ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

7

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

Published:
Updated:

ಹೊಳಲ್ಕೆರೆ: ರಾಜ್ಯ ಹೆದ್ದಾರಿ-47 ಸಂಪೂರ್ಣ ಹದಗೆಟ್ಟಿದ್ದು, ಶೀಘ್ರವೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ತಿರುಮಲಾಪುರ ಗ್ರಾಮಸ್ಥರು ಬುಧವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಹೊಳಲ್ಕೆರೆ-ಹೊಸದುರ್ಗ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬ ಹೊಂಡಗಳು ಸೃಷ್ಠಿಯಾಗಿದ್ದು, ಡಾಂಬರು ರಸ್ತೆಯೇ ಕಾಣುತ್ತಿಲ್ಲ. ಪಟ್ಟಣದಿಂದ ಬೊಮ್ಮನಕಟ್ಟೆ, ಲೋಕದೊಳಲು, ತಿರುಮಲಾಪುರ, ಸಾಂತೇನಹಳ್ಳಿ, ಉಗಣೇಕಟ್ಟೆ ಮಾರ್ಗದಲ್ಲಿ ತಾಲ್ಲೂಕಿನ ಗಡಿ ಎನ್.ಜಿ. ಹಳ್ಳಿಯವರೆಗೆ ರಸ್ತೆ ತುಂಬ ಗುಂಡಿಗಳಾಗಿವೆ. ಇದರಿಂದ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು ಮತ್ತಿತರ ಸಣ್ಣಪುಟ್ಟ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆ ಕಿತ್ತು ಹೋಗಿರುವುದರಿಂದ ಬಸ್‌ಗಳಲ್ಲಿಯೂ ಕೂರಲಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಹೊಸದುರ್ಗದಿಂದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ನಗರಗಳಿಗೆ ಇದೇ ಮಾರ್ಗದಲ್ಲಿ ಸಂಚರಿಸಬೇಕು. ಪಟ್ಟಣದ ಕಡೆಯಿಂದ ಹೊಸದುರ್ಗ ಮಾರ್ಗವಾಗಿ ಬೀರೂರು, ಕಡೂರು, ಚಿಕ್ಕಮಗಳೂರು, ಧರ್ಮಸ್ಥಳ, ಮಂಗಳೂರು ತಲುಪಲು ಇದೇ ರಸ್ತೆಯಲ್ಲೇ ಪ್ರಯಾಣಿಸಬೇಕು. ಹುಳಿಯಾರು, ಚಿಕ್ಕನಾಯಕನ ಹಳ್ಳಿ, ತುಮಕೂರು, ಬೆಂಗಳೂರು ಮತ್ತು ತಿಪಟೂರು, ಹಾಸನ, ಮೈಸೂರು ಕಡೆ ಪ್ರಯಾಣಿಸುವವರೂ ಇದೇ ಮಾರ್ಗದಲ್ಲಿ ಹೋಗಬೇಕು.ಈ ರಸ್ತೆಯಲ್ಲಿ ಪ್ರತಿದಿನ ಹತ್ತಾರು ಕೆಎಸ್‌ಆರ್‌ಟಿಸಿ ಸೇರಿದಂತೆ ಸುಮಾರು 200 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ರಸ್ತೆ ಹಾಳಾಗಿ ಐದಾರು ತಿಂಗಳು ಕಳೆದರೂ, ಯಾರೂ ಇತ್ತ ಕಡೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.ರಸ್ತೆ ದುರಸ್ತಿಯಾಗಿ ಸುಮಾರು ಹತ್ತು ವರ್ಷಗಳಾಗಿವೆ. ಕಳೆದ ಐದಾರು ವರ್ಷಗಳಿಂದ ಇದೇ ಮಾರ್ಗದಲ್ಲಿ ನೂರಾರು ಅದಿರು ಲಾರಿಗಳು ಮಂಗಳೂರಿಗೆ ಸಂಚರಿಸುತ್ತಿದ್ದವು. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿಗಳಾಗುತ್ತವೆ. ಆಗ ಕಾಟಾಚಾರಕ್ಕೆ ಅರೆಬರೆ ಗುಂಡಿ ಮುಚ್ಚಿ ಕೈತೊಳೆದುಕೊಳ್ಳುವ ಅಧಿಕಾರಿಗಳು ಮತ್ತೆ ಈ ಕಡೆ ನೋಡುವುದಿಲ್ಲ.ರಸ್ತೆ ತುಂಬಾ ಗುಂಡಿಗಳಾಗಿರುವುದರಿಂದ ವಾರಕ್ಕೆ ಒಂದಾದರೂ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ವೇಳೆಯಂತೂ ಈ ಮಾರ್ಗದಲ್ಲಿ ಓಡಾಡಲು ಸಾಧ್ಯವಿಲ್ಲ. ಶೀಘ್ರವೇ ರಸ್ತೆ ದುರಸ್ತಿಗೆ ಗಮನಹರಿಸದಿದ್ದರೆ, ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಗ್ರಾ.ಪಂ. ಸದಸ್ಯ ವೀರನಾಗಪ್ಪ, ತಿಮ್ಮಣ್ಣ, ಗ್ರಾಮಸ್ಥರಾದ ಚಂದ್ರಪ್ಪ, ರಾಜಪ್ಪ, ಆವಿನಹಟ್ಟಿ ಮೋಹನ್, ಶ್ರೀನಿವಾಸ್, ರಂಗನಾಥ, ನಾಗರಾಜ್, ರವಿಕುಮಾರ್, ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry