ರಾಂಚಿ ಅಥ್ಲೆಟಿಕ್ಸ್: ರಾಜ್ಯದ ಮುಂದುವರಿದ ಪ್ರಯತ್ನ

7

ರಾಂಚಿ ಅಥ್ಲೆಟಿಕ್ಸ್: ರಾಜ್ಯದ ಮುಂದುವರಿದ ಪ್ರಯತ್ನ

Published:
Updated:

ಬೆಂಗಳೂರು: ರಾಂಚಿಯಲ್ಲಿ ಸೆಪ್ಟೆಂಬರ್‌ ಏಳರಿಂದ ನಡೆಯಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುವ ಅವಕಾಶ ಪಡೆಯಲು ರಾಜ್ಯದ ಕ್ರೀಡಾ ಇಲಾಖೆಯೇ ಅಲ್ಲದೆ, ಹಲವು ಕ್ರೀಡಾಸಕ್ತರು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಗೊಂದಲದಿಂ­ದಾಗಿ ಭಾನುವಾರ ಸ್ವತಃ ಕ್ರೀಡಾ ಇಲಾಖೆಯೇ ಭಾನುವಾರ ಆಯ್ಕೆ ಟ್ರಯಲ್ಸ್‌ ನಡೆಸಿ ಕರ್ನಾಟಕ ತಂಡವನ್ನು ಆಯ್ಕೆ ಮಾಡಿ ಪಟ್ಟಿ­ಯನ್ನು ಭಾರತ ಅಥ್ಲೆಟಿಕ್ ಫೆಡರೇಷನ್‌ಗೆ (ಎಎಫ್‌ಐ) ಕಳುಹಿಸಿ ಕೊಟ್ಟಿತ್ತು. ಆದರೆ ಈ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಕಾರಣ ನೀಡಿದ ಎಎಫ್‌ಐ ಕಾರ್ಯ­ದರ್ಶಿ ವಲ್ಸನ್‌ ಅವರು ಸೋಮವಾರ ರಾತ್ರಿಯೇ ಕರ್ನಾಟಕ ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದು ‘ರಾಜ್ಯ ತಂಡಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿಯೇ ತಿಳಿಸಿದ್ದರು.ಆದರೆ ಮಂಗಳವಾರ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಎಎಫ್‌ಐ ಮನವೊಲಿ­ಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್‌ ಉದಯ ಪ್ರಭು ಅವರು ವಲ್ಸನ್‌ ಅವರ ಜತೆಯಲ್ಲಿ ದೂರವಾಣಿ ಮೂಲಕ ಹಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಉದಯ ಪ್ರಭು ‘ಆಡಳಿತಾತ್ಮಕ ಸಮಸ್ಯೆಯಿಂದ ಅಥ್ಲೀಟ್‌ಗಳಿಗೇಕೆ ತೊಂದರೆ ಎಂದು ತಾವು ವಲ್ಸನ್‌ ಅವರನ್ನು ಕೇಳಿದೆ’ ಎಂದರು.‘ವಲ್ಸನ್‌ ಮಾತನಾಡಿ ಸರ್ಕಾರದ ಯತ್ನ­ವನ್ನು ಗೌರವಿಸುವುದಾಗಿ ಹೇಳಿದರಲ್ಲದೆ, ಎಲ್ಲವೂ ನಿಯಮಬದ್ಧವಾಗಿ ನಡೆಯಬೇಕು. ಅವು­ಗಳನ್ನು ಉಲ್ಲಂಘಿಸುವಂತಿಲ್ಲ. ಹೀಗಾಗಿ ಸರ್ಕಾರದ ಕೋರಿಕೆಯನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದರು’ ಎಂದೂ ಪ್ರಭು ಅವರು ಹೇಳಿದರು.ಪಟಿಯಾಲದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿರುವ ರಾಜ್ಯದ ಅಶ್ವಿನಿ ಅಕ್ಕುಂಜಿ ಮತ್ತು ಹೆಚ್‌.ಎಂ.ಜ್ಯೋತಿ ಅವರು ಎಎಫ್‌ಐ ಧ್ವಜದ ಅಡಿಯಲ್ಲಿಯೇ ಸ್ಪರ್ಧಿಸಲು ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry