ ದುರಸ್ತಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು. ನೂತನ ಚರಂಡಿ ನಿರ್ಮಾಣ ಕಾಮಗಾರಿಯೂ ಶೀಘ್ರ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು. ಕಾಂಕ್ರಿಟ್ ರಸ್ತೆ ಕಾಮಗಾರಿ ಪ್ರಾರಂಭಿಸುವವರೆಗೆ ತಾತ್ಕಾಲಿಕ ರಿಪೇರಿ ಮೂಲಕ ಸದ್ಯ ಎದುರಾಗಿರುವ ಸಮಸ್ಯೆ ಪರಿಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರಸಭೆ ಸದಸ್ಯ ಬಾಗೇಪಲ್ಲಿ ನಟರಾಜ್, ವರ್ತಕ ಭವರ್‌ಲಾಲ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry