ರಾಜಕೀಯದಿಂದ ಪೊಲೀಸರನ್ನು ಪಾರು ಮಾಡಿ

7

ರಾಜಕೀಯದಿಂದ ಪೊಲೀಸರನ್ನು ಪಾರು ಮಾಡಿ

Published:
Updated:

ಆಯಕಟ್ಟಿನ ಹುದ್ದೆ ಮತ್ತು ಸ್ಥಳಗಳಿಗೆ ಬರಲು ರಾಜಕೀಯ ಒತ್ತಡ ತರುವ ಪೊಲೀಸ್ ಅಧಿಕಾರಿಗಳ ಪ್ರವೃತ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇತ್ತೀಚೆಗೆ ತೀವ್ರವಾಗಿ ಖಂಡಿಸಿದ್ದರು. ಅವರ ಬಳಿ ಇಂಥ 500 ಅಧಿಕಾರಿಗಳು, ಸಿಬ್ಬಂದಿಗಳ ಪಟ್ಟಿ ಇದೆಯಂತೆ. ರಾಜಕೀಯ ಪ್ರಭಾವ ಬಳಸುವುದರ ವಿರುದ್ಧ ಅವರು ಕೆಂಡಾಮಂಡಲವಾಗಿದ್ದಾರೆ.ಆದರೆ ಮುಖ್ಯಮಂತ್ರಿಗಳ ಈ ಹೇಳಿಕೆ ಆಶ್ಚರ್ಯ ಉಂಟು ಮಾಡುತ್ತಿದೆ. ಏಕೆಂದರೆ ಪೊಲೀಸ್ ಇಲಾಖೆ ವರ್ಗಾವಣೆಗಳಲ್ಲಿ ರಾಜಕೀಯ `ಹಸ್ತಕ್ಷೇಪ~ ಆಳವಾಗಿ ಬೇರೂರಿದೆ. ರಾಜಕಾರಣಿಗಳ ಕೃಪಾಶೀರ್ವಾದ ಇಲ್ಲದೆ `ಒಳ್ಳೆಯ~ ಹುದ್ದೆ ಸಿಗುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದು ಎಷ್ಟೋ ವರ್ಷಗಳಾಗಿವೆ.ಕೆಲಸದ ಅಗತ್ಯ, ಸಾಮರ್ಥ್ಯ ನೋಡಿಕೊಂಡು ಸಮರ್ಥ ಅಧಿಕಾರಿ, ಸಿಬ್ಬಂದಿಗಳನ್ನು ಸೂಕ್ತ ಹುದ್ದೆಗಳಿಗೆ ವರ್ಗಾಯಿಸುವ ಇಲಾಖಾ ಆಂತರಿಕ ವ್ಯವಸ್ಥೆ ನಿಷ್ಕ್ರಿಯಗೊಂಡು ಯಾವುದೋ ಕಾಲವಾಗಿದೆ. ಪೊಲೀಸರಲ್ಲೂ ಭಯ ಮತ್ತು ಮೇಲಧಿಕಾರಿಗಳ ನಡವಳಿಕೆಗಳ ಬಗ್ಗೆ ಅಸಮಾಧಾನ ಮನೆ ಮಾಡಿದೆ. ಪ್ರತಿಭೆ, ಸೇವಾ ಹಿರಿತನಕ್ಕೆ ಗೌರವವೇ ಸಿಗುತ್ತಿಲ್ಲ.ಅಧಿಕಾರಿಗಳಲ್ಲಿನ ಈ ಅಸಮಾಧಾನವನ್ನು ಶಮನಗೊಳಿಸಲು ಸರ್ಕಾರ ನಿರ್ದಿಷ್ಟ ಕೆಲಸ, ಹೊಣೆಯನ್ನೇ ನಿಗದಿಪಡಿಸದೆ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ಅಲ್ಲಿಗೆ ವರ್ಗಾವಣೆಗೊಂಡವರಿಗೆ `ತಮಗೆ ಏನು ಕೆಲಸ, ಅಧಿಕಾರ~ ಎಂಬುದೇ ಗೊತ್ತಾಗುತ್ತಿಲ್ಲ.ಇಂಥ ಹೀನಾಯ ಸ್ಥಿತಿಗೆ ಅಧಿಕಾರಸ್ಥ ರಾಜಕಾರಣಿಗಳು ಮಾತ್ರವಲ್ಲದೆ, ಸ್ವತಃ ಪೊಲೀಸರೂ ಹೊಣೆಗಾರರು. ಈ ಕೆಟ್ಟ ಪದ್ಧತಿಯನ್ನು ಬದಲಾಯಿಸಲು ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬುದನ್ನು ಕಾದು ನೋಡಬೇಕು. ಆದರೆ ಇದರ ಬಗ್ಗೆ ದನಿಯೆತ್ತಿ ಅಸಮಾಧಾನ ಹೊರಹಾಕಿದ್ದು ಮಾತ್ರ ನಿಜವಾಗಿಯೂ ಒಳ್ಳೆ ಕೆಲಸ.ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ 90ರ ದಶಕದ ಮಧ್ಯಭಾಗದಷ್ಟು ಹಿಂದೆಯೇ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿದ ಕೋರ್ಟ್ 2006ರಲ್ಲಿ ರಾಜ್ಯ ಸರ್ಕಾರಗಳಿಗೆ ಆರು ಅಂಶಗಳನ್ನು ಒಳಗೊಂಡ ನಿರ್ದೇಶನ ನೀಡಿ ಅದನ್ನು ಜಾರಿಗೆ ತರಲು ಸೂಚಿಸಿತ್ತು.

 

ಪೊಲೀಸ್ ಆಡಳಿತದಲ್ಲಿ ಅನೈತಿಕ ರಾಜಕೀಯ ಹಸ್ತಕ್ಷೇಪವನ್ನು ಕೊನೆಗೊಳಿಸುವುದು, ತಪ್ಪು ಮಾಡಿದರೆ ದಂಡನೆ, ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆ ನಿಗದಿ, ವೃತ್ತಿಪರತೆಯನ್ನು ತರುವುದು ಇದರ ಮುಖ್ಯ ಉದ್ದೇಶವಾಗಿತ್ತು.ಇದರಲ್ಲಿ ಮುಖ್ಯವಾದ ಅಂಶವೆಂದರೆ ಪೊಲೀಸ್ ವರ್ಗಾವಣೆ ಮತ್ತು ಆಂತರಿಕ ಕಾರ್ಯ ನಿರ್ವಹಣೆಯಲ್ಲಿ ವಶೀಲಿಬಾಜಿ, ರಾಜಕೀಯ ಹಸ್ತಕ್ಷೇಪ ತಪ್ಪಿಸಲು ಇಲಾಖಾ ಮಟ್ಟದಲ್ಲಿಯೇ `ಪೊಲೀಸ್ ಸಿಬ್ಬಂದಿ ಮಂಡಳಿ~ ರಚನೆ. ಪೊಲೀಸ್ ಮಹಾ ನಿರ್ದೇಶಕರ (ಡಿಜಿಪಿ) ನೇತೃತ್ವದಲ್ಲಿ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಈ ಮಂಡಳಿ ಯಾವುದೇ ಒತ್ತಡವಿಲ್ಲದೆ ಸಿಬ್ಬಂದಿಗಳ ಬಡ್ತಿ, ವರ್ಗಾವಣೆ ಮತ್ತು ಆಡಳಿತಾತ್ಮಕ ಕರ್ತವ್ಯಗಳನ್ನು ನೋಡಿಕೊಳ್ಳಬೇಕು ಎಂದು ಕೋರ್ಟ್ ಸೂಚಿಸಿತ್ತು.

 

ಡಿಎಸ್‌ಪಿ ಮತ್ತು ಅವರಿಗಿಂತ ಕೆಳಗಿನ ಸಿಬ್ಬಂದಿಗಳ ನೇಮಕಾತಿ, ವರ್ಗಾವಣೆ, ನಿಯೋಜನೆ, ಬಡ್ತಿ, ಸೇವೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವುದು, ಎಸ್‌ಪಿ ಮತ್ತು ಅವರಿಗಿಂತ  ಮೇಲ್ಮಟ್ಟದ ಹುದ್ದೆಗಳ ನೇಮಕ, ವರ್ಗಾವಣೆ ಬಗ್ಗೆ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡುವ ಅಧಿಕಾರ ಈ ಮಂಡಳಿಗೆ ನೀಡಿತ್ತು. ಆದರೆ ಇದು ಕಾರ್ಯ ನಿರ್ವಹಿಸಲು ಇಲಾಖೆಯ ಸಿಬ್ಬಂದಿಗಳ ಮತ್ತು ರಾಜಕೀಯ ಅಧಿಕಾರಶಾಹಿಯ ಸಹಕಾರ ಅಗತ್ಯ.ಕೋರ್ಟ್ ನೀಡಿದ ಆರು ನಿರ್ದೇಶನಗಳ ಪೈಕಿ ಮೂರಕ್ಕೆ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ಆಕ್ಷೇಪಣೆ ಸಲ್ಲಿಸಿದ್ದವು. ಆದರೆ ಇದನ್ನು ಒಪ್ಪಿಕೊಳ್ಳದ ಕೋರ್ಟ್ ತನ್ನ ನಿರ್ದೇಶನಗಳನ್ನು ರಾಜ್ಯಗಳು ಹೇಗೆ ಜಾರಿ ಮಾಡುತ್ತಿವೆ ಎಂಬ ಬಗ್ಗೆ ನಿಗಾ ವಹಿಸಲು ಮೇಲ್ವಿಚಾರಣಾ ಸಮಿತಿ ರಚಿಸಿ ಅದಕ್ಕೆ ಎರಡು ವರ್ಷಗಳ ಕಾಲಾವಧಿ ನಿಗದಿಪಡಿಸಿತ್ತು.ಕೋರ್ಟ್‌ನ ಈ ಒತ್ತಡದ ಪರಿಣಾಮವೇ, 2007ರಲ್ಲಿ ಸಿದ್ಧಗೊಂಡ `ಕರ್ನಾಟಕ ಪೊಲೀಸ್ ಮಸೂದೆ~. ಆದರೆ ತನ್ನ ನಿರ್ದೇಶನ ಪಾಲಿಸಿಲ್ಲ ಎಂದು ಕೋರ್ಟ್ 2010 ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ರಾಜ್ಯದ ಗೃಹ ಕಾರ್ಯದರ್ಶಿಗೆ ನೋಟಿಸ್ ನೀಡಿತ್ತು.ಇಷ್ಟೆಲ್ಲ ಒತ್ತಡ ಬಿದ್ದ ನಂತರ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಕೋರ್ಟ್‌ನ ಆರು ಅಂಶಗಳ ನಿರ್ದೇಶನದ ಪೈಕಿ ಎರಡನ್ನು (ತನಿಖೆ ಮತ್ತು ಕಾನೂನು ಸುವ್ಯವಸ್ಥೆ ವಿಭಾಗ ಬೇರ್ಪಡಿಸುವುದು, ರಾಜ್ಯ ಸುರಕ್ಷತಾ ಆಯೋಗ ರಚನೆ) ಜಾರಿಗೊಳಿಸಲು ಕ್ರಮ ಕೈಗೊಂಡಿತು. ಆದರೆ ಇದರಿಂದ ಕೆಳಸ್ತರದಲ್ಲಿ ಅಂತಹ ಎದ್ದು ಕಾಣುವ ಬದಲಾವಣೆಯೇನೂ ಕಂಡು ಬರಲಿಲ್ಲ.ಈ ಮಧ್ಯೆ 2009ರಲ್ಲಿ ಕೋರ್ಟ್ ಸೂಚಿಸಿದ ವಿಧಾನದಲ್ಲಿಯೇ `ಪೊಲೀಸ್ ಸಿಬ್ಬಂದಿ ಮಂಡಳಿ~ ರಚನೆಗೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಡಿಜಿಪಿ ಅಧ್ಯಕ್ಷತೆಯ ಈ ಮಂಡಳಿಗೆ ಗೃಹ ರಕ್ಷಕ ದಳ, ಸಿಐಡಿ ಮತ್ತು ಪೊಲೀಸ್ ವಸತಿ ನಿಗಮದ ಡಿಜಿಪಿಗಳು, ಆಡಳಿತ ವಿಭಾಗದ ಎಡಿಜಿಪಿ ಸದಸ್ಯರು.

