ರಾಜಕಾರಣದ ರುಚಿ

7

ರಾಜಕಾರಣದ ರುಚಿ

Published:
Updated:

ರಾಜಕೀಯದ ಮೋಹ ಮತ್ತು ಸೆಳೆತ ಈಗ ಅಣ್ಣಾ ಹಜಾರೆ ಅವರ ಮಾಜಿ ಅನುಯಾಯಿ, ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರನ್ನು ಸುತ್ತಿಕೊಂಡಿದೆ.

 

ರಾಜಕಾರಣಿಗಳನ್ನು, ರಾಜಕೀಯವನ್ನು ಮೂದಲಿಸುತ್ತ ಬಂದ ಅವರೇ ಈಗ ರಾಜಕಾರಣದ ಸಾಗರಕ್ಕೆ ಧುಮುಕಲು ಹೊರಟಿದ್ದಾರೆ. ನವೆಂಬರ್ 26ರಂದು ಹೊಸ ಪಕ್ಷಕ್ಕೆ ನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ.

 

`ಭ್ರಷ್ಟ ನಾಯಕರ ಕಾಲ ಇನ್ನು ಮುಗಿಯಿತು. ಎಲ್ಲ ಪಕ್ಷಗಳೂ ಜನರಿಗೆ ಮೋಸ ಮಾಡಿವೆ. ನಾವು ರಾಜಕೀಯ ಸಮರಕ್ಕೆ ಸಿದ್ಧರಾಗಿದ್ದೇವೆ~ ಎಂದು ಗುಡುಗಿದ್ದಾರೆ. ಪರ್ಯಾಯ ರಾಜಕೀಯ ಸಂಸ್ಕೃತಿ ತರುವುದು ಮತ್ತು ಚುನಾವಣಾ ತಂತ್ರಗಾರಿಕೆಗಳನ್ನು ಬದಲಾಯಿಸುವುದು ಭಾವೀ ಪಕ್ಷದ ಉದ್ದೇಶ.

 

ಈ ಸಂದರ್ಭದಲ್ಲಿ ಮುನ್ನೋಟದ ಕರಡು ಪತ್ರವನ್ನು ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮತ್ತಿತರರ ತಂಡ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಹೊಸ ಪಕ್ಷದಿಂದ ಸ್ಪರ್ಧಿಸಿ ಚುನಾಯಿತರಾಗುವ ಶಾಸಕರು ಮತ್ತು ಸಂಸದರು ಕೆಂಪು ದೀಪದ ಕಾರುಗಳನ್ನು ಬಳಸುವುದಿಲ್ಲ, ಸರ್ಕಾರಿ ಬಂಗಲೆಗಳಲ್ಲಿ ತಂಗುವುದಿಲ್ಲ.ಪೊಲೀಸರ ಬೆಂಗಾವಲು ಕೇಳುವುದಿಲ್ಲ. `ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇರುವುದಿಲ್ಲ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ನಿರ್ಧಾರವನ್ನು ಮೇಲಿರುವ ನಾಯಕರು ತೆಗೆದುಕೊಳ್ಳುವುದಿಲ್ಲ. ಜನರೇ ಅಭ್ಯರ್ಥಿಯನ್ನು ತೀರ್ಮಾನಿಸಲಿದ್ದಾರೆ~ ಎಂದು ತಂಡದ ಪ್ರಮುಖರಲ್ಲಿ ಒಬ್ಬರಾದ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಇವೆಲ್ಲ ಕೇಳಲು ಬಹಳ ಇಂಪಾಗಿವೆ, ಆಕರ್ಷಕವಾಗಿವೆ.ವಾಸ್ತವದಲ್ಲಿ ಅಕ್ಷರಶಃ ಅನುಷ್ಠಾನಕ್ಕೆ ಬಂದರೆ ಇಡೀ ದೇಶದ ಸಾರ್ವಜನಿಕ ಬದುಕಿನ ಚಿತ್ರಣವೇ ಬದಲಾಗಲಿದೆ. ಭ್ರಷ್ಟಾಚಾರ ತುಂಬಿದ ದೇಶ ಎಂಬ ಕಳಂಕ ಅಳಿಸಿಹೋಗಲಿದೆ. ಆದರೆ ಅಷ್ಟೊಂದು ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದೇ?ಏಕೆಂದರೆ ಹಿಂದೆಲ್ಲ ಹೊಸ ಹೊಸ ಪಕ್ಷಗಳ ಉದಯದ ಕಾಲದಲ್ಲಿ ಇಂಥ ಬಣ್ಣದ ಮಾತುಗಳನ್ನು ಕೇಳಿ ರೋಮಾಂಚನಗೊಂಡಿದ್ದ ಜನಕ್ಕೆ ಭ್ರಮ ನಿರಸನವಾಗಿದೆ. ಚುನಾವಣೆಗೆ ನಿಲ್ಲುವಾಗ ಆಶ್ವಾಸನೆಗಳ ಹೊಳೆ ಹರಿಸಿ, ಕನಸಿನ ಗೋಪುರ ಕಟ್ಟಿ ಅಧಿಕಾರ ಸಿಕ್ಕ ನಂತರ ವ್ಯವಸ್ಥೆ ಜತೆ ತಾವೂ ಒಂದಾದವರ ದ್ರೋಹದಿಂದ ಜನ ಬೇಸತ್ತು ಹೋಗಿದ್ದಾರೆ.

 

ಈ ವಿಷಯದಲ್ಲಿ ರಾಜಕೀಯ ಮಹಾತ್ವಾಕಾಂಕ್ಷಿ ಬುದ್ಧಿಜೀವಿಗಳು ಕೂಡ ಕಡಿಮೆಯೇನಲ್ಲ. ಕೇಜ್ರಿವಾಲ್‌ಗಿಂತ ಮೊದಲೂ ಅನೇಕ ಬುದ್ಧಿಜೀವಿಗಳು ಜನರಲ್ಲಿ ಬಹಳಷ್ಟು ಭರವಸೆ ಮೂಡಿಸಿ ಕೊನೆಗೆ ನಿರಾಸೆಯ ಪ್ರಪಾತಕ್ಕೆ ನೂಕಿದ್ದರು. ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದಿದ್ದ ಚಳವಳಿ, ಇಡೀ ದೇಶದ ಯುವಜನರಲ್ಲಿ ಒಂದು ರೀತಿಯ ಸಂಚಲನ ಉಂಟುಮಾಡಿತ್ತು.ರಾಜಕೀಯ ಆಕಾಂಕ್ಷೆಗಳಿಲ್ಲದೆ ಜಾಗೃತಿ ಮೂಡಿಸುವ ಕೆಲಸಕ್ಕೆ ಸಿಕ್ಕ ಬೆಂಬಲ ರಾಜಕೀಯ ಪಕ್ಷವಾಗಿ ಜನರ ಮುಂದೆ ನಿಂತಾಗ ಸಿಗುತ್ತದೆ ಎಂದು ಹೇಳಲಾಗದು. ರಾಜಕೀಯಕ್ಕೆ ಇಳಿಯುವ ಮುನ್ನ ಪ್ರಾಮಾಣಿಕತೆಯ ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದ ಎಷ್ಟೋ ಯುವಜನ ರಾಜಕೀಯದ ಸ್ಪರ್ಶವಾದೊಡನೆ ಭ್ರಷ್ಟಾತಿಭ್ರಷ್ಟರಾದದ್ದನ್ನು ಜನ ನೋಡುತ್ತಲೇ ಬಂದಿದ್ದಾರೆ.

 

ಅಲ್ಲದೆ ಸಾಮೂಹಿಕ ಜನ ಬೆಂಬಲವಿಲ್ಲದೆ ಯಾವುದೇ ರಾಜಕೀಯ ಬದಲಾವಣೆ, ಪ್ರಯೋಗ ಅಸಂಭವ. ಆದರೆ ಕೇಜ್ರಿವಾಲ್ ಪ್ರಯೋಗ ಹಾಗಾಗದಿರಲಿ ಎಂಬುದು ಎಲ್ಲರ ಪ್ರಾಮಾಣಿಕ ಬಯಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry