ಶುಕ್ರವಾರ, ನವೆಂಬರ್ 22, 2019
20 °C

ರಸ್ತೆ ಪಕ್ಕದಲ್ಲೇ ಸಂತೆ: ಸಂಚಾರ ವ್ಯತ್ಯಯ

Published:
Updated:

ರಾಮನಾಥಪುರ: ಮೂಲ ಸೌಲಭ್ಯ ಗಳ ಕೊರತೆಯಿಂದ ಪಟ್ಟಣದ ಸಂತೆ ಮೈದಾನ ಕಿಷ್ಕಿಂದೆಯಾಗಿ ಮಾರ್ಪಟ್ಟು, ವಹಿವಾಟು ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ಕೊಣನೂರು ಗ್ರಾಮದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯು ತ್ತದೆ. ವ್ಯಾಪಾರಸ್ಥರು ಕೊಣನೂರು- ಕುಶಾಲನಗರ ಮುಖ್ಯರಸ್ಥೆ ಬದಿಯಲ್ಲಿ ಸರಕುಗಳನ್ನು ಇಟ್ಟು ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ತೊಂದರೆಯಾಗಿದೆ.ಕೊಣನೂರು ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ. 50 ವರ್ಷಗಳ ಹಿಂದೆ ಸಂತೆ ಪ್ರಾರಂಭ ವಾಯಿತು. ಸುತ್ತಲಿನ ಗ್ರಾಮಗಳ ಜನರು ಪ್ರತಿ ವಾರ ವಸ್ತುಗಳ ಖರೀದಿಗೆ ಬರುತ್ತಾರೆ. ಜನರ ಹಿತದೃಷ್ಟಿಯಿಂದ ಸಂತೆ ಅಭಿವೃದ್ಧಿ ಪಡಿಸಲು ಗ್ರಾಮ ಪಂಚಾಯಿತಿ ಆಡಳಿತ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಫಲವಾಗಿ ಸಂತೆ ಸಾಕಷ್ಟು ಖ್ಯಾತಿ ಗಳಿಸಿ ರೈತರು, ವ್ಯಾಪಾರಸ್ಥರನ್ನು ಸೆಳೆದುಕೊಂಡಿದೆ.ಸುತ್ತಲಿನ ಹಳ್ಳಿಗಳಲ್ಲದೆ ದೂರದ ಹೆಬ್ಬಾಲೆ, ತೊರೆನೂರು, ಹಲಗನ ಹಳ್ಳಿ, ಕಣಗಾಲು, ಶಿರಂಗಾಲ, ರಾಮನಾಥಪುರ ಮುಂತಾದ ಭಾಗದಿಂದ ಅಪಾರ ಸಂಖ್ಯೆಯ ವ್ಯಾಪಾರಸ್ಥರು ಹಾಗೂ ಖರೀದಿದಾರರು ಬರುತ್ತಿದ್ದಾರೆ. ಜಾನುವಾರು, ಆಡು, ಕುರಿಗಳ ವಹಿವಾಟಿಗೂ ಇದು ಪ್ರಸಿದ್ಧಿ. ಮೈದಾನದ ಒಳಗೆ ಸಂತೆ ನಡೆಸಲು ಅವಕಾಶವಿದೆ. ಆದರೂ ರಸ್ತೆ ಪಕ್ಕದಲ್ಲೇ ವಹಿವಾಟು ಜೋರಾಗಿ ನಡೆಯುತ್ತದೆ. ಇದರಿಂದ ಮುಖ್ಯ ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಚಾರಕ್ಕೂ ಅಡಚಣೆ ಆಗಿದೆ.ನಿರ್ಲಕ್ಷದಿಂದಾಗಿ ಸಂತೆ ದಿನ ಸಂಚಾರ ದಟ್ಟಣೆ ಉಂಟಾಗುತ್ತದೆ. ಪಾದಚಾರಿಗಗಳೂ ಸಂಕಷ್ಟ ಪಡುತ್ತಾರೆ. `ಪ್ರತಿ ವರ್ಷ ಸಂತೆ ಹರಾಜು ಸುಂಕದಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೂ ಸೌಲಭ್ಯ ಮಾತ್ರ ಕಲ್ಪಿಸಿಲ್ಲ. ಗ್ರಾಮ ಪಂಚಾಯಿತಿ ಸಂತೆ ಆವರಣದಲ್ಲಿ ಕುಡಿಯುವ ನೀರು, ರಾತ್ರಿ ವೇಳೆ ವಿದ್ಯುತ್ ದೀಪ, ಹೆಚ್ಚುವರಿ ಶೆಡ್‌ಗಳು ಹಾಗೂ ಶೌಚಾಲಯ ನಿರ್ಮಿಸಬೇಕು' ಎಂಬುದು ವ್ಯಾಪಾರಿಗಳ ಒತ್ತಾಯ.

ಪ್ರತಿಕ್ರಿಯಿಸಿ (+)