ರಸ್ತೆ ದುರಸ್ತಿ ವೀಕ್ಷಿಸಿದ ನಬಾರ್ಡ್ ಎ.ಜಿ.ಎಂ.

7

ರಸ್ತೆ ದುರಸ್ತಿ ವೀಕ್ಷಿಸಿದ ನಬಾರ್ಡ್ ಎ.ಜಿ.ಎಂ.

Published:
Updated:

ಕುಮಟಾ: ನಬಾರ್ಡ್‌ನ  40 ಲಕ್ಷ ರೂ. ಆರ್ಥಿಕ ಸಹಾಯಧನದಡಿ ನಿರ್ಮಿಸಲಾಗಿರುವ  ತಾಲ್ಲೂಕಿನ ಬೊಗರಿಬೈಲ ರಸ್ತೆ ಮಳೆಗಾಲದಲ್ಲಿ ಹಾಳಾಗಿದ್ದು, ಅದರ ದುರಸ್ತಿ ಕಾರ್ಯವನ್ನು ಬುಧವಾರ ನಬಾರ್ಡ್ ಎ.ಜಿ.ಎಂ. ಎಸ್.ವಿ. ರಂಗರಾವ್ ಪರಿಶೀಲಿಸಿದರು.ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಮುಗಿದ ನಂತರ ಮೊದಲ ಮಳೆಗೇ ರಸ್ತೆ ಹಾಳಾಗಿದ್ದು, ಈಗ ಅದರ  ದುರಸ್ತಿ ಕಾರ್ಯ ಆರಂಭಿಸಲಾಗಿದೆ.‘ರಸ್ತೆ ಬದಿಯ ಗುಡ್ಡದಿಂದ ಕೆಳಗೆ ಇಳಿದು ಬರುವ ಮಳೆ ನೀರು ಗಟಾರದಲ್ಲಿ ಸರಾಗ ಹರಿಯುವಂತೆ ಎರಡೂ ದಿಕ್ಕಿನಿಂದ ಆಳ ಹಾಗೂ ಅಗಲ ಮಾಡಿದರೆ ರಸ್ತೆ ಹಾಳಾಗುವುದು ತಪ್ಪುತ್ತದೆ.ನಬಾರ್ಡ್ ಆರ್ಥಿಕ ನೆರವು ನೀಡುವ ರಸ್ತೆ ಸಂಸ್ಥೆಯ ಆಸ್ತಿಯಾಗಿರುತ್ತದೆ. ಅದು ಕನಿಷ್ಠ 9 ವರ್ಷ ಕಾಲವಾದರೂ ಸುಸ್ಥಿತಿಯಲ್ಲಿರಬೇಕು ಎನ್ನುವುದು ನಬಾರ್ಡ್ ನಿಯಮ.ಈ ಭಾಗದಲ್ಲಿ ಕನಿಷ್ಠ ಮೂರು ವರ್ಷವಾದರೂ ರಸ್ತೆ ಸುಸ್ಥಿತಿಯಲ್ಲಿರಬೇಕು. ಆದರೆ ಒಂದೇ ಮಳೆಗೆ ರಸ್ತೆ ಹಾಳಾದರೆ ಅದು ರಸ್ತೆಯ  ಗುಣಮಟ್ಟವನ್ನು ತೋರಿಸುತ್ತದೆ. 40 ಲಕ್ಷ ರೂ. ವೆಚ್ಚದ ಈ ರಸ್ತೆ ನೋಡಿದರೆ ಇದು ಹೊಸ ರಸ್ತೆ ಎಂದು ಯಾರೂ ಹೇಳುವಹಾಗಿಲ್ಲ ಎಂದರು.ಈಗಾಗಲೇ ದುರಸ್ತಿ ಮಾಡಿರುವ ಕೆಲವಡೆ  ರಸ್ತೆ ಅಗೆದು ಸರಿಯಾಗಿ ದುರಸ್ತಿ ಮಾಡುವಂತೆ ಸೂಚಿಸಿದರು. ದುರಸ್ತಿ ಮಾಡಬೇಕಾದ ಕಡೆ ಹೇಗೆ ಕೆಲಸ ಮಾಡಬೇಕು ಎನ್ನವುದನ್ನು ಗುತ್ತಿಗೆದಾರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಎಂಜಿನಿಯರ್ ಎಂ ವಿ ಹೆಗಡೆ, ರಸ್ತೆ ಹಾಳಾಗದಂತೆ ಉಳಿಯಲು ಕನಿಷ್ಠ ಒಂದು ಬದಿಯಾದರೂ ಸಿಮೆಂಟ್ ಗಟಾರ ನಿರ್ಮಿಸಲು ಹೆಚ್ಚುವರಿ ಮೊತ್ತ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅದಕ್ಕೆ ಎಸ್.ವಿ. ರಂಗರಾವ್ ಗಟಾರ ನಿರ್ಮಾಣಕ್ಕೆ ಅಂದಾಜು ವೆಚ್ಚ ಕಳಿಸಿದರೆ ಮಂಜೂರಿಗೆ ಶಿಫಾರಸು ಮಾಡಲಾಗುವುದು ಎಂದರು. ಸ್ಥಳದಲ್ಲಿದ್ದ ಕಾಮಗಾರಿ ಗುತ್ತಿಗೆದಾರ ಗಣೇಶ ನಾಯ್ಕ ಸೂಚನೆಯಂತೆ ದುರಸ್ತಿ ಕಾರ್ಯ ಕೈಕೊಳ್ಳಲಾಗುವುದು ಎಂದರು. ಎಸ್.ವಿ. ಭಟ್ಟ, ಗಿರಿಯಾ ಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry