ಶನಿವಾರ, ಮೇ 21, 2022
25 °C

ರಸ್ತೆ ವಿಸ್ತರಣೆ: 238 ಮರಗಳ ಮಾರಣ ಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ, ಹರಸಾಹಸದಿಂದಲೇ ಸಂಚರಿಸಬೇಕಾದ ನೆಲಮಂಗಲ ಪಟ್ಟಣದ ಪ್ರಮುಖ ರಸ್ತೆ ರೂ. 30ಕೋಟಿ ವೆಚ್ಚದಲ್ಲಿ 80ಅಡಿ ಅಗಲೀಕರಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಅರಿಸಿನಕುಂಟೆ ಬಳಿಯ ನೆಲಮಂಗಲ ಪಟ್ಟಣದ ಬಳಿ ರಸ್ತೆ ತಿರುವಿನಿಂದ (ಬೈಪಾಸ್) ಜಾಸ್‌ಟೋಲ್ ಬಳಿಯ ಹೆದ್ದಾರಿ ಸಂಪರ್ಕದವರೆಗಿನ 5.7ಕಿ.ಮೀ. ಕಾಮಗಾರಿ ಪ್ರಾರಂಭವಾಗಿ ಪಟ್ಟಣ ನಿವಾಸಿಗಳ ಬಹುದಿನದ ಕನಸು ನನಸಾಗಲಿರುವುದು ಸಂತಸ ತಂದಿದೆ ಎನ್ನುತ್ತಾರೆ ಪಟ್ಟಣದ ಹಿರಿಯ ಚೇತನ ಎನ್.ಎಲ್. ಸರ್ವೋತ್ತಮರಾವ್.ರಾಜಧಾನಿಗೆ ಅತ್ಯಂತ ಸನೀಹದಲ್ಲಿರುವ ನೆಲಮಂಗಲ, ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಹೆಬ್ಬಾಗಿಲು, ಜಿಲ್ಲೆಯ ಇತರ ತಾಲ್ಲೂಕುಗಳಿಗೆ ನೆಲಮಂಗಲ ಪಟ್ಟಣವನ್ನು ಹೋಲಿಸಿದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧಿಸದೇ ಮೂಲಭೂತ ಸೌಕರ್ಯಗಳಿಂದ ಬಹುದೂರವಿದೆ ಎಂಬುದು ಬಹುಶೃತವಿಚಾರ. ಜನಪ್ರತಿನಿಧಿಗಳ ಆಂತರಿಕ ರಾಜಕೀಯ ದ್ವೇಷಗಳ ಹುನ್ನಾರಗಳಿಂದ ಬಳಲಿದ್ದ ಪಟ್ಟಣಕ್ಕೆ ಗಾಯದ ಮೆಲೆ ಬರೆ ಎಳೆದಂತೆ ಭೂ ಮಾಫಿಯಾದಿಂದ ಶಾಂತಿ ನೆಮ್ಮದಿ ಕೆಡಿಸುವ ದುರ್ಘಟನೆಗಳು ಈಚೆಗೆ ಹೆಚ್ಚಾಗಿದ್ದು ಸ್ಥಳೀಯರ ನಿದ್ದೆಗೆಡಿಸಿದರೆ, ಭಯಗೊಂಡ ಕೆಲವರು ಮಕ್ಕಳ ವಿದ್ಯಾಭ್ಯಾಸದ ನೆಪದಲ್ಲಿ ಸ್ವಂತ ಮನೆಗಳನ್ನು ಖಾಲಿ ಮಾಡಿಕೊಂಡು ಬೆಂಗಳೂರು-ತುಮಕೂರುಗಳಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರೆ.ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಮತ್ತು ಒಳಚರಂಡಿ ಯೋಜನೆಗಳು ಹಗಲು ಕನಸುಗಳಾಗಿವೆ. ವಿದ್ಯುತ್ ನಿಲುಗಡೆ, ಶುದ್ಧಿಕರಣವಿಲ್ಲದ ಪ್ಲೋರೈಡ್ ನೀರನ್ನೇ ಅವಲಂಬಿಸಿರುವ ಜನಸಾಮಾನ್ಯರಿಗೆ ಚುನಾವಣೆಯ ಮುನ್ನ ಪರಿಹರಿಸುವ ಭರವಸೆ ನೀಡುವವರಿಂದ ಬೇಸತ್ತು ಮುಂದೆ ಬರುವವರ ಬಗ್ಗೆ ಆಶಾಭಾವನೆಯನ್ನು ಕಳೆದುಕೊಂಡಿದ್ದೇನೆ ಅನುಭವಿಸುವುದೊಂದೇ ನಮ್ಮ ಪಾಡು ಎಂದು ದೇವಾಂಗ ಬೀದಿಯ ಯುವಕ ಬಾಲಾಜಿ ನೊಂದು ನುಡಿಯುತ್ತಾರೆ.ಕ್ಷೇತ್ರದ ಪ್ರಗತಿ ರಾಜಕೀಯದಲ್ಲಲ್ಲ ರಚನಾತ್ಮಕ ಧೋರಣೆಯಲ್ಲಿದೆ ಎಂಬುದನ್ನು ನಮ್ಮ ನಾಯಕರು ಮನಗಾಣಬೇಕಾಗಿದೆ ಎಂದು ಹೇಳುವ ಗ್ರಾ.ಪಂ.ಸದಸ್ಯ ಬೈರೇಗೌಡ ಅಭಿವೃದ್ಧಿಯ ಮಾತು ಬಂದಗ ಜಾತಿ ಪಕ್ಷ ಭೇದ ಮರೆತು ಒಂದಾಗಿ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿಗೆ, ಬೆಳಗುವ ದೀಪಕ್ಕೆ, ನಡೆದಾಡುವ ರಸ್ತೆಗೆ ಅದೆಂತ ರಾಜಕೀಯ 80ಅಡಿ ರಸ್ತೆ ನಿರ್ಮಾಣಕ್ಕೆ ಸರ್ವರೂ ಸಹಕಾರ ನೀಡಿ ಪ್ರಗತಿಯನ್ನು ಬೆಂಬಲಿಸಬೇಕು ಎನ್ನುತ್ತಾರೆ.ಹಿಂದೆ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಯನ್ನೇ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನಾಗಿಸಲಾಗಿತ್ತು. ವಾಹನ ಸಂಚಾರದ ದಟ್ಟಣೆಯಿಂದ 1985ರಲ್ಲಿ ಹೊರ ರಸ್ತೆಯನ್ನು (ಬೈಪಾಸ್) ನಿರ್ಮಿಸಲಾಯಿತು. ತದನಂತರ ಏಕಮುಖ ರಸ್ತೆ ಅದು ಸಾಕಾಗದಾಗ ಅದರ ದಟ್ಟಣೆಯನ್ನು ಕಡಿದು ಮಾಡಲು ಈಚೆಗೆ ಎಲಿವೇಟೆಡ್ ಹೈವೆ (ಮೇಲು ಹೆದ್ದಾರಿ) ಕಲ್ಪಿಸಲಾಯಿತು. ಈ ಎಲ್ಲ ಸೌಲಭ್ಯವೂ ಸ್ತಳೀಯರಿಗಿಲ್ಲ, ಹೊರಗಿನವರಿಗೆ. ಉಪನಗರವಾಗಿ ಬೆಳೆಯಬೇಕಾದ ಪ್ರಮುಖ ಪಟ್ಟಣ ನೆಲಮಂಗಲ ಬೆಂಗಳೂರಿಗೆ ಹತ್ತಿರವಿದ್ದದ್ದೇ ಶಾಪವಾಗಿ ನಿರೀಕ್ಷಿತ ಬೆಳವಣಿಗೆ ಕಾಣದೇ ಎಸ್ಟೇಟ್ ವ್ಯವಹಾರದಲ್ಲಿ ಮಾತ್ರ ಬೆಳೆಯಿತು.ಕೋಟಿಗಟ್ಟಲೆ ಹಣಕಾಸಿನ ವ್ಯವಹಾರಗಳಿಂದ ಶಾಂತಿ ನೆಮ್ಮದಿಯನ್ನು ಕದಡಿದೆ. ಈಗಿನ ಪಟ್ಟಣದ ಪ್ರಮುಖ ರಸ್ತೆ 22ಅಡಿ ಅಗಲವಿದೆ(ಹಿಂದಿನ ರಾಷ್ಟ್ರೀಯ ಹೆದ್ದಾರಿಯಿದು) ಹೋಗುವ ಬರುವ ವಾಹನಗಳ ದಟ್ಟಣೆಯಿಂದ ಜನಸಂಖ್ಯೆ ಹೆಚ್ಚಳದಿಂದ ಸದಾ ಗಿಜಿಗುಡುತ್ತಿದ್ದು. ಅಡ್ಡಾದಿಡ್ಡಿ ಸಂಚರಿಸುವ ಜನದನಗಳು, ಬೈಕ್ ಕಾರುಗಳ ನಿಲುಗಡೆ, ರಸ್ತೆಬದಿಯ ವ್ಯಾಪಾರಿಗಳ ಪರಿಣಾಮದಿಂದ ಮೇಲಿಂದ ಮೇಲೆ ಟ್ರಾಫಿಕ್‌ಜಾಮ್ ಉದ್ಭವಿಸಿ ವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ.ಪ್ರಮುಖ ಸ್ಥಳಗಳಾದ ಬಸ್‌ನಿಲ್ದಾಣ, ಮಿನಿ ವಿಧಾನ ಸೌಧ, ಅಂಬೇಡ್ಕರ್ ವೃತ್ತ, ಬಸವನಹಳ್ಳಿ ತಿರುವುಗಳಲ್ಲಿ ಮೇಲಿಂದ ಮೇಲೆ ಜಾಮ್‌ಗಳಾಗುತ್ತಿತ್ತು. 80ಅಡಿ ರಸ್ತೆ ನಿರ್ಮಾಣದಿಂದ ಈ ಸಮಸ್ಯೆ ಬಗೆಹರಿದು ಸುಗಮ ಸಂಚಾರಕ್ಕೆ ನಾಂದಿ ಹಾಡಬಹುದಾಗಿದೆ. ಏತನ್ಮದ್ಯೆ 80ಅಡಿ ನಿರ್ಮಾಣಕ್ಕೆ ಏನೇನು ವಿಘ್ನಗಳು ಕಾದಿವೆಯೆಂದರೆ ರಸ್ತೆಯ ಇಕ್ಕೆಲಗಳಲ್ಲಿರುವ ಮರ ಅಂಗಡಿ ಮನೆ ಮುಂಗಟ್ಟುಗಳಿಗೆ ಅಪಾಯ ತಗುಲುವುದರಿಂದ ಎಲ್ಲರ ಹಿತಕ್ಕಾಗಿ ಸಂಬಂಧಿಸಿದವರು ದೊಡ್ಡ ಮನಸ್ಸು ಮಾಡಬೇಕಾಗಿದೆ.ರಸ್ತೆ ಅಗಲೀಕರಣ ಕಾಮಗಾರಿಗೆ ಮೊದಲ ಕಂತಾಗಿ 3ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ರೂ.11.5ಕೋಟಿ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆ ಇ-ಟೆಂಡರ್ ಕರೆದು ಪ್ರಕ್ರಿಯೆ ಮುಗಿಸಿದೆ. ರಸ್ತೆ ಇಕ್ಕೆಲಗಳಲ್ಲಿದ್ದ 238 ಮರಗಳನ್ನು ಅರಣ್ಯ ಇಲಾಖೆ ಹರಾಜುಗೊಳಿಸಿದ್ದು ಮರಗಳನ್ನು ಕಡಿದುರುಳಿಸುವ ಕಾರ್ಯ ಆರಂಭವಾಗಿದೆ ಎಂದು ಕಾರ್ಯಪಾಲಕ ಅಭಿಯಂತ ಕೆ.ಜಿ.ಶಿವಾನಂದಪ್ಪ ಪ್ರಜಾವಾಣಿಗೆ ತಿಳಿಸಿದ್ದಾರೆ.ಕಾಡು ಬೆಳೆಸಿ ನಾಡು ಉಳಿಸುವ ಹಿನ್ನೆಲೆಯಲ್ಲಿ ಒಂದು ಕಡೆಯ ರಸ್ತೆ ಬದಿಯ ಮರಗಳನ್ನು ಉಳಿಸಿ ಅಗಲೀಕರಣ ಕಾರ್ಯ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು ಎಂಬುದು ಪರಿಸರಪ್ರೆಮಿ ಬಿ.ಸುರೇಶ್ ಆಳ್ವ ಅವರ ಅಭಿಪ್ರಯವಾಗಿದೆ. ವಿಪರ್ಯಾಸವೆಂದರೆ ರಸ್ತೆ ತುರ್ತಾಗಿ ವಿಸ್ತರಣೆಯಾಗಬೇಕಾಗಿರುವುದು ಪಟ್ಟಣದ ಮಧ್ಯಭಾಗವಾದ ಬಸ್‌ನಿಲ್ದಾಣದಿಂದ ಬಸವನಹಳ್ಳಿ ತಿುರುವಿನವರೆಗೆ ಆದರೆ ಈ ಕಾರ್ಯ ಜೇನು ಗೂಡಿಗೆ ಕೈಹಾಕಿದಂತೆ ದುಸ್ಸಾಹಸದ್ದು, ಸುಲಭವಾಗಿರುವ ಕಡೆಗೆ ಎಲ್ಲರ ಗಮನವಾದ್ದರಿಂದ ವಿಶ್ವಶಾಂತಿ ಆಶ್ರಮದಿಂದ - ಜಯಪ್ರಸಾದ್ ನರ್ಸಿಂಗ್ ಹೋಂ ವರೆಗೆ ಕಾಮಗಾರಿ ಪ್ರಾರಂಭಿಸಲು ಕ್ಷಣ ಗಣನೆಯಲ್ಲಿದೆ.ಒಟ್ಟು ರೂ 30ಕೋಟಿ ವೆಚ್ಚದಲ್ಲಿ ಎಕಮುಖ ಸಂಚಾರದ ಈ ಜೋಡಿ ರಸ್ತೆಯಲ್ಲಿ ನಾಲ್ಕು ಪಥಗಳಿದ್ದು ಎರಡೂ ಬದಿಯಲ್ಲಿ 5ಅಡಿ ಒಳಚರಂಡಿ, 10ಅಡಿ ಪದಚಾರಿ ರಸ್ತೆ ಸೇರಿ 25ಮೀಟರ್ ಅಂದರೆ 82.5ಅಡಿ ರಸ್ತೆ ನಿರ್ಮಾಣ ಕಾರ್ಯ ಮರ ಕಡಿಯುವ ಮೂಲಕ ಪ್ರಾರಂಭವಾಗಿದ್ದು. ಅಬ್ಬ! ಇನ್ನಾದರೂ ನೆಲಮಂಗಲ ಪಟ್ಟಣದಲ್ಲಿ ಸಲೀಸಾಗಿ ಹೋಗಬಹುದು ಎಂದು ನಿಟ್ಟುಸಿರು ಬಿಡುವಂತಾಗಿದೆ. ಇತರ ವ್ಯವಸ್ಥೆಗಳ ಬಗ್ಗೆ ಅಸಮದಾನವಿದ್ದರೂ ರಸ್ತೆ ನಿರ್ಮಾಣವಾಗಲಿದೆ ಎಂಬುದೇ ಸಾರ್ವಜನಿಕರಿಗೆ ಸಮಾದಾನದ ವಿಷಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.