ರಸ್ತೆ ಬದಿ ಮರಗಳಿಗೆ ಕೊಡಲಿ

7

ರಸ್ತೆ ಬದಿ ಮರಗಳಿಗೆ ಕೊಡಲಿ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ರಸ್ತೆ ತಿರುವುಗಳಲ್ಲಿ ಅಪಘಾತಕ್ಕೆ ಕಾರಣವಾಗುವ ಮರಗಳನ್ನು ಕಡಿಯುವ ಕಾರ್ಯ ಮುಂದುವರೆದಿದೆ. ಈಚೆಗೆ ರಸ್ತೆ ಬದಿ ಮರಗಳಿಂದ ಅಪಘಾತ ಹೆಚ್ಚಿದ ಪರಿಣಾಮ ಅರಣ್ಯ ಇಲಾಖೆ ಇಂತ ಮರಗಳನ್ನು ಹರಾಜು ಹಾಕಿ ತೆಗೆಸಲಾಗುತ್ತಿದೆ.ಪರಿಸರ ವಾದಿಗಳಿಂದ ಇದಕ್ಕೆ ವಿರೋಧವಿದ್ದರೂ; ಈ ರಸ್ತೆಯಲ್ಲಿ ದಿನಂಪ್ರತಿ ಓಡಾಡುವ ವಾಹನ ಚಾಲಕರು  ಅರಣ್ಯ ಇಲಾಖೆ ಕ್ರಮವನ್ನು ಸ್ವಾಗತಿಸಿದ್ದಾರೆ. ಮದನಪಲ್ಲಿ ರಸ್ತೆ ತಿರುವುಗಳಲ್ಲಿ ಪ್ರತಿ ವರ್ಷ ವೇಗವಾಗಿ ಚಲಿಸುವ ವಾಹನಗಳು ರಸ್ತೆ ಪಕ್ಕದ ಮರಗಳಿಗೆ ಬಡಿದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಪಘಾತಕ್ಕೆ ಕಾರಣವಾಗುವ ಮರಗಳನ್ನು ತೆಗೆಯುವಂತೆ ಸಾರ್ವಜನಿಕರಿಂದ ಹೆಚ್ಚಿದ ಪರಿಣಾಮ, ವಾಹನ ಚಾಲಕರಿಗೆ ಅಪಾಯ ಎನಿಸಿರುವ ಮರಗಳನ್ನು ಗುರುತಿಸಿ ತೆಗೆಯಲಾಗುತ್ತಿದೆ.ಹೀಗೆ ತೆಗೆಯಲಾಗುತ್ತಿರುವ ಮರಗಳಲ್ಲಿ ಹುಣಸೆ, ಹೊಂಗೆ, ಗುಲ್ ಮೊಹರ್ ಮತ್ತಿತರ ಜಾತಿಯ ಮರಗಳು ಸೇರಿವೆ. ಹುಣಸೆ ಮರಗಳು ಶತಮಾನಗಳಷ್ಟು ಹಳೆಯವಾದರೆ, ಇತರ ಮರಗಳನ್ನು ಅರಣ್ಯ ಇಲಾಖೆ ಬೆಳೆಸಿತ್ತು. ಗುಲ್ ಮೊಹರ್ ಮರಗಳು ಕೆಂಪು ಹೂವುಗಳಿಂದ ಕಂಗೊಳಿಸಿ ರಸ್ತೆಗೆ ಸೊಬಗನ್ನು ನೀಡುತ್ತಿದ್ದವು.ಆದರೆ ಭಾರಿ ಗಾತ್ರದ ಈ ಮರಗಳಿಂದ ಅಪಘಾತ ಸಂಭವಿಸುವ ಸಂಭವ ಇರುವುದರಿಂದ ಅವನ್ನು ತೆರವುಗೊಳಿಸಲಾಗುತ್ತಿದೆ.ಮರ ತೆರವು ಗೊಳಿಸಿದರೆ ಸಾಲದು ಸಂಬಂಧಪಟ್ಟ ಇಲಾಖೆ ತಿರುವುಗಳಲ್ಲಿನ ಬೇಲಿ ಗಿಡಗಳನ್ನೂ ಸಹ ಕಿತ್ತುಹಾಕಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry