ರಹದಾರಿ ಬುಟ್ರೆ ಯಡವಟ್ಟೆ!

7

ರಹದಾರಿ ಬುಟ್ರೆ ಯಡವಟ್ಟೆ!

Published:
Updated:

ದಹಿಸುತಿರಲೆಮ್ಮನು ಆಯ್ಕೆಗಳ ಕವಲುಗಳು/

ಸಹಜವದು ಅವುಗಳನು ತಬ್ಬಿ ಹಿಡಿಯುವುದು/

ಸಹನೆಯಿಂದಲೆ ನೀನು ಕವಲುಗಳ ಪರಿಕಿಸುತ/

ರಹದಾರಿ ತೊರೆಯದಿರು-ನವ್ಯಜೀವಿ//ಬಹಳ ಹಿಂದೆ ನಾನು `ಐಬಿಎಂ~ ಕಂಪೆನಿಯಲ್ಲಿದ್ದಾಗ ಡಿಸೈನ್ ಎಂಜಿನಿಯರಿಂಗ್ (ತಾಂತ್ರಿಕ ವಿನ್ಯಾಸ) ಕುರಿತಾಗಿ ಜಪಾನಿನಿಂದ ಬಂದಿದ್ದ ತಂಡವೊಂದರೊಡನೆ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಾಟಿಯ(ಸಿಎಟಿಐಎ) ಎಂಬ ವಿನ್ಯಾಸ ತಂತ್ರಾಂಶದ ಬಗ್ಗೆ ನಾನು ಮಾತನಾಡಿದ್ದೆ. ಕಾರ್ಯಕ್ರಮದ ನಡುವಿನ ಕಾಫಿ ಬ್ರೇಕ್‌ನಲ್ಲಿ ಜಪಾನಿನಲ್ಲಿ ದೊಡ್ಡ ದೊಡ್ಡ ಟಿಲ್ಲರುಗಳನ್ನು ತಯಾರಿಸುತ್ತಿದ್ದ ಒಬ್ಬರು ನನ್ನೊಡನೆ `ಕಾಟಿಯಾ~ ಬಗ್ಗೆ ಮಾತಿಗಿಳಿದಿದ್ದರು.ಅವರ ಟಿಲ್ಲರುಗಳ ಬಗ್ಗೆ ಸಾಕಷ್ಟು ಮಾತನಾಡಿದ ನಂತರ ಹೇಗೆ ಕಾಟಿಯಾ ಅವರ ಎರಡು ಟಿಲ್ಲರುಗಳ ವಿಶೇಷತೆಯನ್ನು ಒಂದರಲ್ಲೇ ಅಳವಡಿಸಲು ಸಹಾಯಕವಾದೀತು ಎಂಬ ಬಗ್ಗೆ ನಾನು ವಿವರಿಸಿದ್ದೆ. ಅದನ್ನೊಪ್ಪಿದರೂ ಅವರು ಅಂತಹ ವಿನ್ಯಾಸದಲ್ಲಿ ತೊಡಗಿಕೊಳ್ಳಲು ತಯಾರಿರಲಿಲ್ಲ. ಅದಕ್ಕೆ ಆತ ನೀಡಿದ ಕಾರಣ ಸರಳ, `ನಮ್ಮ ಟಿಲ್ಲರ್ ಒಂದೇ ಕೆಲಸವನ್ನು ಮಾಡಿದರೂ ಆ ಕೆಲಸದಲ್ಲಿ ಆ ಟಿಲ್ಲರ್ ಅತ್ಯುತ್ತಮವಾಗಿರಬೇಕು.

 

ಅದಕ್ಕೆ ಪೂರಕವಲ್ಲದ ಮತ್ತೊಂದು ಕಾರ್ಯವೈಖರಿಯನ್ನು ಅಳವಡಿಸಿಕೊಳ್ಳಲು ನಾವು ಮುಂದಾದಾಗ, ನಮ್ಮ ಮೂಲ ಕಾರ್ಯದಕ್ಷತೆಯಲ್ಲಿ ಸ್ವಲ್ಪ ಮಟ್ಟಿಗೆ ನಾವು ಹಿಂದೆ ಬೀಳುತ್ತೇವೆಂಬುದೇ ನಾವು ಈ ಕ್ಷೇತ್ರದಲ್ಲಿ ಕಂಡುಕೊಂಡಿರುವ ಸತ್ಯ~.ಅವರ ಮಾತನ್ನು ಕೇಳುವಾಗ ನನಗೆ ಕಾಟಿಯಾ ಅಥವಾ ಟಿಲ್ಲರುಗಳ ಬಗ್ಗೆ ಅವರೊಡನೆ ಸಂವಾದ ಮುಂದುವರೆಸಬೇಕೆಂಬ ಒತ್ತಾಸೆ ಮುಗಿದು ಹೋಗಿತ್ತು. ಬದಲಾಗಿ ಆತನೊಡನೆ ಈ ಕ್ಷೇತ್ರದಲ್ಲಿ ಅವರು ತಮ್ಮ ಅನುಭವದಿಂದ ಕಂಡುಕೊಂಡಿರುವ ಸತ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಉತ್ಸುಕತೆ ಜಾಸ್ತಿಯಾಗಿತ್ತು.ಏಕೆಂದರೆ, ತಾಂತ್ರಿಕ ವಿನ್ಯಾಸದ ತಂತ್ರಾಂಶಗಳ ಸಹಾಯದಿಂದ ಏನೆಲ್ಲ ಮಾಡಬಹುದಾದರೂ, ಏನನ್ನು ಮಾಡಬೇಕು ಅಥವಾ ಮಾಡಬಾರದು ಎಂಬ ನಿರ್ಧಾರ ಮಾತ್ರ ಮನುಜ ಸದೃಶವಾದ ಸ್ವಂತ ಅನುಭವ ಹಾಗೂ ವಿವೇಕವನ್ನೇ ಆಧರಿಸುತ್ತದೆ!ಇದೇ ಚಿಂತನೆಯನ್ನು ಅತ್ಯಂತ ಸರಳವಾಗಿ ಉದಾಹರಿಸಬೇಕೆಂದರೆ ಗಾಂಧೀಬಜಾರಿನ `ವಿದ್ಯಾರ್ಥಿ ಭವನ~ಕ್ಕೆ ಬಂದು ನಿಲ್ಲುತ್ತದೆ. ನನಗೆ ಬುದ್ಧಿ ಬಂದಂದಿನಿಂದ ಗಾಂಧೀಬಜಾರಿನಲ್ಲಿದ್ದಾಗಲೆಲ್ಲ ಸಮಯ ಮಾಡಿಕೊಂಡು ಅಲ್ಲಿನ ವಿದ್ಯಾರ್ಥಿ ಭವನ ಹೋಟೆಲಿಗೆ ಹೋಗಿಬರುವುದು ನಾನು ಅತ್ಯಂತ ಶ್ರದ್ಧೆಯಿಂದ ಮಾಡುವ ಕೆಲಸ! ದಶಕಗಳಿಂದ ನೋಡುತ್ತಿದ್ದೇನೆ.ಅಲ್ಲಿ ಮಾಡುವುದು ದೋಸೆ, ಮದ್ದೂರು ವಡೆ, ಕೆಲವೊಮ್ಮೆ ಉಪ್ಪಿಟ್ಟು ಅಷ್ಟೆ. ದೋಸೆ ಎಂದರೆ ಅದು ಎಂದೆಂದಿಗೂ ಒಂದೇ ಬಗೆ. ನೂರೆಂಟು ತರಾವರಿ ದೋಸೆಗಳೆಲ್ಲ ಅದರ ಹತ್ತಿರಕ್ಕೂ ಸುಳಿದಿಲ್ಲ. ಹಾಗೂ ದೋಸೆಗೆ ಅಲ್ಲಿ ಚಟ್ನಿ ಮಾತ್ರವೇ ಸಿಗುತ್ತದೆ. ಅದೂ ಒಂದೇ ಬಗೆ!ಇಷ್ಟನ್ನು ಬಿಟ್ಟು ಮತ್ತಿನ್ನೇನನ್ನೂ ಮಾಡುವುದಿಲ್ಲವಾದರೂ ಗಾಂಧೀಬಜಾರಿನ ಹೆಸರಿನ ಜತೆಯಲ್ಲೇ ವಿದ್ಯಾರ್ಥಿ ಭವನದ ಹೆಸರೂ ಜೋಡಣೆಯಾಗಿರುವುದು ವಿಶೇಷವೇ ಹೌದು. ಇತ್ತೀಚೆಗೆ ಹಳೆಯ ಹೋಟೆಲಿಗೆ ಮರಮತ್ತು ಮಾಡಿ ಸ್ವಲ್ಪ ಮಟ್ಟಿಗೆ ನವೀನಗೊಳಿಸಿದ್ದಾರೆ. ಆದರೆ ಅಲ್ಲಿ ಈಗಲೂ ಅದೇ ಮೇಜು-ಕುರ್ಚಿಗಳು.ಗೋಡೆಯಲ್ಲಿ ಅದೇ ಹೆಮ್ಮೆಯ ಕನ್ನಡಿಗರ ಭಾವಚಿತ್ರಗಳು, ಅದೇ ಪ್ಲೇಟುಗಳು, ಅದೇ ಗ್ಲಾಸುಗಳು, ಅದೇ ಸಪ್ಲೈರುಗಳು, ಅದೇ ಧೋರಣೆಗಳು ಹಾಗೂ ಅದೇ ದೋಸೆ ಹಾಗೂ ಚಟ್ನಿ. ದರದಲ್ಲಿನ ಏರಿಕೆಯೊಂದನ್ನು ಬಿಟ್ಟು ಅಲ್ಲಿ ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಎಲ್ಲವೂ ಅದೇ!ಯೋಚಿಸಿ ನೋಡಿ, ಹೊಸ ಹೊಸ ತಿಂಡಿಗಳನ್ನು, ಅದರಲ್ಲೂ ಚೈನೀಸ್ ಅಲ್ಲದ ಚೈನೀಸ್ ತಿಂಡಿಗಳನ್ನು ಹಾಗೂ ಪಂಜಾಬಿ ಅಲ್ಲದ ಉತ್ತರ ಭಾರತದ ಖಾಧ್ಯಗಳನ್ನು ಮೆನುಗೆ ಸೇರಿಸುವುದು ಕಷ್ಟದ ಮಾತಲ್ಲ. ಆದರೆ ಹಾಗೆ ಮಾಡಿದ್ದರೆ ವಿದ್ಯಾರ್ಥಿ ಭವನ, ವಿದ್ಯಾರ್ಥಿ ಭವನವಾಗಿಯೇ ಉಳಿಯುತ್ತಿರಲಿಲ್ಲ.

 

ಎಲ್ಲರೊಡನೆ ಕರಗಿ ಒಂದಾಗುತ್ತಿತ್ತೇ ಹೊರತು ತನ್ನದೇ ನಿಟ್ಟಿನಲ್ಲಿ ಎಂದಿಗೂ ಮುಂದಾಗುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ದೋಸೆ ಎಂದಾಕ್ಷಣ ಅದರ ಹೆಸರನ್ನು ಜನ ಮೇಲ್ಪಂಕ್ತಿಯಲ್ಲಿ ಮಾತನಾಡಿಕೊಳ್ಳುತ್ತಿರಲಿಲ್ಲ.ಅಂದಾಕ್ಷಣ, ಅಲ್ಲಿನ ದೋಸೆಯಲ್ಲಿನ ರುಚಿ ಹಾಗೂ ಗುಣಮಟ್ಟ ಅಂದಿನಿಂದ ಇಂದಿಗೂ ಒಂದೇ ತರ ಎನ್ನುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ದೋಸೆಯ ರುಚಿಯಲ್ಲಿ ಸ್ವಲ್ಪ ಮಟ್ಟಿಗೆ ಏನೋ ಎಡವಟ್ಟಾಗಿದೆ. ಅದರ ಗುಣಮಟ್ಟದಲ್ಲಿ ಏನೋ ಏರುಪೇರಾಗಿದೆ. ಆದರೂ ಅದೇ ದೋಸೆ-ಚಟ್ನಿ, ಅದೇ ಮೇಜು-ಕುರ್ಚಿ, ಅದೇ ಭಾವಚಿತ್ರಗಳು ಒಟ್ಟಾರೆ ಈ ಅಲ್ಪವಾದ ನ್ಯೂನತೆಯನ್ನು ಮರೆಮಾಡಿಸಿ ಬಿಡುತ್ತವೆ.

 

ರುಚಿ ಹಾಗೂ ಗುಣಮಟ್ಟದ ವಿಚಾರದಲ್ಲಿ ದಿನೇ ದಿನೇ ಶೀಘ್ರವಾಗಿ ಜಾರುತ್ತಿರುವ ಊರಿನ ಇನ್ನಿತರ ಖಾನಾವಳಿಗಳ ನಡುವೆ, ವಿದ್ಯಾರ್ಥಿ ಭವನ ತನ್ನ ಎಂದಿನ ಅಗ್ರಸ್ಥಾನದಲ್ಲೇ ನಿಂತುಬಿಡುತ್ತದೆ.ಅಂದರೆ, ಒಮ್ಮೆ ಯಾವುದಾದರೂ ವಿಷಯದಲ್ಲಿ ಮುಂದಾಳುತನ ಗಿಟ್ಟಿಸಿಕೊಂಡು ಆ ಮೂಲ ಹಾದಿಯನ್ನು ಬದಲಿಸದೆ ಯಾರು ಮುಂದುವರೆಯುತ್ತಾರೋ ಅವರೆಲ್ಲ ಮುಂದಾಳುಗಳಾಗಿಯೇ ಪರಿಗಣನೆಗೆ ಒಳಗಾಗುತ್ತಾರೆ. ಅವರ ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖವಾದರೂ ಅದು ಅಷ್ಟಾಗಿ ಲೋಕದ ಗಮನಕ್ಕೆ ಬರುವುದಿಲ್ಲ.ಆದರೆ, ಯಾರು ಹಿಡಿದ ಹಾದಿಯನ್ನು ಮುಂದುವರೆಸುತ್ತಾ ಅದರಲ್ಲೇ ಉತ್ತಮಗೊಳ್ಳುವತ್ತ ಪ್ರಾಮಾಣಿಕವಾದ ಹೆಜ್ಜೆಗಳನ್ನು ಇಡುತ್ತಾರೋ, ಅವರ ಬಗ್ಗೆ ಲೋಕ ಯಾವುದೇ ಆಕ್ಷೇಪಣೆ ಎತ್ತದೆ, ಅವರು ಸರ್ವದಾ ಪ್ರಗತಿಯ ಹಾದಿಯಲ್ಲೇ ಇರುತ್ತಾರೆಂಬುದು ವಾಣಿಜ್ಯ ಕ್ಷೇತ್ರದ ಒಂದು ಸತ್ಯ.ಬೋರ್ಡ್‌ರೂಮಿನ ಸುತ್ತಮುತ್ತಲಿನವರು ಶೀಘ್ರ ಲಾಭದ ಆಸೆಗೋ ಅಥವಾ ತ್ವರಿತ ಹೆಸರಿನ ಮೋಹಕ್ಕೋ ಬಲಿಯಾಗಿ ಹತ್ತಾರು ದಾರಿಗಳನ್ನು ಸವೆಸುವ ಬದಲು,  ದೀರ್ಘಾಯುಷ್ಯದ ಕನಸಿನಲ್ಲಿ ಹಿಡಿದ ಒಂದು ಕೆಲಸದಲ್ಲೇ ಕಂಪೆನಿಯನ್ನು ಇನ್ನೂ ಸದೃಢಗೊಳಿಸುತ್ತ ಮುಂದೆ ಸಾಗುವುದು ಸಮಂಜಸವಾದೀತು.ಮ್ಯಾನೇಜ್‌ಮೆಂಟಿನಲ್ಲಿ ಇದನ್ನು ನಾವು `ಡಿ.ಎನ್.ಎ~ ಎಂದು ಕರೆಯುವುದು. ಪ್ರತಿಯೊಂದು ಕಂಪೆನಿಗೂ ಅವರದೇ ಆದ ಆತ್ಮಶಕ್ತಿ, ವೈಶಿಷ್ಟ್ಯತೆ ಹಾಗೂ ಪರಿಣತಿ ಇರುತ್ತದೆ. ಇದು ಆ ಕಂಪೆನಿಯ ಮೂಲ ಗುಣಾಣು (ಗುಣಾಣು ಅಂದರೆ ಜೀನ್ಸ್) ಅದನ್ನು ತೊರೆದು ಅಥವಾ ಅದನ್ನು ನಿರ್ಲಕ್ಷಿಸಿ ಯಶವನ್ನು ಮತ್ತೆಲ್ಲೋ ಹುಡುಕುವ ಪ್ರಯತ್ನವನ್ನು ಮಾಡಲೇಬಾರದು.ಹೊಸ ಹೊಸ ಆಯಾಮಗಳೆಲ್ಲ ಮೂಲ ಗುಣಾಣುವಿನ ತೀರ ಹತ್ತಿರಕ್ಕಿರಬೇಕು, ಅದಕ್ಕೆ ಪೂರಕವಾಗಿರಬೇಕು. ಅದನ್ನು ಮತ್ತಷ್ಟೂ ಪುಷ್ಠಿಗೊಳಿಸಿ ಸಮೃದ್ಧಗೊಳಿಸುವಂತಿರಬೇಕು. ಆಗ ಕವಲೊಡೆದ ದಾರಿಗಳೂ ವಿರುದ್ಧ ದಿಕ್ಕಿಗೆ ಸಾಗದೆ ಪಕ್ಕದಲ್ಲೇ ಸರಿಯುತ್ತ ಮುಂದೆಲ್ಲೋ ಒಂದಕ್ಕೆ ಒಂದಾಗಿ ಬೆರೆತು ಹೋಗಿ ಮತ್ತಷ್ಟೂ ವಿಶಾಲವಾದ ಹೆದ್ದಾರಿಯಾಗಿ ಬಿಡುತ್ತದೆ.`ಇನ್ಫೋಸಿಸ್~ ಸಂಸ್ಥೆಯ ಮೊದಲ ವರುಷಗಳಲ್ಲಿ ಕಂಪೆನಿ ಸಾಫ್ಟ್‌ವೇರ್ (ತಂತ್ರಾಂಶ) ಜತೆಯಲ್ಲೇ ಹಾರ್ಡ್‌ವೇರ್ (ಯಂತ್ರಾಂಶ) ಬಿಜಿನೆಸ್ ಕೂಡ ಹಮ್ಮಿಕೊಂಡಿತ್ತು ಎಂಬುದು ಪ್ರಾಯಶಃ ಬಹುತೇಕ ಮಂದಿಗೆ ತಿಳಿದಿಲ್ಲ. ಎಲೆಕ್ಟ್ರಾನಿಕ್ ಟೆಲೆಕ್ಸ್ ಉಪಕರಣಗಳನ್ನು ತಯಾರು ಮಾಡುತ್ತಿತ್ತು.ಆದರೆ, ಎರಡೇ ವರ್ಷಗಳಲ್ಲಿ ಈ ಯಂತ್ರಾಂಶದ ಹಾದಿ ತನ್ನ ಮೂಲ ಗುಣಾಣುವಾದ ತಂತ್ರಾಂಶದ ಹಾದಿಗೆ ಅಡ್ಡಿ ಮಾಡುತ್ತಿದೆ ಎಂದು ಅರಿವಿಗೆ ಬಂದ ಆ ಕ್ಷಣವೇ ನಾರಾಯಣಮೂರ್ತಿ ಅವರು ಯಂತ್ರಾಂಶದ ಚಟುವಟಿಕೆಗಳನ್ನು ಪೂರ್ಣ ಸ್ಥಗಿತಗೊಳಿಸಿ ಕೊನೆಗೆ ಆ ವಿಭಾಗವನ್ನೇ ಮುಚ್ಚಿಬಿಟ್ಟರು.

 

ಕಂಪೆನಿಯ ಎಲ್ಲ ಸಮಯ ಹಾಗೂ ಚೇತನವನ್ನು ತಂತ್ರಾಂಶದ ಒಂದೇ ಕೆಲಸದಲ್ಲಿ ತೊಡಗಿಸಿಬಿಟ್ಟರು. ಅವರ ಕಂಪೆನಿಯ ಇಂದಿನ ಯಶಸ್ಸಿಗೆ ಶುರುವಿನಲ್ಲೇ ಅವರು ತೆಗೆದುಕೊಂಡ ಇಂಥ ನಿಲುವುಗಳೇ ಮೂಲ ಕಾರಣ ಎಂಬುದು ನನ್ನ ಅಭಿಮತ.ಆದ್ದರಿಂದಲೇ ನಮ್ಮ ಜನಪದ ವಿವೇಕ ಒಂದು ಮಾತನ್ನು ಹೇಳುತ್ತದೆ. `ರಹದಾರಿ ಬುಟ್ರೆ ಯಡವಟ್ಟೆ!~ ಎಷ್ಟು ಅರ್ಥಗರ್ಭಿತವಾಗಿದೆ ನೋಡಿ. ಇತ್ತೀಚಿನ ದಿನಗಳಲ್ಲಿ ಮದಿರೆಯ ವ್ಯಾಪಾರದಲ್ಲಿ ಅಗ್ರಗಣ್ಯವೆನಿಸಿದ್ದ ಕಂಪೆನಿಯೊಂದು ಹೇಗೆ ತನ್ನ ಮೂಲ ಗುಣಾಣುವಿಗೆ ವ್ಯತಿರಿಕ್ತವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾ ತೊಂದರೆಗಳಿಗೆ ಸಿಲುಕಿದೆ ಎಂಬುದನ್ನು ನೋಡುವಾಗ ನನಗೆ ನಮ್ಮ ಜನಪದದ ವಿವೇಚನೆಯ ಮಾತುಗಳಲ್ಲಿ ನಂಬುಗೆ ಇಮ್ಮಡಿಯಾಗುತ್ತದೆ.

 

ಈ ಕಂಪೆನಿ ಆದಷ್ಟು ಬೇಗ ಈ ಸಂಕಷ್ಟ ಸ್ಥಿತಿಯಿಂದ ಹೊರಬರುವಂತಾಗಲಿ ಎಂದು ಹಾರೈಸುತ್ತಲೇ ಈ ಕತೆಯ ಪರಿಸಮಾಪ್ತಿ ಹೇಗೆ ಆದೀತು ಎಂಬ ಕುತೂಹಲದೊಂದಿಗೇ ನಿಮ್ಮನ್ನಿಂದು ಬೀಳ್ಗೊಡುತ್ತಿದ್ದೇನೆ.... ಲೇಖಕರನ್ನು  satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry