ಭಾನುವಾರ, ನವೆಂಬರ್ 17, 2019
21 °C

ರಾಂಪಾಲ್ ಆಟಕ್ಕೆ ಕೊಹ್ಲಿ ಮೆಚ್ಚುಗೆ

Published:
Updated:
ರಾಂಪಾಲ್ ಆಟಕ್ಕೆ ಕೊಹ್ಲಿ ಮೆಚ್ಚುಗೆ

ಬೆಂಗಳೂರು: ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಆಲ್‌ರೌಂಡರ್ ರವಿ ರಾಂಪಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ ರೋಚಕ ಪಂದ್ಯದಲ್ಲಿ ರಾಂಪಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದರು.`ರಾಂಪಾಲ್ ಟ್ವೆಂಟಿ-20 ಕ್ರಿಕೆಟಿಗೆ ಹೇಳಿ ಮಾಡಿಸಿದ ಆಟಗಾರ. ರೋಚಕ ಅಂತ್ಯ ಕಂಡ ಎರಡೂ ಪಂದ್ಯಗಳಲ್ಲಿ ಅವರು ಬೌಲಿಂಗ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಡೇರ್‌ಡೆವಿಲ್ಸ್ ಎದುರಿನ ಪಂದ್ಯದಲ್ಲಿ ಫಲಿತಾಂಶ ನಮ್ಮ ಪರವಾಗಿ ಬರಲು ಕಾರಣ ರಾಂಪಾಲ್' ಎಂದು ಈ ಪಂದ್ಯದ ಬಳಿಕ ಕೊಹ್ಲಿ ಹೇಳಿದರು.

ಈ ಪಂದ್ಯ ಟೈ ಆಗಿತ್ತು. ಡೇರ್‌ಡೆವಿಲ್ಸ್ ಗಳಿಸಿದ 152 ರನ್‌ಗಳಿಗೆ ಉತ್ತರವಾಗಿ ಚಾಲೆಂಜರ್ಸ್ ಕೂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಹಾಗಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಇದರಲ್ಲಿ ಚಾಲೆಂಜರ್ಸ್ 15 ರನ್ ಗಳಿಸಿತು. ಇದಕ್ಕೆ ಕಾರಣ ಡಿವಿಲಿಯರ್ಸ್ ಎತ್ತಿದ ಎರಡು ಸಿಕ್ಸರ್. ಇದಕ್ಕೆ ಉತ್ತರವಾಗಿ ಡೇರ್‌ಡೆವಿಲ್ಸ್ ಪೇರಿಸಿದ್ದು ಕೇವಲ 11 ರನ್. ಈ ಓವರ್ ಮಾಡಿದ್ದು ವಿಂಡೀಸ್‌ನ ರಾಂಪಾಲ್.`ಈ ವರ್ಷ ನಾವು ಹರಾಜಿನಲ್ಲಿ ಆಟಗಾರರು ಖರೀದಿಸುವಾಗ ರಾಂಪಾಲ್ ನಮ್ಮ ತಂಡಕ್ಕೆ ಬೇಕು ಎಂದು ನಾನು ಹಟ ಹಿಡಿದಿದ್ದೆ. ಏಕೆಂದರೆ ಅವರು ಬೌಲಿಂಗ್‌ನಲ್ಲಿ ಮಾತ್ರವಲ್ಲ; ಬ್ಯಾಟಿಂಗ್‌ನಲ್ಲಿ ಉಪಯುಕ್ತ ಆಟಗಾರ. ಡೆವಿಲ್ಸ್ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ ಅವರು ಸಿಕ್ಸರ್ ಎತ್ತದಿದ್ದರೆ ನಾವು ಸೋಲುತ್ತಿದ್ದೆವು' ಎಂದರು.

ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಸುಲಭವಾಗಿ ಗೆಲ್ಲಬಹುದಿತ್ತು ಎಂಬುದನ್ನು ವಿರಾಟ್ ಒಪ್ಪಿಕೊಂಡರು. `ಈ ಬಾರಿ ನಾವು ಉತ್ತಮ ಪ್ರದರ್ಶನವನ್ನೇ ತೋರುತಿದ್ದೇವೆ. ಆದರೆ, ನಿಜ ಹೇಳಬೇಕೆಂದರೆ ಈ ಪಂದ್ಯ ಸೂಪರ್ ಓವರ್‌ಗೆ ಹೋಗುವ ಅಗತ್ಯವೇ ಇರಲಿಲ್ಲ. ನಾನು ಔಟಾಗಿದ್ದು ನನಗೆ ತುಂಬಾ ಸಿಟ್ಟು ತರಿಸಿತು. ಏಕೆಂದರೆ ಆ ಸಂದರ್ಭದಲ್ಲಿ ನಾನು ಚೆನ್ನಾಗಿಯೇ ಆಡುತ್ತಿದ್ದೆ. ಆದರೆ ನನಗೆ ಸರಿಯಾಗಿ ಸ್ಟ್ರೈಕ್ ಲಭಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು ಚಾಣಾಕ್ಷತನದ ಆಟ ತೋರಬೇಕಿತ್ತು' ಎಂದು ನುಡಿದರು.ರಾಂಪಾಲ್ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಮುಂದಿನ ಪಂದ್ಯಗಳಲ್ಲಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರಿಗೆ ತಂಡದಲ್ಲಿ ಸ್ಥಾನ ದೊರೆಯುವುದು ಅನುಮಾನ ಎಂದು ಕೊಹ್ಲಿ ತಿಳಿಸಿದರು. `ಮುರಳೀಧರನ್ ಶ್ರೇಷ್ಠ ಆಟಗಾರ. ಅವರು ಯಾವುದೇ ತಂಡಕ್ಕೆ ಪ್ರಮುಖ ಆಸ್ತಿ. ಆದರೆ ತಂಡದಲ್ಲಿ ವಿದೇಶದ ನಾಲ್ಕು ಆಟಗಾರರಿಗೆ ಮಾತ್ರ ಅವಕಾಶವಿದೆ. ಈಗ ವೇಗಿ ರಾಂಪಾಲ್ ಬ್ಯಾಟಿಂಗ್‌ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಮುರಳಿಗೆ ಜಾಗ ಕಲ್ಪಿಸುವುದು ಕಷ್ಟ' ಎಂದರು. ಆದರೆ ಈ ಪಂದ್ಯವನ್ನು ನಿಗದಿತ 20 ಓವರ್‌ಗಳ ಒಳಗೆ ನಾವು ಮುಗಿಸಬಹುದಿತ್ತು ಎಂದು ಆರ್‌ಸಿಬಿ ತಂಡದ ಮತ್ತೊಬ್ಬ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದರು.

ಪ್ರತಿಕ್ರಿಯಿಸಿ (+)