ಸೋಮವಾರ, ಅಕ್ಟೋಬರ್ 14, 2019
22 °C

ರಾಜಕೀಯದಲ್ಲಿ ಬದಲಾವಣೆ ಅಗತ್ಯ

Published:
Updated:

ಧಾರವಾಡ: `ರಾಜಕೀಯದಲ್ಲಿ ಬದಲಾವಣೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯದಿದ್ದರೆ ಎಷ್ಟೇ ಮೀಸಲಾತಿ ನೀಡಿದರೂ ಪ್ರಯೋಜನವಿಲ್ಲ~ ಎಂದು ಸಂಯುಕ್ತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಂ.ಪಿ.ನಾಡಗೌಡ ಹೇಳಿದರು.  ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜೆಡಿಯು ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಜಾಗೃತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ಎಂದು ಬಳಸಿಕೊಳ್ಳಲಾಗುತ್ತಿರುವುದು ಇದಕ್ಕೆ ಕಾರಣ ಎಂದರು.ಸಂಯುಕ್ತ ಜನತಾದಳದಲ್ಲಿ ಯಾವುದೇ ಹಣ ಮತ್ತು ಜಾತೀಯತೆಯ ಭಾವನೆ ಇಲ್ಲ, ಎಲ್ಲರೂ ಒಂದೇ ಎಂಬ ಭಾವನೆ ಇದೆ. ಹಣ ಬಲದಿಂದ ರಾಜಕಾರಣ ಮಾಡುವುದು ತಮ್ಮ ಪಕ್ಷಕ್ಕೆ ಬೇಕಾಗಿಲ್ಲ. ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಬೇಕು. ಅಧಿಕಾರ ವಿಕೇಂದ್ರೀಕರಣ ತಮ್ಮ ಪಕ್ಷದ ಮುಖ್ಯ ಉದ್ದೇಶ ಎಂದು ಅವರು ಹೇಳಿದರು.  ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು. ಮತದಾರರ ಯಾದಿಯಲ್ಲಿ ಅಲ್ಪಸಂಖ್ಯಾತರ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.ಸಾಚಾರ್ ಕಮೀಟಿ ಮಾಡಿರುವ ಶಿಫಾರಸ್ಸುಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದ್ದು, ಇದಕ್ಕಾಗಿ ಕಾರ್ಯಾಗಾರ ನಡೆಸುವ ಅವಶ್ಯಕತೆ ಇದೆ ಎಂದು ನಾಡಗೌಡ ಹೇಳಿದರು.ಪಕ್ಷದ ರಾಜ್ಯ ಉಪಾಧ್ಯಕ್ಷ ಮೈಕಲ್ ಫರ್ನಾಂಡಿಸ್ ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಿಸಿ, ಜಾತಿ ಪದ್ಧತಿಯಿಂದ ಸಾಮಾಜಿಕ ನ್ಯಾಯ ಕುಸಿಯುತ್ತಿದೆ. ಸಾಮಾಜಿಕ ನ್ಯಾಯ ಕಾಪಾಡುವ ಕುರಿತು ಕೇವಲ ಹೇಳಿಕೆಗಳು ಮಾತ್ರ ಕೇಳುತ್ತಿವೆ, ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದರು.ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ಅಕ್ರಂ ಪಾಶಾ ಮಾತನಾಡಿ, ಮುಸ್ಲಿಂ ಸಮಾಜದವರು ಭಯೋತ್ಪಾದಕರಲ್ಲ. ನೀತಿ- ನಿಯತ್ತಿನಿಂದ ಬದುಕುತ್ತಿರುವ ಮುಸಿಂ ಸಮಾಜದವರನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ ಎಂದು ಆಪಾದಿಸಿದರು.ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಎ.ಐ.ಪಠಾಣ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪದಾಧಿಕಾರಿಗಳಾದ ಸಾವಿತ್ರಿ ಗುಂಡಿ, ಡಿ.ಆರ್.ಪಾಟೀಲ, ಹನಮಂತಸಾನಿರಂಜನ, ಶೇಖರ ಹೈಬತ್ತಿ, ಇಬ್ರಾಹಿಂಶಾ ಪೀರಜಾದೆ, ಶ್ರೀಶೈಲಗೌಡ ಕಮತರ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಮಾಜವಾದಿ ರಾಚಪ್ಪ ಹಡಪದ, ನಿವೃತ್ತ ಪ್ರಾಚಾರ್ಯ ಎಚ್.ಎ.ಇಳಕಲ್ ಹಾಗೂ ನಿವೃತ್ತ ಶಿಕ್ಷಕ ಕೆ.ಎ.ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.

Post Comments (+)