ಮಂಗಳವಾರ, ಏಪ್ರಿಲ್ 20, 2021
29 °C

ರಸ್ತೆ ಬದಿಯಲ್ಲಿ ತಿಪ್ಪೆ ಹಾಕುವುದು ತಪ್ಪೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರವಾರ (ಕವಿತಾಳ): ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಿಗೆ ಕಾಲಿಟ್ಟರೆ ರಸ್ತೆಯ ಎರಡೂ ಬದಿಯಲ್ಲಿ ಸಾಲು ಸಾಲಾಗಿ ಹಾಕಿದ ತಿಪ್ಪೆಗಳು ಮತ್ತು ಕಸದ ರಾಶಿಗಳೇ ಸ್ವಾಗತಿಸುತ್ತವೆ ಇಷ್ಟಕ್ಕೂ ಸಾಲದೆಂಬಂತೆ ರಸ್ತೆಯುದ್ದಕ್ಕೂ ಶೌಚದ ದುರ್ವಾಸನೆ ಇದಕ್ಕೆ ಕಡಿವಾಣ ಹಾಕುವುದು ಹೇಗೆ ಎನ್ನವುದು ಪ್ರಶ್ನೆ.ಗ್ರಾಮಗಳಲ್ಲಿನ ಬಹುತೇಕ ರೈತರು ಸಗಣಿ, ಕಸ ಮುಂತಾದ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಿ ನಿರಾಳವಾಗಿರುತ್ತಾರೆ. ಕೆಲವೆಡೆ ಮೇವು, ಭತ್ತದ ಹುಲ್ಲಿನ ಬಣವೆಗಳೂ ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ಹಿಂದೆ ದೊಡ್ಡಿ ಹೆಸರಿನಲ್ಲಿ ರೈತರು ತಮ್ಮದೇ ಪ್ರತ್ಯೇಕ ಸ್ಥಳದಲ್ಲಿ ಅಥವಾ ಜಮೀನುಗಳಲ್ಲಿ ಕೃಷಿ ಚಟುವಟಿಕೆಗೆ ಅವಶ್ಯವಿರುವ ಸಲಕರಣೆಗಳು, ಮೇವು ಮತ್ತು ಜಾನುವಾರುಗಳ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದರು.ಸ್ಥಳಾಭಾವದಿಂದ ಇದೀಗ ರಸ್ತೆ ಬದಿಯಲ್ಲಿ ತಿಪ್ಪೆ ಹಾಕುವುದು ಸಾಮಾನ್ಯವಾಗಿದೆ. ಭೂಮಿಯ ಬೆಲೆ ಅದರಲ್ಲೂ ನಿವೇಶನಗಳ ಬೆಲೆ ಗಗನಕ್ಕೇರಿದ್ದು ಹಳ್ಳಿಗಳಲ್ಲೂ ರಸ್ತೆ ಬದಿಯಲ್ಲಿ 30-40 ಅಳತೆಯ ಪರಿವರ್ತನೆ ಆಗದ ನಿವೇಶನವೂ ಕನಿಷ್ಟ ಎಂದರೂ ಲಕ್ಷದ ಮೇಲೆ ಬೆಲೆ ಇದೆ ಹೀಗಾಗಿ ಬಹುತೇಕ ರೈತರು ರಸ್ತೆಯ ಬದಿಯಲ್ಲಿ ತಿಪ್ಪೆಗಳ ರಾಶಿ ಹಾಕಿ ನಿಶ್ಚಿಂತೆಯಿಂದ ಇದ್ದಾರೆ. ಸಮೀಪದ ನವಲಕಲ್ ಗ್ರಾಮದಲ್ಲಿ ಬಸ್ ತಂಗುದಾಣಕ್ಕೆ ಹೊಂದಿಕೊಂಡಂತೆ ಹಾಕಲಾದ ತಿಪ್ಪೆಯ ರಾಶಿ ದಿನ ಕಳೆದಂತೆ ಬಲಿಷ್ಟವಾಗುತ್ತಿದ್ದು ಜನರು ಕುಳಿತುಕೊಳ್ಳುತ್ತಿದ್ದ ತಂಗುದಾಣದೊಳಕ್ಕೆ ಪ್ರವೇಶಿಸಿದೆ. ಹೀಗೆ ಪ್ರತಿನಿತ್ಯ ತಿಪ್ಪೆಗೆ ಕಸದ ಜಮೆ ಮಾಡಿದರೆ ಇನ್ನೂ ತಿಂಗಳೊಪ್ಪತ್ತಿನಲ್ಲಿ ಬಸ್ ತಂಗುದಾಣ ಎಲ್ಲಿ ಹೋಯ್ತು ಎಂದು ಹುಡುಕುವಂತಾಗುತ್ತದೆ. ಗ್ರಾಮದ ಸ್ವಚ್ಚತೆ ಬಗ್ಗೆ ನಿಗಾ ವಹಿಸಬೇಕಾದ ಸ್ಥಳೀಯ ಆಡಳಿತ ಮತ್ತು ರಸ್ತೆ ಬದಿಯಲ್ಲಿ ಸ್ವಚ್ಚತೆ ಕಾಪಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಅವರ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಸ್ವಚ್ಚತೆ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಕೆಲವು ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಮಾಡುತ್ತಿವೆ ಆದರೆ ಕಣ್ಣಿಗೆ ರಾಚುವಂತಿರುವ ಇಂತಹ ಗಲೀಜು ನೋಡಿಯೂ ಅವುಗಳನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳದಿರುವುದು ಮತ್ತು ಜನರಲ್ಲಿ ಜಾಗೃತಿ ಮೂಡದಿರುವುದು ವಿಪರ್ಯಾಸವೇ ಸರಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.