ಭಾನುವಾರ, ಜನವರಿ 26, 2020
23 °C

ರಸ್ತೆ ಸಂಚಾರ ನಿಯಮ ಪಾಲಿಸಿ; ಜೀವ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಉತ್ತಮ ಗುಣಮಟ್ಟದ ರಸ್ತೆಗಳಿದ್ದರೂ ಸಹ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ವಾಹನ ಚಾಲನೆಯ ನಿರ್ಲಕ್ಷತನವೇ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡಬೇಕು~ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.ಇಲ್ಲಿನ ಜೆಎಸ್‌ಎಸ್ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ನಿಯಮಗಳನ್ನು ತಿಳಿಸುವುದರ ಜೊತೆಗೆ ನಿಯಮಗಳ ಚಿಹ್ನೆಗಳನ್ನು ಪ್ರತಿಯೊಂದು ಸ್ಥಳದಲ್ಲಿ ಅಳವಡಿಸಬೇಕು ಎಂದರು.ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಯಾವುದೇ ಒಂದು ವ್ಯವಸ್ಥೆ ಅಭಿವೃದ್ಧಿಯಾಗಬೇಕಾದರೆ ಸಾರಿಗೆ ಸಂಪರ್ಕ ಉತ್ತಮವಾಗಿರಬೇಕು. ಇದರಿಂದ ಜೀವನ ಗುಣಮಟ್ಟ ಸುಧಾರಣೆ ಸಾಧ್ಯ. ಸಾರಿಗೆ ನಿಯಮಗಳು ಸಾರ್ವಜನಿಕರಿಂದ ಹಾಗೂ ಇಲಾಖೆಗಳಿಂದ ಸಹ ಪಾಲನೆ ಆಗಬೇಕು. ವಾಹನಗಳ ವೇಗದ ಮಿತಿ ಕಡಿಮೆಗೊಳಿಸಿ ಪ್ರತಿಯೊಬ್ಬರು ತಾಳ್ಮೆಯಿಂದ ವಾಹನ ಚಾಲನೆ ಮಾಡಿದಾಗ ಅಪಘಾತಗಳನ್ನು ತಡೆಗಟ್ಟಬಹುದು. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದ ಅವರು, ನಗರಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಉತ್ತಮ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೇಳಿದರು.ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿ, ರಸ್ತೆ ಸುರಕ್ಷತೆಯಲ್ಲಿ ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕು. ರಸ್ತೆ ಸಂಚಾರಿ ಕಾನೂನುಗಳನ್ನು ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪುರಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿ, ರಸ್ತೆ ಸಾರಿಗೆ ಕಾನೂನು ನಿಯಮಗಳ ಬಗ್ಗೆ ಜಾಗೃತಿಯನ್ನುಂಟು ಮಾಡುವುದು ಈ ಸಪ್ತಾಹದ ಉದ್ದೇಶ. ಪ್ರತಿ ವರ್ಷ ದೇಶದಲ್ಲಿ ನಾಲ್ಕು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ಒಂದು ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಅಪಘಾತಗಳ ಮೂಲಕ ಸುಮಾರು 5 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಬೇಕಾಗಿದೆ. ಇದಕ್ಕೆ ರಸ್ತೆ ನಿಯಮಗಳನ್ನು ಪಾಲಿಸದಿರುವುದು ಮೂಲ ಕಾರಣ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.ಪ್ರಾಚಾರ್ಯ ಡಾ. ಎಸ್.ಎನ್.ಹೆಗಡೆ ಮಾತನಾಡಿದರು. ಪ್ರೊ. ಸುಕನ್ಯಾ ಮಾರುತಿ ವೇದಿಕೆಯಲ್ಲಿದ್ದರು. ಉಪ ಪ್ರಾಚಾರ್ಯ ಡಾ. ಎಲ್.ಎಚ್.ಭಜಂತ್ರಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಬಿ.ಡಿ.ತಹಶೀಲ್ದಾರ ವಂದಿಸಿದರು.`ಚಟಗಳಿಂದ ಮುಕ್ತರಾಗಿ~

ಹುಬ್ಬಳ್ಳಿ: `ಸಾರಿಗೆ ಸಂಸ್ಥೆಯ ನೌಕರರು ಚಟಗಳಿಂದ ಮುಕ್ತರಾಗಿರಿ~ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಸಲಹೆ ನೀಡಿದರು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ನಗರದ ಗ್ರಾಮೀಣ ಘಟಕದಲ್ಲಿ ಸೋಮವಾರ ಏರ್ಪಡಿಸಿದ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಹುಬ್ಬಳ್ಳಿ ವಿಭಾಗದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಇದರಿಂದ ಬಸ್‌ಗಳ ದುರಸ್ತಿಗೆ ಹಾಗೂ ಪರಿಹಾರವಾಗಿ ಕೋಟ್ಯಂತರ ರೂಪಾಯಿ ಕೊಡಬೇಕು. ಆಗ ಸಿಬ್ಬಂದಿಗೆ ಕೊಡಬೇಕಾದ ಭತ್ಯೆ ಮೊದಲಾದ ಸೌಲಭ್ಯಗಳು ತಡವಾಗುತ್ತವೆ. ಸಂಸ್ಥೆಯು ನಷ್ಟ ಅನುಭವಿಸಲು ಇದೂ ಕಾರಣ~ ಎಂದು ಅವರು ಹೇಳಿದರು.`ಚಾಲಕರ ಬೇಜವಾಬ್ದಾರಿತನದಿಂದ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಿ. ಮುಖ್ಯವಾಗಿ ಸರಿಯಾಗಿ ನಿದ್ದೆ ಮಾಡಿ. ನಿದ್ದೆಗೆಟ್ಟು ಬಸ್ ಓಡಿಸಬೇಡಿ. 50 ಪ್ರಯಾಣಿಕರ ಜೀವಗಳು ನಿಮ್ಮ ಕೈಯಲ್ಲಿರುತ್ತವೆ ಎಂಬುದನ್ನು ಮರೆಯಬೇಡಿ. ಜೀವ ಅಮೂಲ್ಯವೆಂದು ತಿಳಿಯಿರಿ. ಬಸ್‌ಗಳು ರಸ್ತೆಗಿಳಿಯುವ ಮುನ್ನ ಮೆಕ್ಯಾನಿಕ್‌ಗಳು ಬ್ರೇಕ್ ವೈಫಲ್ಯ ಪರಿಶೀಲಿಸಬೇಕು. ಮುಖ್ಯವಾಗಿ ಪಗಾರಕ್ಕಾಗಿ ದುಡಿಯದೆ ಅರ್ಪಣಾ ಮನೋಭಾವದಿಂದ ದುಡಿಯಿರಿ~ ಎಂದು ಅವರು ಕಿವಿಮಾತು ಹೇಳಿದರು.ವಾಕರಸಾ ಸಂಸ್ಥೆ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಹಾಗೂ ಕಲ್ಯಾಣಾಧಿಕಾರಿ ಎಸ್.ಕೆ. ಹಳ್ಳಿ, ಅಪಘಾತ ಪರಿಹಾರವಾಗಿ ಪ್ರತಿ ವರ್ಷ ರೂ. 10-12 ಕೋಟಿ ನೀಡಲಾಗುತ್ತದೆ. ಇದು ಕಡಿಮೆಯಾಗಬೇಕು. ಮುಂಬೈ, ಪುಣೆ, ಬೆಂಗಳೂರು ಮೊದಲಾದ ದೂರದ ಊರುಗಳಿಗೆ ಹೋದಾಗ ಸರಿಯಾಗಿ ವಿಶ್ರಾಂತಿ ಪಡೆದು ಕರ್ತವ್ಯ ನಿರ್ವಹಿಸಿ. ಸಂಸ್ಥೆಯ ಉಳಿದ ವಿಭಾಗಗಳಲ್ಲಿ ಪ್ರತಿ ವರ್ಷ 60-70 ಸಿಬ್ಬಂದಿ ಮೃತಪಟ್ಟರೆ ಹುಬ್ಬಳ್ಳಿ ವಿಭಾಗದಲ್ಲಿ 120-140 ಸಿಬ್ಬಂದಿ ನಿಧನರಾಗುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾದಷ್ಟು ಪರಿಹಾರ ನೀಡಿಕೆ ಕಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.`ಹೃದಯಘಾತ ಹಾಗೂ ಕಿಡ್ನಿ ವೈಫಲ್ಯವೆಂದು ಪ್ರತಿ ವರ್ಷ ರೂ. 3-4 ಕೋಟಿ ಮುಂಗಡ ನೀಡಲಾಗುತ್ತಿದೆ. ಇದರೊಂದಿಗೆ 50 ವರ್ಷ ಮೇಲ್ಪಟ್ಟವರು ತಮ್ಮ ಸೇವಾ ಅವಧಿಯೊಳಗೇ ನಿಧನರಾಗುತ್ತಿದ್ದಾರೆ. 30-40 ವಯಸ್ಸಿನೊಳಗಿನ ಸಿಬ್ಬಂದಿ ಎಚ್‌ಐವಿ ಬಾಧಿತರಾಗಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಕಾಪಾಡಿಕೊಂಡು ಸುರಕ್ಷಿತವಾಗಿ ಬಸ್‌ಗಳನ್ನು ಓಡಿಸಿ~ ಎಂದು ಅವರು ಸಲಹೆ ನೀಡಿದರು.ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೇಮರಾಜು, ದೇಶದಾದ್ಯಂತ ಪ್ರತಿ ವರ್ಷ ನಡೆಯುವ ರಸ್ತೆ ಅಪಘಾತಗಳಲ್ಲಿ 1 ಲಕ್ಷ ಜನರು ಮೃತಪಡುತ್ತಾರೆ. ಇದು ದೊಡ್ಡ ಸಂಖ್ಯೆಯೆಂದು ಎಲ್ಲರೂ ತಿಳಿಯಬೇಕು. ಚಾಲನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತರಬೇತಿ ಪಡೆಯಬೇಕು. ಜೊತೆಗೆ ನೇತ್ರ ತಪಾಸಣಾ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದರು. `ಅಶಕ್ತರಾದವರು ಸ್ವಯಂ ನಿವೃತ್ತಿ ಪಡೆಯಬಹುದು. ಅಂಥವರಿಗೆ ರೂ. 2 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎನ್. ಸಂಗಪ್ಪ, ಸಂಸ್ಥೆಗೆ ಹೊಸದಾಗಿ ಸೇರಿದವರು ಪ್ರತಿ ನಿತ್ಯ 200-250 ಗೈರುಹಾಜರಾಗುತ್ತಿದ್ದಾರೆ. 6 ತಿಂಗಳ ಹಿಂದೆ ಸೇರಿದವರು ಏನೇನೋ ನೆಪ ಹೇಳಿ ರಜೆ ಪಡೆಯುತ್ತಿರುವುದು ಗಾಬರಿ ಹುಟ್ಟಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವಾಸನ್ ಐ ಕೇರ್ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಜು ಗುಡೆಣ್ಣವರ, ಮಧುಮೇಹ ತಜ್ಞ ಡಾ. ಪ್ರಮೋದ ಹಿರೇಮಠ ಹಾಗೂ ನೇತ್ರ ತಜ್ಞ ಡಾ.ಮಿಲಿಂದ ಗಲಗಲಿ ಹಾಜರಿದ್ದರು.ಸುನೀಲ ಪತ್ರಿ ಪ್ರಾರ್ಥನೆ ಗೀತೆ ಹಾಡಿದರು. ಶಶಿಧರ ಚನ್ನಪ್ಪಗೌಡರ ಸ್ವಾಗತಿಸಿದರು. ಐ.ಐ. ಕಡ್ಲಿಮಟ್ಟಿ ವಂದಿಸಿದರು. ಪಿ.ವೈ. ನಾಯಕ ನಿರೂಪಿಸಿದರು.`ಹೆಲ್ಮೆಟ್ ಬಳಸಿ~


`ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಪ್ರಾಣಕ್ಕೂ ಹಾನಿ ಹಾಗೂ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದಕ್ಕಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ~ ಎಂದು ಸಂಸದ ಪ್ರಹ್ಲಾದ ಜೋಶಿ ಸಲಹೆ ನೀಡಿದರು.ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಗರದಲ್ಲಿ ಸೋಮವಾರ ಏರ್ಪಡಿಸಿದ ರ‌್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.`ಹೆಲ್ಮೆಟ್ ಧರಿಸದೆ ಅಸಂಖ್ಯ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ಕುಡಿದು ವಾಹನ ಓಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರು ಹೇಳಿದರು ಎನ್ನುವ ಕಾರಣಕ್ಕೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದಿಲ್ಲ. ನಿರಂತರವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು~ ಎಂದು ಅವರು ಸಲಹೆ ನೀಡಿದರು.ರಸ್ತೆ ಸುರಕ್ಷತಾ ನಿಯಮಗಳ ಕುರಿತ ಕರಪತ್ರವನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಪೊಲೀಸ್ ಕಮೀಷನರ್ ಡಾ.ಕೆ. ರಾಮಚಂದ್ರ ರಾವ್, ಡಿಸಿಪಿಗಳಾದ ಪಿ.ಆರ್. ಬಟಕುರ್ಕಿ,  ಹಾಗೂ ಎಸ್.ಎಂ. ಪ್ರತಾಪನ್, ಸಂಚಾರ ಎಸಿಪಿ ಎನ್.ಎಸ್. ಪಾಟೀಲ ಮೊದಲಾದವರು ಹಾಜರಿದ್ದರು.ನಂತರ ಮೂರುಸಾವಿರಮಠದಿಂದ ಹೊರಟ ರ‌್ಯಾಲಿಯು ಇಂದಿರಾ ಗಾಜಿನ ಮನೆಗೆ ತಲುಪಿ ಅಂತ್ಯಗೊಂಡಿತು. ರ‌್ಯಾಲಿಯಲ್ಲಿ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)