ರಾಜಕಾರಣ-ಸಂಸ್ಕೃತಿ ನಡುವಿನ ಕೊಂಡಿ ಕಳಚಿತು...

7

ರಾಜಕಾರಣ-ಸಂಸ್ಕೃತಿ ನಡುವಿನ ಕೊಂಡಿ ಕಳಚಿತು...

Published:
Updated:

ಹುಬ್ಬಳ್ಳಿ: ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ನಿಧನದಿಂದಾಗಿ ಕರ್ನಾಟಕದ ರಾಜಕಾರಣವು ಒಬ್ಬ ಅತ್ಯುತ್ತಮ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಸಾಹಿತಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಲ್.ಹನುಮಂತಯ್ಯ ವಿಷಾದಿಸಿದರು.ಬುಧವಾರ ನಗರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕಾರಣದ ನಡುವೆ ಸೇತುವೆಯಾಗಿ ಪ್ರಕಾಶ ಕೆಲಸ ಮಾಡಿದರು. ರಾಜಕಾರಣದಲ್ಲಿ ಸಂಸ್ಕೃತಿ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ, ಪ್ರಕಾಶ ನಿಧನದ ಮೂಲಕ ಸಂಸ್ಕೃತಿಯ ಗುರುವೊಬ್ಬರನ್ನು ಕಳೆದುಕೊಂಡಿದ್ದೇವೆ. ಈಗ ವಿಶ್ವ ಪ್ರಸಿದ್ಧವಾಗಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕಮಲಾಪುರದಲ್ಲಿ ಸ್ಥಾಪನೆಯಾಗಲು ಪ್ರಕಾಶ ಅವರೇ ಕಾರಣ ಎಂದರು.ಅಧಿಕಾರದ ಆಸೆಗಾಗಿ ಜಾತ್ಯತೀತ ಮನೋಭಾವವನ್ನು ಪ್ರಕಾಶ ತೊರೆಯಲಿಲ್ಲ. ಮುಖ್ಯಮಂತ್ರಿಯಾಗುವ ಅವಕಾಶ ಬಂದರೂ ಬಿಜೆಪಿಯನ್ನು ಅವರು ಸೇರಲಿಲ್ಲ ಎಂದು ಸ್ಮರಿಸಿದರು.ವಾಸ್ತವವಾದಿಯಾಗಿದ್ದ ಪ್ರಕಾಶ ಅವರು ಶ್ರೇಷ್ಠ, ಸಜ್ಜನ ಹಾಗೂ ಜನಪರ ರಾಜಕಾರಣಿ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಕೊಂಡಾಡಿದರು.

ಉತ್ತಮ ರಾಜಕಾರಣಿಗಳು ಕೂಡ ಚುನಾವಣೆಯಲ್ಲಿ ಸೋಲನುಭವಿಸಿದ ಉದಾಹರಣೆಗಳಿವೆ. ಪ್ರಕಾಶ ಕೂಡ ಚುನಾವಣೆಯಲ್ಲಿ ಸೋತರು. ಆದರೆ, ಸೋಲು- ಗೆಲುವಿನಿಂದಲೇ ಯಾರೊಬ್ಬರ ವ್ಯಕ್ತಿತ್ವವನ್ನು ಅಳೆಯಲಾಗದು ಎಂದರು.ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗುವ ಅವಕಾಶ ಪ್ರಕಾಶರಿಗೆ ಒದಗಿಬಂದಿತ್ತು. ಆಗ ಅವರು ಮುಖ್ಯಮಂತ್ರಿಯಾಗಿದ್ದರೆ, ಅತ್ಯಂತ ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಈಗ ಕರ್ನಾಟಕಕ್ಕೆ ಅಂಟುವುದು ತಪ್ಪುತ್ತಿತ್ತು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ‘ವಿಧಾನ ಮಂಡಳದಲ್ಲಿ ಪ್ರಕಾಶ ಮಾತನಾಡುತ್ತಿದ್ದರೆ ಎಲ್ಲರೂ ಮೌನವಹಿಸಿ ಗಂಭೀರವಾಗಿ ಆಲಿಸುತ್ತಿದ್ದರು. ಉತ್ತಮ ವಾಗ್ಮಿಯಾಗಿದ್ದ ಅವರು, ತಪ್ಪುಗಳನ್ನು ಒಪ್ಪಿಕೊಳ್ಳುವ ಮುತ್ಸದ್ದಿ ರಾಜಕಾರಣಿಯಾಗಿದ್ದರು’ ಎಂದು ಶ್ಲಾಘಿಸಿದರು.ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅನ್ವರ ಮುಧೋಳ ಅವರೂ ಮಾತನಾಡಿದರು.

ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಸುರೇಶ ಸವಣೂರ, ಸತೀಶ ಮೆಹರವಾಡೆ ಮೊದಲಾದವರು ಉಪಸ್ಥಿತರಿದ್ದರು. ಎಫ್.ಎಚ್.ಜಕ್ಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry