ರಹೀಮ್ ನಬಿ `ವರ್ಷದ ಫುಟ್‌ಬಾಲ್ ಆಟಗಾರ'

7

ರಹೀಮ್ ನಬಿ `ವರ್ಷದ ಫುಟ್‌ಬಾಲ್ ಆಟಗಾರ'

Published:
Updated:

ನವದೆಹಲಿ (ಐಎಎನ್‌ಎಸ್): ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ನೀಡುವ `ವರ್ಷದ ಆಟಗಾರ' ಪ್ರಶಸ್ತಿಗೆ ಮೋಹನ್ ಬಾಗನ್ ಕ್ಲಬ್‌ನ ಸಯ್ಯದ್ ರಹೀಮ್ ನಬಿ ಆಯ್ಕೆಯಾಗಿದ್ದಾರೆ.


ಗುರುವಾರ ಇಲ್ಲಿನ ಫುಟ್‌ಬಾಲ್ ಹೌಸ್‌ನಲ್ಲಿ ನಡೆದ ಎಐಎಫ್‌ಎಫ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಫುಟ್‌ಬಾಲ್ ಫೆಡರೇಷನ್‌ನ ಅಧ್ಯಕ್ಷ ಪ್ರಫುಲ್ ಪಟೇಲ್ ಈ ವಿಷಯ ತಿಳಿಸಿದರು.

 

`ನಬಿ ಫುಟ್‌ಬಾಲ್‌ನಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಈ ಪ್ರಶಸ್ತಿ ಅವರಿಗೆ ಲಭಿಸಿರುವುದು ಖುಷಿ ನೀಡಿದೆ' ಎಂದು ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಸಂತಸ ವ್ಯಕ್ತಪಡಿಸಿದ್ದಾರೆ. 

 

`ರಹೀಮ್ ನಬಿಗೆ ಅಭಿನಂದನೆಗಳು. ಈ ಆಟಗಾರನ ಭವಿಷ್ಯದ ದಿನಗಳು ಉಜ್ವಲವಾಗಿರಲಿ. ಬೇಗನೇ ಚೇತರಿಸಿಕೊಳ್ಳಲಿ' ಎಂದು ಭಾರತ ತಂಡದ ತರಬೇತುದಾರ ವಿಮ್ ಕೊವರ್‌ಮನ್ಸ್ ಸಂತಸ  ವ್ಯಕ್ತಪಡಿಸಿದ್ದಾರೆ. ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಾಗನ್ ತಂಡಗಳ ನಡುವೆ ಪಂದ್ಯ ನಡೆಯುವ ವೇಳೆ ನಬಿ ತಲೆಗೆ ಪೆಟ್ಟು ಬಿದ್ದಿತ್ತು.

 

1992ರಲ್ಲಿ ಮೊದಲ ಸಲ ಈ ಪ್ರಶಸ್ತಿಯನ್ನು ಐ.ಎಂ.ವಿಜಯನ್‌ಗೆ ನೀಡಲಾಗಿತ್ತು. ಇತ್ತೀಚಿನ ಐದು ವರ್ಷಗಳಲ್ಲಿ ಸುನಿಲ್ ಚೆಟ್ರಿ (2007), ಬೈಚುಂಗ್ ಭುಟಿಯಾ (2008), ಸುಬ್ರತಾ ಪಾಲ್ (2009), ಗೌರಮಂಗಿ ಸಿಂಗ್ (2010) ಹಾಗೂ ಸುನಿಲ್ ಚೆಟ್ರಿ (2011) ಅವರಿಗೆ ಪ್ರಶಸ್ತಿ ನೀಡಲಾಗಿದೆ. ವಿವಿಧ ಐ ಲೀಗ್ ಕ್ಲಬ್‌ಗಳ ಕೋಚ್‌ಗಳು ಮತ ಚಲಾಯಿಸುವ ಮೂಲಕ `ವರ್ಷದ ಆಟಗಾರ'ನನ್ನು ಆಯ್ಕೆ ಮಾಡಲಾಗುತ್ತದೆ. ಮತದಾನ ಪ್ರಕ್ರಿಯೆ ಡಿಸೆಂಬರ್ 14 ರಂದು ಮುಕ್ತಾಯವಾಗಿತ್ತು. ಈ ಪ್ರಶಸ್ತಿಯನ್ನು ಇದುವರೆಗೂ ಒಟ್ಟು 18 ಕ್ರೀಡಾಪಟುಗಳಿಗೆ ನೀಡಲಾಗಿದೆ.

 

ನಬಿ ಬಗ್ಗೆ...

49 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಬಿ ಐದು ಗೋಲುಗಳನ್ನು ಗಳಿಸಿದ್ದಾರೆ. 2007, 09 ಹಾಗೂ 2012ರ ನೆಹರೂ ಕಪ್, 2008ರ ಎಎಫ್‌ಸಿ ಕಪ್ ಹಾಗೂ 2011ರಲ್ಲಿ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಈ `ವಿಂಗರ್' ಆಡಿದ್ದರು. ಟಾಟಾ ಫುಟ್‌ಬಾಲ್ ಅಕಾಡೆಮಿ, ಮಹಮ್ಮಡನ್, ಈಸ್ಟ್ ಬೆಂಗಾಲ್ ಕ್ಲಬ್‌ಗಳಿಂದಲೂ ಇವರು ಕಣಕ್ಕಿಳಿದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry