ಮಂಗಳವಾರ, ನವೆಂಬರ್ 19, 2019
23 °C
ವಿಧಾನಸಭಾ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಎಲ್.ಕೆ. ಅಡ್ವಾಣಿ

ರಾಜಕೀಯದಿಂದ ಹಣಗಳಿಕೆ ಮಹಾಪಾಪ

Published:
Updated:

ದಾವಣಗೆರೆ: ರಾಜನೀತಿ ದೇಶವನ್ನು ಉನ್ನತಿಗೆ ಕೊಂಡೊಯ್ಯುವ ಸಾಧನ. ಆದರೆ, ರಾಜಕಾರಣಕ್ಕೆ ಬಂದು ಹಣ ಗಳಿಸುವುದು ಮಹಾಪಾಪ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ಎಲ್.ಕೆ. ಅಡ್ವಾಣಿ ಹೇಳಿದರು.ನಗರದಲ್ಲಿ ಭಾನುವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ಅರಿವು ಇರಬೇಕು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಿದೆ.ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರು. ಆದರೆ, ಈ ಅವಧಿಯಲ್ಲಿ ಎಂದೂ ಕೇಳಿರದ ಭ್ರಷ್ಟಾಚಾರದ ಆರೋಪ ದಕ್ಷಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇಳಿ ಬಂದಿತು. ಇದು ತಮಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಅವರು ವಿಷಾದಿಸಿದರು.ಜನಸಂಘದ ಕಾಲದಲ್ಲಿ ಜಹಗೀರುದಾರಿ ಪದ್ಧತಿಯನ್ನು ನಿಷೇಧಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ರಾಜಸ್ತಾನದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಹಗೀರುದಾರರಾಗಿದ್ದ 8 ಜನ ಶಾಸಕರ ಪೈಕಿ 6 ಮಂದಿ ಈ ಪದ್ಧತಿ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿತ್ತು. ಅಂಥದ್ದರಲ್ಲಿ ಇಂದೂ ಸಹ ಪಕ್ಷದ ಸಿದ್ಧಾಂತ, ಶಿಸ್ತು ಉಲ್ಲಂಘಿಸುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.ಜನರಿಗೆ ಸತ್ಯ, ಸುಳ್ಳು ಬೇಗನೆ ತಿಳಿಯುತ್ತದೆ. ನಾವು ಜನರ ಮೇಲೆ ನಂಬಿಕೆ ಇಡಬೇಕು. ರಾಜನೀತಿಯ ಪ್ರಕಾರ ಆಳುವವರಿಗೆ ಮೌಲ್ಯಗಳ ಅರಿವು ಇರಬೇಕು. ಒಂದು ವೇಳೆ ಅದೆಲ್ಲವೂ ಸರಿಯಾಗಿದ್ದರೆ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಮೊದಲ ಸಾಲಿನಲ್ಲಿ ಇರಬೇಕಿತ್ತು. ಆದರೆ, ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಡಾ.ಮನಮೋಹನ ಸಿಂಗ್ ಅವರು ಹೆಸರಿಗಷ್ಟೇ ಪ್ರಧಾನಿ ಆಗಿದ್ದಾರೆ. ಆದರೆ, ಅಧಿಕಾರ ಸೋನಿಯಾ ಗಾಂಧಿ ಕೈಯಲ್ಲಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇದು ಅಸಾಧ್ಯ ಎಂದು ಹೇಳಿದರು.ದೇಶದ ರಾಜನೀತಿಯಲ್ಲಿ ಹತೋಟಿ ತಪ್ಪಿದಾಗ ಭ್ರಷ್ಟಾಚಾರ, ಅನೀತಿ, ಅತ್ಯಾಚಾರಕ್ಕೆ ಅವಕಾಶವಾಗುತ್ತದೆ ಎಂದು ತಿಳಿಸಿದರು.

ಭಯೋತ್ಪಾದನೆ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬೇಕಿದ್ದರೆ ನೇರವಾಗಿ ಯುದ್ಧ ಮಾಡೋಣ. ಆದರೆ, ನೆರೆ ರಾಷ್ಟ್ರವಾದ ಪಾಕಿಸ್ತಾನ ಭಯೋತ್ಪಾದನೆ ಮೂಲಕ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ನೆಹರೂ ಅವರಿಂದ ಹಿಡಿದು ಡಾ.ಮನಮೋಹನ್ ಸಿಂಗ್‌ವರೆಗೆ ಅನೇಕ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಅಟಲ್ ಬಿಹಾರಿ ವಾಜಪೇಯಿಯಂಥ ಮುತ್ಸದ್ದಿಯನ್ನು ನೋಡಲಾಗಲಿಲ್ಲ ಎಂದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ,  ಆಯನೂರು ಮಂಜುನಾಥ್, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಪಕ್ಷದ ಜಿಲ್ಲಾ ಅಧ್ಯಕ್ಷ ಟಿ. ಗುರುಸಿದ್ದನಗೌಡ, ಜಿ.ಎಚ್. ತಿಪ್ಪಾರೆಡ್ಡಿ, ಅಭ್ಯರ್ಥಿಗಳಾದ ಎಸ್.ಎ. ರವೀಂದ್ರನಾಥ್, ಬಿ. ಲೋಕೇಶ್, ಎಂ. ಬಸವರಾಜ ನಾಯ್ಕ, ಜಿ. ಕರುಣಾಕರ ರೆಡ್ಡಿ, ರಾಜ್‌ಕುಮಾರ್, ಡಾ.ಅರುಣ್ ಕುಮಾರ್, ಎಚ್.ಸಿ. ಶಿವಕುಮಾರ್, ಎಸ್.ಎಂ. ವೀರೇಶ್ ಹನಗವಾಡಿ ಇದ್ದರು.

ಪ್ರತಿಕ್ರಿಯಿಸಿ (+)