 

ಎಸ್‌ಪಿ ಮತ್ತು ಮೇಲ್ಮಟ್ಟದ ದರ್ಜೆ ಅಧಿಕಾರಿಗಳ ನೇಮಕ, ವರ್ಗಾವಣೆಯಲ್ಲಿ ಮಂಡಳಿಯ ಸಲಹೆಗೆ `ಗೌರವ ನೀಡಲಾಗುತ್ತದೆ~ ಮತ್ತು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುತ್ತದೆ; ಆದರೆ ಡಿಎಸ್‌ಪಿ ಮತ್ತು ಕೆಳ ಹಂತದ ಸಿಬ್ಬಂದಿಗೆ ಸಂಬಂಧಿಸಿದಂತೆ ಕೆಲ ಸಂದರ್ಭದಲ್ಲಿ ಸೂಕ್ತ ಕಾರಣಗಳನ್ನು ದಾಖಲಿಸಿ ಮಂಡಳಿಯ ಶಿಫಾರಸನ್ನು ಬದಲಾಯಿಸಲೂಬಹುದು ಎಂದೂ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು.ಆದಾಗ್ಯೂ ಕೂಡ ಅನಗತ್ಯ ಬಾಹ್ಯ ಒತ್ತಡದಿಂದ ಮಂಡಳಿಯನ್ನು ಕಾಪಾಡುವ ದಿಸೆಯಲ್ಲಿ ಸರ್ಕಾರದ ಲಿಖಿತ ಭರವಸೆ ಉತ್ತಮ ಹೆಜ್ಜೆ ಎಂದೇ ಹೇಳಬೇಕು.ಮಂಡಳಿ ರಚನೆಯೇನೋ ಆಗಿದೆ. ಆದರೆ ಕೆಲ ನಿರ್ಲಜ್ಜ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಂಡಳಿಯನ್ನೇ ಕಡೆಗಣಿಸಿದರೂ ಸರ್ಕಾರ ಮೂಕಪ್ರೇಕ್ಷಕನಂತಿದೆ.ಮುಖ್ಯಮಂತ್ರಿಗಳು ಇಡೀ ಪೊಲೀಸ್ ಪಡೆಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆ ಬಗ್ಗೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸುವ, ಪೊಲೀಸ್- ಪುಢಾರಿಗಳ ಅಪವಿತ್ರ ಮೈತ್ರಿ ಮುರಿಯಲು ತಮ್ಮದೇ ಸರ್ಕಾರ ತಮಗೆ ನೀಡಿರುವ ಅಸ್ತ್ರಗಳ ಬಗ್ಗೆ ಮಾತನಾಡದೇ ಮೌನವಾಗಿದ್ದಾರೆ.ಸಾರ್ವಜನಿಕವಾಗಿ ಪೊಲೀಸರನ್ನು ಈ ರೀತಿ ತರಾಟೆಗೆ ತೆಗೆದುಕೊಳ್ಳುವುದೇನೋ ಸರಿ. ಜತೆಗೆ ಕೋರ್ಟ್ ಆದೇಶ ಪಾಲನೆಯ ಕಳಕಳಿಯೂ ಇರಬೇಕಾಗುತ್ತದೆ. ಪೊಲೀಸರು ಇರುವುದೇ ಚುನಾಯಿತ ಜನಪ್ರತಿನಿಧಿಗಳ ಇಚ್ಛೆಯಂತೆ ಕೆಲಸ ಮಾಡಲು ಎಂಬ ಮನೋಭಾವದಿಂದ ರಾಜಕಾರಣಿಗಳು ಹೊರಬರಬೇಕು.ಪುಢಾರಿಗಳ ಮೊರೆ ಹೋಗುವ ಪ್ರವೃತ್ತಿ ಇಡೀ ಪೊಲೀಸ್ ವ್ಯವಸ್ಥೆಗೇ ಮಾರಕ ಎನ್ನುವುದನ್ನು ಪೊಲೀಸ್ ಸಿಬ್ಬಂದಿಯೂ ಅರಿಯಬೇಕು. ತಾವೇ ಆಡಿದ ಮಾತನ್ನು ಮುಖ್ಯಮಂತ್ರಿ ಸದಾನಂದಗೌಡರು ಗಂಭೀರವಾಗಿ ಪರಿಗಣಿಸುವುದಾದರೆ, ಬದಲಾವಣೆ ತರಲು ಅವರಿಗೆ ಈಗಲೂ ಒಂದು ಅವಕಾಶ ಇದೆ.

(ಕಾಮನ್‌ವೆಲ್ತ್ ಮಾನವಹಕ್ಕು ಸಂಘಟನೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry