ಗುರುವಾರ , ಏಪ್ರಿಲ್ 22, 2021
23 °C

ರಾಜಕಾರಣಿಗಳ ಮೊಸಳೆ ಕಣ್ಣೀರಿಗೆ 32 ವರ್ಷ!

ಪ್ರಜಾವಾಣಿ ವಾರ್ತೆ ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

ನರಗುಂದ: ನರಗುಂದ ಎಂದಾಕ್ಷಣ ಎಲ್ಲರಿಗೂ ವೀರ ಬಾಬಾಸಾಹೇಬರ ಬಂಡಾಯ ಹಾಗೂ ರೈತ ಬಂಡಾಯಗಳೇ ನೆನಪಾಗುತ್ತವೆ. ಆದರೆ ರೈತ ಬಂಡಾಯ ನಡೆದು ಇದೇ 21ಕ್ಕೆ 32 ವರ್ಷ ಕಳೆದವು. ಇದೇ ನೆನಪಿನಲ್ಲಿ ಹುತಾತ್ಮ ದಿನಾಚರಣೆ ನಡೆಯಲಿದೆ. ಆದರೆ ಈ ಭಾಗದ  ರೈತರ  ಬೇಡಿಕೆಗಳು ಮಾತ್ರ ಈಡೇರಲೇ ಇಲ್ಲ. ರೈತರ ಹೆಸರಿನಲ್ಲಿ ಅಧಿಕಾರ ಪಡೆದು ರೈತರನ್ನು  ಮರೆತ  ಹಾಲಿ ಹಾಗೂ ಮಾಜಿ  ರಾಜಕಾರಣಿಗಳ ದಂಡು  ಮಾತ್ರ ಮತ್ತೇ ಈ ದಿನದಂದು ಚಾಚು ತಪ್ಪದೇ ಆಗಮಿಸುತ್ತವೆ. ಮೊಸಳೆ ಕಣ್ಣೀರಿನ ಭಾಷಣಗಳ ಸುರಿಮಳೆಗೆ ಮತ್ತೆ ವೇದಿಕೆಗಳು  ಸಿದ್ಧವಾಗತೊಡಗಿವೆ.ರೈತ ಬಂಡಾಯ: ನರಗುಂದ, ನವಲಗುಂದ,  ಸವದತ್ತಿ, ರಾಮದುರ್ಗ  ಸೇರಿದಂತೆ  ವಿವಿಧ ಸುತ್ತಮುತ್ತಲಿನ ಪ್ರದೇಶಗಳಿಗೆ ಮಲಪ್ರಭೆಯ ನೀರು ಹರಿಸುವ  ಸಲುವಾಗಿ ನವಿಲುತೀರ್ಥದ ಬಳಿ  1980 ರಲ್ಲಿ ಜಲಾಶಯವನ್ನು ನಿರ್ಮಿಸಲಾಯಿತು. ಆದರೆ ಅದರ  ಅಭಿವದ್ಧಿ ಕರವಾಗಿ ಎಲ್ಲ ರೈತರ ಮೇಲೆ ಅಂದಿನ ಸರಕಾರ ಬೆಟರ್‌ಮೆಂಟ್ ಶುಲ್ಕವಾಗಿ ಪ್ರತಿ ಎಕೆರೆಗೆ ರೂ 1000-1500 ವಿಧಿಸಿತು. ಸರಿಯಾಗಿ ಕಾಲುವೆಗಳಿಗೆ ನೀರು ಹರಿಯದೇ ಇದ್ದಾಗ  ರೈತರು ಅದನ್ನು ತುಂಬಲು  ನಿರಾಕರಿಸಿದರು.ಇದರ ವಿರುದ್ಧ ರಾಜಶೇಖರಪ್ಪ ಹೊಸಕೇರಿ, ಶಿವಪ್ಪ ಬಾಳಿಕಾಯಿ, ಶಿವಪ್ಪ ನೆಗಳೂರು, ಬಸಪ್ಪ ಗಾಣಿಗೇರ, ಶಿವದೇವಗೌಡ ಪಾಟೀಲ, ವಿ.ಎನ್.ಹಳಕಟ್ಟಿ ಸೇರಿದಂತೆ 21 ಸದಸ್ಯರ ನೇತತ್ವದಲ್ಲಿ ಸುತ್ತಮುತ್ತಲಿನ 7 ತಾಲ್ಲೂಕುಗಳಲ್ಲಿ ರೈತ ಹೋರಾಟ ಆರಂಭವಾದವು.ಇದಕ್ಕೆ ಸರಕಾರ ಮಣಿಯಲಿಲ್ಲ.  ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡರು. ಸರಕಾರ ಮಣಿಯದಿದ್ದಾಗ 1980ರ  ಜೂನ್ ತಿಂಗಳಲ್ಲಿ ನರಗುಂದ ತಹಶೀಲ್ದಾರ ಕಚೇರಿ ಎದುರು ಸತ್ಯಾಗ್ರಹ ಆರಂಭವಾಯಿತು. ದಿನಕ್ಕೊಂದು ರೀತಿಯಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಕೊನೆಗೆ 1980 ಜುಲೈ 21ರಂದು  ನರಗುಂದದ  ರೈತರು ರೊಚ್ಚಿಗೆದ್ದರು. ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು ತಹಶೀಲ್ದಾರ  ಕಚೇರಿ ಪ್ರವೇಶಿಸಲು ಪ್ರಯತ್ನಿಸಿದರು. ಒಳಗೆ ಬಿಡದಿದ್ದಾಗ ರೈತರೆಲ್ಲರೂ  ತಹಶೀಲ್ದಾರ ಕಚೇರಿಗೆ ಅಡ್ಡಲಾಗಿ ಮಲಗಿದರು.ಆಗ ಅಂದಿನ ತಹಶೀಲ್ದಾರ ವರೂರು ಎಂಬುವವರು   ಉದ್ಧಟತನಿದಂದ ರೈತರನ್ನು ತುಳಿದುಕೊಂಡೇ ಮುಂದೆ ನಡೆದರು. ಇದರಿಂದ ರೊಚ್ಚಿಗೆದ್ದ ರೈತರು  ತಹಶೀಲ್ದಾರರನ್ನೇ  ಥಳಿಸಿದರು.ಜೊತೆಗೆ ಅಲ್ಲಿಯೇ ಇದ್ದ ಅಬಕಾರಿ ಇಲಾಖೆ ಕಚೇರಿಗೆ ನುಗ್ಗಿ ಸರಾಯಿ ಟ್ಯಾಂಕ್‌ಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ತಹಶೀಲ್ದಾರರು ಗೋಲಿಬಾರ್‌ಗೆ ಆದೇಶ ನೀಡಿದರು. ಆಗ ಪೊಲೀಸರ ಗುಂಡಿಗೆ  ಚಿಕ್ಕನರಗುಂದದ ವೀರಪ್ಪ ಕಡ್ಲಿಕೊಪ್ಪ ಎಂಬ  ರೈತ ಬಲಿಯಾದ.ಇದರಿಂದ ರೊಚ್ಚಿಗೆದ್ದ ರೈತರು ಕೆಲವು ಪೋಲಿಸರನ್ನು ಬಲಿ ತೆಗೆದುಕೊಂಡಿದ್ದು ಇತಿಹಾಸ. ಇದೇ ಸಮಯದಲ್ಲೂ ನವಲಗುಂದದಲ್ಲೂ ಪ್ರತಿಭಟನೆ ನಡೆದು ಅಳಗವಾಡಿಯ ಬಸಪ್ಪ ಲಕ್ಕುಂಡಿ ಎಂಬ ರೈತ ಪೊಲೀಸರ ಗುಂಡಿಗೆ ಬಲಿಯಾದ. ಈ ಘಟನೆಯಿಂದ  ಅಂದಿನ ಗುಂಡೂರಾವ್ ಸರಕಾರ ಪತನವಾಯಿತು. ಆದರೆ  ರೈತರ ಬದುಕು ಮಾತ್ರ  ಹಸನಾಗಲೇ ಇಲ್ಲ.ಕಳಸಾ ಬಂಡೂರಿ ಯೋಜನೆಗೆ ನೀರಾವರಿ ಇಲಾಖೆ ಗಮನಹರಿಸುತ್ತಿಲ್ಲ. ಇದಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಏತ ನೀರಾವರಿ ಕಾಮಗಾರಿ ಆರಂಭವಾಗಿ ದಶಕಗಳೂ ಸಮೀಪಿಸುತ್ತಿದ್ದರೂ ಅದರಿಂದ ರೈತರಿಗೆ ಮಾತ್ರ ಸೌಲಭ್ಯ  ದೊರೆಯುತ್ತಿಲ್ಲ. ಮತ್ತೆ  ಬರ ಬಂದೆರಗಿದೆ.  ಹೀಗಾದರೆ ರೈತರ ಬಾಳು ಗೋಲಾಗುತ್ತಿದೆ. ಕನಸು  ಕನಸಾಗಿಯೇ ಉಳಿಯುವಂತಹ  ಸ್ಥಿತಿ ಹೆಚ್ಚಾಗುತ್ತಿದೆ.ಕನಸು ನಸನಾಗಬೇಕಾದರೆ ಮತ್ತೊಮ್ಮೆ ಬಂಡಾಯ ನಡೆಯಬೇಕೆ? ಮತ್ತೊಬ್ಬ ವೀರಪ್ಪ ಕಡ್ಲಿಕೊಪ್ಪ ಹುಟ್ಟಿ ಬರಬೇಕೆ? ಎಂಬ ಪ್ರಶ್ನೆ ಈ ಭಾಗದ ರೈತರನ್ನು ಕಾಡುತ್ತಿವೆ. ಉತ್ತರವನ್ನು ಮೊಸಳೆ ಕಣ್ಣಿರು ಹಾಕುತ್ತಿರು ರಾಜಕಾರಣಿಗಳು ಕೊಡಬೇಕಷ್ಟೆ.ಭರವಸೆಗಳು ಸುರಿಯುತ್ತಿವೆ ಮಳೆ ಸುರಿಯುತ್ತಿಲ್ಲ

ಈಗಲೂ ಈ ಭಾಗದ  ರೈತರ ಸ್ಥಿತಿ ಬದಲಾಗಿಲ್ಲ. ಅದೇ ರಾಗ ಅದೇ ಹಾಡು. ಈ ಭಾಗದ ಪ್ರಮುಖ ಬೇಡಿಕೆಯಾದ ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ.  ಅದರ ಹೆಸರಿನಲ್ಲಿ ಭರವಸೆ ಸುರಿಮಳೆ ಇಂದಿಗೂ ಸುರಿಯುತ್ತಿದೆ. ಆದರೆ ಈ ಭಾಗದ  ರೈತರು ಕಂಡ ಕನಸು ಮಾತ್ರ ಈಡೇರುತ್ತಿಲ್ಲ. ಇನ್ನು ನವಿಲುತೀರ್ಥ ಜಲಾಶಯ ಇದ್ದು ಇಲ್ಲದಂತಾಗಿದೆ.ಕೆಳಹಂತದ ಕಾಲುವೆಗಳಿಗೆ ನೀರು ದೊರೆಯುತ್ತಿಲ್ಲ ಕಾಲುವೆಗಳು ಕಂಟಿಗಳ ತಾಣವಾಗಿ ಮಾರ್ಪಟ್ಟಿವೆ. ಈಗ ಮಳೆಯೂ ಇಲ್ಲ ದಾಗಿದೆ. ಈ ಭಾಗದ ರೈತರ ಪಾಡು ಹೇಳತೀರದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.