ರಸ್ತೆ ದುರಸ್ತಿಗೆ, ಮಳೆಗಾಲಕ್ಕೆ ಇಟ್ಟ ದುಡ್ಡೆಲ್ಲಿ?

ಬುಧವಾರ, ಜೂಲೈ 17, 2019
25 °C

ರಸ್ತೆ ದುರಸ್ತಿಗೆ, ಮಳೆಗಾಲಕ್ಕೆ ಇಟ್ಟ ದುಡ್ಡೆಲ್ಲಿ?

Published:
Updated:

ಮಂಗಳೂರು: `ಜಿಲ್ಲೆಯಲ್ಲಿ ಮಳೆಗಾಲಕ್ಕೆ ಮೊದಲು ಕೆಲವು ರಸ್ತೆಗಳ ದುರಸ್ತಿ ಮತ್ತು ಚರಂಡಿಗಳಲ್ಲಿ ಹೂಳು ತೆಗೆಯುವುದಕ್ಕಾಗಿಯೇ ಎರಡು ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಅತ್ತ ರಸ್ತೆಗಳೂ ದುರಸ್ತಿಯಾಗಿಲ್ಲ, ಇತ್ತ ಸಮರ್ಪಕ ಉತ್ತರವೂ ಇಲ್ಲ! ಹಾಗಿದ್ದರೆ ಈ ದುಡ್ಡನ್ನು ಏನು ಮಾಡಿದ್ದೀರಿ? ಸರ್ಕಾರ ಮೊದಲಾಗಿ ಹಣ ಕೊಟ್ಟರೂ ನೀವು ಕೆಲಸ ಮಾಡುವುದಿಲ್ಲ ಎಂದರೆ ಜನರಿಗೆ ನಾವು ಏನು ಉತ್ತರ ಕೊಡಬೇಕು, ನೀವಂತೂ ಜನರತ್ತ ಹೋಗುವುದಿಲ್ಲ, ನಾವಾದರೂ ಅವರಿಗೆ ಮುಖ ತೋರಿಸಬೇಡವೇ~!...ಸಂಸದ ನಳಿನ್ ಕುಮಾರ್ ಕಟೀಲ್ ಸಿಟ್ಟಿನಿಂದಲೇ ಹೇಳುವಾಗ ಇಡೀ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೌನ ಆವರಿಸಿತ್ತು.ಮಾತಿನ ಕಡೆಯಲ್ಲಿ `ಇದು ತಮಾಷೆಗಾಗಿ ಕರೆದ ಸಭೆ ಅಲ್ಲ~ ಎಂದು ಗುರುಗುಟ್ಟಿದಾಗ ಅಲ್ಪಸ್ವಲ್ಪ ನಗು ಇದ್ದ ಅಧಿಕಾರಿಗಳ ಮುಖದಲ್ಲೂ ಬಲವಂತದ ಗಂಭೀರ ಭಾವ ಮೂಡಿತು. ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಪ್ರಸಂಗ ನಡೆಯಿತು.`ಮಳೆಗಾಲ ಆರಂಭವಾಗಿದೆ, ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಸ್ಥಿತಿಗತಿ ಹೇಳಿ?~ ಎಂದಾಗ ಉತ್ತರಿಸಲು ಎದ್ದು ನಿಂತ ಇಲಾಖೆಯ ಅಧಿಕಾರಿ, `ಅಲ್ಲಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ~ ಎಂಬ ಸಿದ್ಧ ಉತ್ತರ ನೀಡಿದರು.ಸಂಸದರು ಇಷ್ಟು ಮಾತನ್ನೇ ಕೇಳಿಸಿಕೊಳ್ಳಲು ಅಲ್ಲಿ ಕುಳಿತಿರಲಿಲ್ಲ. ಎಲ್ಲೆಲ್ಲಿ ಯಾವ್ಯಾವ ರಸ್ತೆ ದುರಸ್ತಿ ಮಾಡಿದ್ದೀರಿ? ಎಲ್ಲೆಲ್ಲಿ ಚರಂಡಿ ಹೂಳು ತೆಗೆಸಿದ್ದೀರಿ ಹೇಳಿ? ಎಂದು ಪಟ್ಟು ಹಿಡಿದರು. ಅಧಿಕಾರಿ ಬಳಿ ಅದಕ್ಕೆ ಉತ್ತರವೇ ಇರಲಿಲ್ಲ!`ಸ್ಪಷ್ಟ ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ? ಇದೇನು ನಾನು ತಮಾಷೆಗಾಗಿ ಕರೆದ ಸಭೆಯೇ? ನೀವು ಮಾಹಿತಿ ನೀಡದಿದ್ದರೆ ನಾನೇ ವಿವರ ನೀಡುತ್ತೇನೆ ಕೇಳಿ, ಇಲ್ಲಿಗೆ ಬರುವ ಮೊದಲೇ ನಿಮ್ಮ ರಸ್ತೆ ಕಾಮಗಾರಿಗಳನ್ನೆಲ್ಲ ನೋಡಿಯೇ ಬಂದಿದ್ದೇನೆ. ನಿಮ್ಮಲ್ಲಿ ಏನೂ ಉತ್ತರವಿಲ್ಲ, ಏಕೆಂದರೆ ನೀವು ಕೆಲಸವನ್ನೇ ಮಾಡಿಸಿಲ್ಲ. ಸಂಸದರ ನಿಧಿಯಿಂದ ಸಿಗುವ ಹಣ 2 ಕೋಟಿ ರೂಪಾಯಿ ಮಾತ್ರ.ಕ್ಷೇತ್ರದ ಅಭಿವೃದ್ಧಿಗೆ ಅದು ಏನೇನೂ ಸಾಲದು ಎಂದು ನಾನು ಯಾರ‌್ಯಾರದೋ ಕಾಲು ಹಿಡಿದು ಹಣ ಒದಗಿಸಿಕೊಟ್ಟರೆ ನೀವು ಅದರಲ್ಲಿ ಕೆಲಸವನ್ನೇ ಮಾಡುತ್ತಿಲ್ಲ? ನೀವಂತೂ ಜನರ ಬಳಿಗೆ ಹೋಗುವುದಿಲ್ಲ. ನಾನಾದರೂ ಜನರಿಗೆ ಮುಖ ತೋರಿಸಬೇಡವೇ?~ ಎಂದು ನಳಿನ್ ಕುಮಾರ್ ಖಾರವಾಗಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.ಲೋಕೋಪಯೋಗಿ ಇಲಾಖೆಯ ಮೂರು ಕಾಮಗಾರಿಗಳೂ ಅತ್ಯಂತ ಕಳಪೆಯಾಗಿವೆ. ಕರ್ನೂರು ರಸ್ತೆ ಮೊದಲ ಮಳೆಗೇ ಕೊಚ್ಚಿ ಹೋಗಿದೆ. 15 ಲಕ್ಷ ರೂಪಾಯಿ ವ್ಯರ್ಥವಾಗಿದೆ. ಕೊಕ್ಕಡ-ಧರ್ಮಸ್ಥಳ ರಸ್ತೆ ಮತ್ತು ಕೆಯ್ಯೂರು-ಪಾಲ್ತಾಡಿ ರಸ್ತೆಗಳೂ ಮೊದಲ ಮಳೆಗೇ ಹಾಳಾಗಿವೆ. ಸುಬ್ರಹ್ಮಣ್ಯ-ಪಂಜ ರಸ್ತೆಯಲ್ಲಿ ಚರಂಡಿಯೇ ಕುಸಿದಿದೆ. ಮಳೆಗಾಲಕ್ಕಾಗಿಯೇ ದುಡ್ಡು ಕೊಟ್ಟರೂ ಅದನ್ನು ಸಮರ್ಪಕವಾಗಿ ಬಳಸಿಕೊಂಡೇ ಇಲ್ಲ ಎಂದು ಅವರು ಹೇಳಿದರು.ಮಳೆಗಾಲ ಪೂರ್ವ ಕಾಮಗಾರಿಗಳಿಗಾಗಿಯೇ ತೆಗೆದಿಟ್ಟ ಹಣವನ್ನು ಖರ್ಚು ಮಾಡಿರುವ ಬಗ್ಗೆ ಎರಡು ದಿನಗಳ ಒಳಗೆ ತಮಗೆ ಸಂಪೂರ್ಣ ವರದಿ ನೀಡಬೇಕು ಎಂದು ಸಂಸದ ತಾಕೀತು ಮಾಡಿದರು.`ಈ ಹಿಂದಿನ ಜಿಲ್ಲಾಧಿಕಾರಿ ಕೇಳಿದ ತಕ್ಷಣ ಹಣ ಮಂಜೂರು ಮಾಡಿಸಿದರು. ಆದರೆ ಹಲವು ಕಾಮಗಾರಿಗಳು ನಡೆದೇ ಇಲ್ಲ. ಗುತ್ತಿಗೆ ಪಡೆದವರನ್ನು ಎಚ್ಚರಿಸಿ ಸಮರ್ಪಕವಾಗಿ ಕೆಲಸ ಮಾಡಿಸಲಿಕ್ಕೆ ಅಲ್ಲವೇ ನೀವಿರುವುದು. ಕೆಲಸ ಮಾಡದೆ ನೀವೇನು ನಿದ್ದೆ ಮಾಡುತ್ತಿದ್ದೀರಾ?~ ಎಂದು ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಅಧಿಕಾರಿಗಳನ್ನು ಚುಚ್ಚಿದರು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಪುಂಜಾಲಕಟ್ಟೆ ಸಮೀಪ ಹೆದ್ದಾರಿ ಕಾಮಗಾರಿ ಅರ್ಧಕ್ಕೇ ಕೊನೆಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಗುತ್ತಿಗೆ ಪಡೆದವರು ಸಮರ್ಪಕವಾಗಿ ಕಾಮಗಾರಿಯ ಸಾಮಗ್ರಿಗಳನ್ನೂ ಇಟ್ಟುಕೊಂಡಿರಬೇಕು ಎಂಬುದನ್ನು ಎಂಜಿನಿಯರ್‌ಗಳು ತಾಕೀತು ಮಾಡಬೇಕು ಎಂದ ನಳಿನ್, ತಾವು ಭೇಟಿ ನೀಡಿದಾಗ ಅದೆಷ್ಟೋ ಕಡೆ ಗುತ್ತಿಗೆ ಪಡೆದ ಕಂಪೆನಿಗಳ ಎಂಜಿನಿಯರ್‌ಗಳೇ ಸ್ಥಳದಲ್ಲಿರಲಿಲ್ಲ. ಹೀಗಿರುವಾಗ ಗುಣಮಟ್ಟದ ಕೆಲಸ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.`ಈ ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಅಸಾಧ್ಯ ನಿಜ. ಆದರೆ ಚರಂಡಿಯಲ್ಲಿ ನೀರು ನಿಲ್ಲದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವ ಭಾಗದಲ್ಲೂ ಜನರಿಗೆ ರಸ್ತೆ ವಿಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು~ ಎಂದು ಸಂಸದರು ಸೂಚಿಸಿದರು.ಜನರ ವಿದ್ಯುತ್ ಸಮಸ್ಯೆ ನಿವಾರಣೆಗೆ ಮೆಸ್ಕಾಂ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೇಳಿ ತಿಳಿದ ಅವರು, `ಜನರಿಗೆ ಸಂಪರ್ಕ ಸಂಖ್ಯೆಗಳನ್ನು ಕೊಡುವ ಮೂಲಕ ಅಧಿಕಾರಿಗಳು ತಕ್ಷಣ ಕುಂದುಕೊರತೆಗೆ ಸ್ಪಂದಿಸಬೇಕು. ಯಾವ ಕಾರಣಕ್ಕೂ ಜನರ ದೂರು ನನ್ನವರೆಗೂ ತಲುಪುವಂತೆ ಮಾಡಬಾರದು~ ಎಂದು ಎಚ್ಚರಿಸಿದರು.ಸಭೆಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಆಗಿರುವ ಕೆಲಸಗಳು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಡೆದಿರುವ ಕಾಮಗಾರಿ, ಇಂದಿರಾ ಆವಾಸ್ ಯೋಜನೆ, ಗುಡಿಸಲು ಮುಕ್ತ ಯೋಜನೆ, ಗ್ರಾಮೀಣ ನೀರು ಪೂರೈಕೆ ಯೋಜನೆ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿವರವಾದ ಚರ್ಚೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry