ಭಾನುವಾರ, ಮೇ 16, 2021
23 °C

ರಾಕೆಟ್ ಅವಶೇಷ ಪತ್ತೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಎಪಿ): ಆಕಾಶಕ್ಕೆ ಹಾರಿದ ಒಂದೇ ನಿಮಿಷದಲ್ಲಿ ಸ್ಫೋಟಿಸಿ ಹಳದಿ ಸಮುದ್ರಕ್ಕೆ ಚದುರಿ ಬಿದ್ದ ಉತ್ತರ ಕೊರಿಯಾದ ಉಪಗ್ರಹವನ್ನು ಹೊತ್ತ ರಾಕೆಟ್‌ನ ಭಗ್ನಾವಶೇಷಗಳನ್ನು ಶೋಧಿಸುವ ಕಾರ್ಯ ಆರಂಭವಾಗಿದೆ. ದ.ಕೊರಿಯಾ ಯುದ್ಧನೌಕೆಗಳು ಶುಕ್ರವಾರದಿಂದಲೇ  ಅವಶೇಷಗಳ  ಶೋಧದಲ್ಲಿ ತೊಡಗಿವೆ. ಅಮೆರಿಕದ ಗೂಢಚರ ಮತ್ತು ಯುದ್ಧ ನೌಕೆಗಳು ಈ ಕಾರ್ಯದಲ್ಲಿ ಕೈಜೋಡಿಸುವ ನಿರೀಕ್ಷೆ ಇದ್ದು, ಬಿಡಿ ಭಾಗಗಳ ಸಹಾಯದಿಂದ ಉಡಾವಣೆಯ ವೈಫಲ್ಯಕ್ಕೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲಿವೆ. ನೆರೆಯ ಎದುರಾಳಿ ರಾಷ್ಟ್ರದ ಕ್ಷಿಪಣಿ ಸಾಗರಕ್ಕೆ ಬೀಳುತ್ತಿದ್ದಂತೆಯೇ ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯವು ಭಗ್ನಾವಶೇಷಗಳ ಪತ್ತೆಗೆ ನೌಕಾದಳದ ಹತ್ತು ಯುದ್ಧ ನೌಕೆಗಳನ್ನು ನಿಯೋಜಿಸಿದ್ದು ಶೋಧ  ಮುಂದುವರಿದಿದೆ.

ತನ್ನ ದೇಶದ ಕಡಲಲ್ಲಿ ಕ್ಷಿಪಣಿಯ ಚೂರುಗಳು ಬೀಳದ ಕಾರಣ  ಶೋಧ ಕಾರ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಜಪಾನ್ ಸ್ಪಷ್ಟಪಡಿಸಿದೆ. ಶೋಧಕ್ಕೆ ಅಡ್ಡಿ ಪಡಿಸದಂತೆ ಅದು ಉ.ಕೊರಿಯಾಕ್ಕೆ ಮನವಿ ಮಾಡಿದೆ.ಅಮೆರಿಕ ಕಿಡಿ: ಉಡಾವಣೆಯಾಗಿ ಕೆಲವೇ ನಿಮಿಷದಲ್ಲಿ ಸಮುದ್ರಕ್ಕೆ ಬಿದ್ದ ಉಪಗ್ರಹದ ಅಭಿವೃದ್ಧಿ ಯೋಜನೆಗಾಗಿ ಲಕ್ಷಾಂತರ ಡಾಲರ್ ವೆಚ್ಚ ಮಾಡಿದ ಉತ್ತರ ಕೊರಿಯಾದ ನಾಯಕರ ನಿಲುವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಖಂಡಿಸಿದ್ದಾರೆ. `ದೇಶದ ಜನರು ಹಸಿವಿನಿಂದ ಕಂಗೆಟ್ಟಿರುವಾಗ ರಾಷ್ಟ್ರದ ನಾಯಕರು ಉಪಗ್ರಹ ಯೋಜನೆಗೆ ಅಪಾರ ಮೊತ್ತದ ಹಣವನ್ನು ಅನಗತ್ಯವಾಗಿ ಪೋಲುಮಾಡುತ್ತಿದ್ದಾರೆ~ ಎಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳನ್ನು ಉಲ್ಲಂಘಿಸುವ ಮೂಲಕ ಉ.ಕೊರಿಯಾ ಏಕಾಂಗಿಯಾಗಿದೆ. ಅದರ ಹಠಮಾರಿತನ ಭವಿಷ್ಯದಲ್ಲಿ ಖಂಡಿತ ಮತ್ತಷ್ಟು ಸಂಕಷ್ಟ ಮತ್ತು ಗಂಡಾಂತರ ತಂದೊಡ್ಡಲಿದೆ ಎಂದು ಒಬಾಮ ಎಚ್ಚರಿಕೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.