ರಸ್ತೆ ನಿರ್ವಹಣೆ: ಗುತ್ತಿಗೆದಾರರ ವಿರುದ್ಧ ಅಸಮಾಧಾನ

7

ರಸ್ತೆ ನಿರ್ವಹಣೆ: ಗುತ್ತಿಗೆದಾರರ ವಿರುದ್ಧ ಅಸಮಾಧಾನ

Published:
Updated:

ಮೂಡುಬಿದಿರೆ: ಡಾಂಬರೀಕರಣಗೊಂಡ ರಸ್ತೆಯನ್ನು ನಿರ್ದಿಷ್ಟ ಅವಧಿಯವರೆಗೆ ನಿರ್ವಹಣೆ ಮಾಡಬೇಕೆಂಬ ನಿಯಮವಿದ್ದರೂ ಗುತ್ತಿಗೆದಾರರು ಅದನ್ನು ಪಾಲಿಸದಿರುವ ಬಗ್ಗೆ ಪುರಸಭೆ ಮಾಸಿಕ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ ಅಧ್ಯಕ್ಷತೆಯಲ್ಲಿ ಬುಧವಾರ ಮಾಸಿಕ ಸಭೆ ನಡೆಯಿತು. ರಸ್ತೆಗಳು ಡಾಂಬರೀಕರಣಗೊಂಡ ಮೇಲೆ ನಿರ್ವಹಣೆ ಸಮಸ್ಯೆಯಿಂದ ಕೆಲವೇ ತಿಂಗಳಲ್ಲಿ ಕೆಟ್ಟುಹೋಗಿ ಸಂಚಾರಕ್ಕೆ ಅಯೋಗ್ಯವೆನಿಸಿವೆ. ಆದ್ದರಿಂದ ಕಳೆದ ಎರಡು ವರ್ಷಗಳಲ್ಲಿ ಪುರಸಭೆ ವತಿಯಿಂದ ಆಗಿರುವ ರಸ್ತೆಗಳ ಡಾಂಬರೀಕರಣವನ್ನು ತನಿಖೆಗೊಳಪಡಿಸಬೇಕು ಎಂದು ಕೃಷ್ಣರಾಜ ಹೆಗ್ಡೆ ಒತ್ತಾಯಿಸಿದರು.ಕೆಲವು ಕಡೆಗಳಲ್ಲಿ ರಸ್ತೆಗಳಿಗೆ ಜಲ್ಲಿ ಮಾತ್ರ ಹಾಕಲಾಗಿದ್ದು ಅವು ಎದ್ದು ಹೋಗಿವೆ. ಸಂಚಾರಕ್ಕೂ ತೊಂದರೆ, ರಸ್ತೆಬದಿ ನಡೆದು ಹೋಗುವ ಸಾರ್ವಜನಿಕರಿಗೂ ತೊಂದರೆಯಾಗಿದೆ ಎಂದು ಪ್ರೇಮಾ ಸಾಲ್ಯಾನ್ ಆರೋಪಿಸಿದರು.ರಸ್ತೆ ನಿರ್ವಹಣೆ ಮಾಡದ ಗುತ್ತಿಗೆದಾರರಿಗೆ ಭದ್ರತಾ ಠೇವಣಿ ಮರುಪಾವತಿಸಬಾರದು ಎಂಬ ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ 2009-10ರ ಸಾಲಿನಲ್ಲಿ ರಸ್ತೆ ಡಾಂಬರೀಕರಣ ನಡೆಸಿದ ಗುತ್ತಿಗೆದಾರರ ಠೇವಣಿ ಹಣ ಹಿಂತಿರುಗಿಸಿಲ್ಲ ಎಂದರು.ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡ ಗೂಡಂಗಡಿಗಳನ್ನು ಪುರಸಭೆ ತೆರವುಗೊಳಿಸುವ ಬದಲು ಕೆಲವು ಅಂಗಡಿಗಳಿಗೆ ಪರವಾನಿಗೆ ನೀಡಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.

ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಕೋಟ್ಯಾನ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry