ಗುರುವಾರ , ಮೇ 19, 2022
25 °C

ರಸ್ತೆ ವಿಸ್ತರಣೆ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಗೇಟ್‌ನಿಂದ ಹಾಸನ ಜಿಲ್ಲೆ ಚಿಂದೇನಹಳ್ಳಿ ಗಡಿವರೆಗೆ ರಸ್ತೆ ನಿರ್ಮಿಸಲು ಸರ್ಕಾರ ಆದೇಶ ನೀಡಿದ್ದರೂ; ಖಾಸಗಿ ಕಂಪೆನಿಯವರು ಹೆಚ್ಚಿನ ಲಾಭ ಪಡೆಯಲು ಭೂ ಸ್ವಾಧೀನಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಹೋರಾಟ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.ಹಾಲಿ ರಸ್ತೆ ವಿಸ್ತರಿಸಿ ಹೊಸ ರಸ್ತೆ ನಿರ್ಮಿಸಲು ಸರ್ಕಾರ ಆದೇಶಿಸಿದ್ದರೂ; ಭೂ ಸ್ವಾಧೀನ ಮಾಡಿಕೊಂಡಿಲ್ಲದ ರೈತರ ಜಮೀನನ್ನು ಅನುಮತಿ ಪಡೆಯದೆ ನೇರ ರಸ್ತೆ ಸಂಪರ್ಕ ಮಾಡಿ ಹಣ ಲಪಟಾಯಿಸುವ ಹುನ್ನಾರ ಮಾಡಲಾಗಿದೆ. ರೈತರ ಜಮೀನುಗಳಲ್ಲಿ ಅಳತೆ ಮಾಡಿ ಗಡಿಗುರುತು ಸರ್ವೆ ನಡೆಸಿದ್ದಾರೆ. ಇದರಿಂದ ರೈತರ ನೆಮ್ಮದಿ ಹಾಳಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ತೆಂಗು, ಅಡಕೆ, ಮಾವು ಹಾಗೂ ಇತರೆ ಬೆಲೆ ಬಾಳುವ ಮರಗಳಿಂದ ಆದಾಯವಿದ್ದು, ಕುಟುಂಬದ ನಿರ್ವಹಣೆ ಈ ಜಮೀನುಗಳಿಂದ ನಡೆಯುತ್ತಿದೆ. ಖಾಸಗಿ ಕಂಪೆನಿ ಲಾಭ ಸಂಪಾದನೆ ದುರುದ್ದೇಶದಿಂದ ರೈತರ ಜಮೀನಿನಲ್ಲಿ ರಸ್ತೆ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಕೈ ಬಿಟ್ಟು ಸರ್ಕಾರದ ಆದೇಶಾನುಸಾರ ಹಾಲಿ ಇರುವ ರಸ್ತೆಯನ್ನೇ ವಿಸ್ತರಿಸಿ ಕಾಮಗಾರಿ ಮಾಡಲು ಆದೇಶ ನೀಡಿ ರೈತರ ಜಮೀನನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಟ್ಟೆರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ಆರ್.ಉಮೇಶ್‌ಚಂದ್ರ ಅವರಿಗೆ ಮನವಿ ಅರ್ಪಿಸಿತು.ಪ್ರತಿಭಟನೆಯಲ್ಲಿ ರೈತರಾದ ಬಿ.ಎಸ್.ಯೋಗಾನಂದ್, ರಾಮೇಗೌಡ, ಜಯಶಂಕರ್, ರೈತ ಸಂಘದ ಸತೀಶ್ ಕೆಂಕೆರೆ, ಗಂಗಾಧರ್, ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ್ ಮುಂತಾದವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.