ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತ ಕ್ರಮ

7

ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತ ಕ್ರಮ

Published:
Updated:

ಚಿಕ್ಕಬಳ್ಳಾಪುರ: ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ದೂಳಿನ ನಿವಾರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರಸ್ತೆಯಲ್ಲಿನ ಮಣ್ಣು ತೆಗೆಯುವುದರ ಜತೆಗೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇನ್ನು ಬಿಬಿ ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣು ತೆಗೆಯುವ ಮತ್ತು ಡಾಂಬರೀಕರಣ ಮಾಡುವ ಕಾರ್ಯ ಮುಂದುವರೆದಿದೆ.ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯವರೆಗೆ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಇತರ ರಸ್ತೆಗಳಲ್ಲಿ ಕಾಮಗಾರಿ ನಡೆಯಲಿದೆ.ಈ ಕಾಮಗಾರಿಯಿಂದ ದೂಳು ನಿವಾರಿಸಲು ಸಾಧ್ಯವಾಗುವುದು ಅಲ್ಲದೇ ರಸ್ತೆಯು ಕೊಂಚ ವಿಸ್ತರಣೆಗೊಳ್ಳುತ್ತದೆ. ವಾಹನ ದಟ್ಟಣೆ ನಿವಾರಿಸುವಲ್ಲಿ ನೆರವಾಗುತ್ತದೆ. ಮಣ್ಣು ಶೇಖರಣೆಯಾಗುವುದು ಕೂಡ ತಪ್ಪುತ್ತದೆ ಎಂಬ ನಂಬಿಕೆ ಹೊಂದಿರುವ ಜಿಲ್ಲಾಡಳಿತ ಇದರ ಬಗ್ಗೆ ಹೆಚ್ಚಿನ ಆಸಕ್ತಿ ತಳೆದಿದೆ. ಈ ಎಲ್ಲ ಕಾರ್ಯಗಳು ನಡೆದಿದ್ದರೂ ಚಿಕ್ಕಬಳ್ಳಾಪುರ ದೂಳುಮಯ ವಾತಾವರಣದಿಂದ ಮುಕ್ತಗೊಳ್ಳಲು ಇನ್ನೂ ಕೆಲ ದಿನಗಳು ಬೇಕಾಗಬಹುದು.ಸದ್ಯಕ್ಕೆ ಜೂನಿಯರ್ ಕಾಲೇಜು, ಬೆಸ್ಕಾಂ ಕಚೇರಿ ಮುಂದಿನ ರಸ್ತೆಯಲ್ಲಿ ಕಾಮಗಾರಿ ನಡೆದಿದ್ದು, ವಾಪಸಂದ್ರದವರೆಗೆ ಮುಂದುವರೆಸಲಾಗುವುದು. ಕಾಮಗಾರಿಯ ಪ್ರಥಮ ಹಂತದ ರೂಪದಲ್ಲಿ ರಸ್ತೆ ಮಧ್ಯೆ ಮತ್ತು ಬದಿಗಳಲ್ಲಿರುವ ರಾಶಿ ರಾಶಿ ಮಣ್ಣು ತೆಗೆಯಲಾಗುತ್ತದೆ. ಬಳಿಕ ಕಿರಿದಾಗಿ ರಸ್ತೆಯನ್ನು ಅಗೆದು, ಅಲ್ಲಿ ಜಲ್ಲಿಕಲ್ಲುಗಳನ್ನು ಹಾಕಲಾಗುತ್ತದೆ. ನಂತರ ಬೃಹತ್ ವಾಹನ ಮತ್ತು ಕಾರ್ಮಿಕರ ನೆರವಿನಿಂದ ಡಾಂಬರೀಕರಣ ನಡೆಸಲಾಗುತ್ತದೆ.ಸ್ವಚ್ಛತೆಗೆ ಸಂಬಂಧಿಸಿದಂತೆ ನಗರಸಭೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಯಲುವಹಳ್ಳಿ ಗ್ರಾಮಸ್ಥರು ನಗರದ ಸ್ವಚ್ಛತಾ ಕಾರ್ಯ ತೊಡಗಿಕೊಂಡಿದ್ದು ಮತ್ತು ಸಾರ್ವಜನಿಕರಿಗೆ ಮುಖಗವುಸುಗಳನ್ನು (ಮಾಸ್ಕ್) ವಿತರಿಸಿದ್ದು, ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿದೆ. ಮನವಿಪತ್ರಗಳನ್ನು ಸಲ್ಲಿಸಿ ಮತ್ತು ಪ್ರತಿಭಟನೆಗಳನ್ನು ನಡೆಸಿ ಸಾಕಾಗಿದ್ದ ಕೆಲವರು ವಿಭಿನ್ನ ರೀತಿಯಲ್ಲಿ ಜಿಲ್ಲಾಡಳಿತದ ಗಮನ ಸೆಳೆಯಲು ಯತ್ನಿಸಿದರು. ಈ ಎಲ್ಲ ಪ್ರಕ್ರಿಯೆಗಳ  ಜೊತೆಯಲ್ಲೇ ಜಿಲ್ಲಾಡಳಿತವು ಸ್ವಚ್ಛತೆ ಮತ್ತು ರಸ್ತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಂಡಿದೆ.‘ನಗರದಲ್ಲಿ ಕೈಗೊಳ್ಳಲಾಗಿರುವ ಮಹತ್ವಾಕಾಂಕ್ಷಿ ಒಳಚರಂಡಿ ಯೋಜನೆ ಪೂರ್ಣಗೊಳ್ಳುವವರಗೆ ದೂಳನ್ನು ನಿವಾರಿಸುವುದು ಕಷ್ಟಸಾಧ್ಯವಾಗಿದೆ. ರಸ್ತೆಗಳನ್ನು ಅಗೆಯುವ ಮತ್ತು ಮಣ್ಣಿನ ಗುಡ್ಡೆಯ ರಾಶಿ ಹಾಕುವುದರಿಂದ ದೂಳು ಹೆಚ್ಚುತ್ತದೆ. ಇದಕ್ಕೆಂದೇ ಅಲ್ಲಲ್ಲಿ ನೀರು ಸುರಿಯುವ ಮತ್ತು ಮಣ್ಣು ತೆಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವ ಭರವಸೆಯಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry