ರಾಜಕೀಯ ಅಸ್ತ್ರವಾಗುವ ಆತಂಕ

7

ರಾಜಕೀಯ ಅಸ್ತ್ರವಾಗುವ ಆತಂಕ

Published:
Updated:

ಬೆಂಗಳೂರು: ಕಳೆದ ಅಕ್ಟೋಬರ್ 11ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಯಾಚಿಸಿದ ಸಂದರ್ಭದಲ್ಲಿ ನಡೆದ ಗದ್ದಲ, ಅಹಿತಕರ ಘಟನೆಗಳಿಗೆ ಕಾರಣರಾದ ಕಾಂಗ್ರೆಸ್- ಜೆಡಿಎಸ್‌ನ 15 ಮಂದಿ ಶಾಸಕರನ್ನು ಅಮಾನತುಗೊಳಿಸುವಂತೆ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದ ಸದನ ಸಮಿತಿ ಶಿಫಾರಸು ಮಾಡಿದೆ.ವಿಧಾನಸಭೆಯಲ್ಲಿ ಗುರುವಾರ ಸದನ ಸಮಿತಿಯ ವರದಿಯನ್ನು ಮಂಡಿಸಲಾಗಿದ್ದು, ಶಾಸಕರಾದ ಜೆಡಿಎಸ್‌ನ ಜಮೀರ್ ಅಹಮದ್ ಖಾನ್, ಎಂ.ಟಿ.ಕೃಷ್ಣಪ್ಪ ಎಚ್.ಸಿ.ಬಾಲಕೃಷ್ಣ, ಸಿ.ಎಸ್.ಪುಟ್ಟರಾಜು ಹಾಗೂ ಕಾಂಗ್ರೆಸ್‌ನ ಕಾಕಾ ಸಾಹೇಬ್ ಪಾಟೀಲ, ರಹೀಂಖಾನ್, ಎನ್.ಎ.ಹ್ಯಾರಿಸ್, ಯು.ಟಿ.ಖಾದರ್ ಅವರನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ.ಅಲ್ಲದೆ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್, ಸುರೇಶ್ ಗೌಡ, ಎಚ್.ಪಿ.ಮಂಜುನಾಥ್, ಪಿ.ಎಂ.ಅಶೋಕ್, ಜೆಡಿಎಸ್‌ನ  ಬಂಡೆಪ್ಪ ಕಾಶೆಂಪುರ, ಕೆ.ರಾಜು, ಕೆ.ಪಿ.ಬಚ್ಚೇಗೌಡ ಅವರನ್ನು ಕನಿಷ್ಠ ಆರು ತಿಂಗಳ ಅವಧಿಗೆ ಅಮಾನತುಗೊಳಿಸುವಂತೆ ಸಮಿತಿ ಸೂಚಿಸಿದೆ. ಅಮಾನತು ಅವಧಿಯಲ್ಲಿ ವಿಧಾನ ಸೌಧ, ಶಾಸಕರ ಭವನ ಪ್ರವೇಶವನ್ನು ನಿರ್ಬಂಧಿಸುವಂತೆ ಹಾಗೂ ಶಾಸಕರಿಗಿರುವ ಸೌಲಭ್ಯಗಳನ್ನು ಕಡಿತಗೊಳಿಸುವಂತೆಯೂ ಸಮಿತಿ ಸಲಹೆ ಮಾಡಿದೆ.ಈ ವರದಿಯನ್ನು ಆಧರಿಸಿ ಶಾಸಕರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಸದನವು ಸ್ಪೀಕರ್ ಅವರಿಗೆ ನೀಡಿದೆ. ಈ ಸಂಬಂಧ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮಂಡಿಸಿದ ನಿರ್ಣಯಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಹೀಗಾಗಿ ವಿರೋಧ ಪಕ್ಷಗಳ 15 ಮಂದಿ ಶಾಸಕರ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ.16 ಮಂದಿ ಶಾಸಕರ ಅನರ್ಹತೆ ಪ್ರಕರಣ ಸದ್ಯ ನ್ಯಾಯಾಲಯದ ಮುಂದೆ ಇದೆ. ಒಂದು ವೇಳೆ ನ್ಯಾಯಾಲಯವು ಅವರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮ ಸರಿಯಲ್ಲ ಎಂದು ತೀರ್ಪು ನೀಡಿದರೆ, ಆಗ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಈ 15 ಮಂದಿ ಶಾಸಕರನ್ನು ಅಮಾನತುಗೊಳಿಸುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.‘ಸದಸ್ಯರ ವರ್ತನೆಯಿಂದ ಸದನದ ಘನತೆ, ಗೌರವಗಳಿಗೆ ಚ್ಯುತಿಯಾಗಿದೆ. ಅವರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ಬೇರೆ ಸದಸ್ಯರ ಹಕ್ಕುಗಳಿಗೆ ಚ್ಯುತಿ ಬರುವ ಹಾಗೆ ವರ್ತಿಸಿದ್ದಾರೆ. ಅಲ್ಲದೆ ಸಮಾಜಕ್ಕೆ ಮಾದರಿಯಾಗಿ, ತಮ್ಮನ್ನು ಆಯ್ಕೆಮಾಡಿದ ಮತದಾರರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ಸಂವಿಧಾನದ ಘನತೆ, ಗೌರವಗಳನ್ನು ಎತ್ತಿ ಹಿಡಿಯುವಲ್ಲಿ ಇವರು ವಿಫಲರಾಗಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆದಲ್ಲಿ ಶಾಸಕಾಂಗದ ಬಗ್ಗೆ, ಶಾಸಕರ ಬಗ್ಗೆ ಜನಸಾಮಾನ್ಯರು ನಂಬಿಕೆ, ವಿಶ್ವಾಸ ಕಳೆದುಕೊಳ್ಳುವ ದಿನ ದೂರವಿಲ್ಲ. ಸದನದ ಘನತೆ, ಗೌರವ ಎತ್ತಿಹಿಡಿಯುವುದು, ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಿ, ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ದೃಷ್ಟಿಯಿಂದ ದುರ್ವರ್ತನೆ ತೋರಿದ ಶಾಸಕರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.‘ಸದನ ನಡೆಯುವಾಗ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರು ಸದನದ ಒಳಗೆ ಪ್ರವೇಶಿಸಿ ಸದಸ್ಯರ ಹಕ್ಕುಗಳಿಗೆ ಚ್ಯುತಿಯನ್ನುಂಟು ಮಾಡಿದ್ದಾರೆ. ಸಂಬಂಧಪಟ್ಟ ವಿಧಾನ ಪರಿಷತ್ ಸದಸ್ಯರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಭಾಪತಿಗೆ ಶಿಫಾರಸು ಮಾಡಬಹುದು. ಸದಸ್ಯರಲ್ಲದವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬಹುದು’ ಎಂದು ಶಿಫಾರಸು ಮಾಡಿದೆ.ಧರಣಿಗೂ ಸಮಯ ನಿಗದಿ: ‘ಕಲಾಪಗಳಿಗೆ ತಡೆ ಒಡ್ಡುವುದನ್ನು ತಡೆಯುವ ದೃಷ್ಟಿಯಿಂದ ಇನ್ನು ಮುಂದೆ ಸದನದಲ್ಲಿ ಧರಣಿ ಅಥವಾ ಪ್ರತಿಭಟನೆ ನಡೆಸುವುದನ್ನು 2-3 ನಿಮಿಷಕ್ಕೆ ಸೀಮಿತಗೊಳಿಸಬೇಕು’ ಎಂದು ಡಾ.ಹೇಮಚಂದ್ರ ಸಾಗರ್ ಅಧ್ಯಕ್ಷತೆಯ ವಿಶೇಷ ಸದನ ಸಮಿತಿ ಶಿಫಾರಸು ಮಾಡಿದೆ.‘ಒಂದು ವೇಳೆ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಕಾಲ ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿದ್ದು ಕಲಾಪಕ್ಕೆ ಅಡ್ಡಿ ಮಾಡಿದರೆ ಅಂತಹ ಸದಸ್ಯರ ಪ್ರಕರಣವನ್ನು ನೀತಿ ಸಂಹಿತೆಯ ಪರಿಶೀಲನೆಗಾಗಿ ಕಳುಹಿಸಿಕೊಡಬೇಕು’ ಎಂದು ಸಮಿತಿ ಒತ್ತಾಯ ಪೂರ್ವಕವಾಗಿ ಶಿಫಾರಸು ಮಾಡಲಾಗಿದೆ.ಸಭಾಧ್ಯಕ್ಷರ ಚುನಾವಣೆಯಂದು (2009ರ ಡಿ.30ರಂದು) ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ರಚಿಸಲಾಗಿದ್ದ ಸಮಿತಿ ನೀಡಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ‘ಸದಸ್ಯರ ನಡವಳಿಕೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ರಚಿಸಲು ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ತರಬೇಕು’ ಎಂದು ಸಮಿತಿ ಸೂಚಿಸಿದೆ.‘ಅಲ್ಲದೆ ಇನ್ನು ಮುಂದೆ ಸಭಾಧ್ಯಕ್ಷರ ಪೀಠದ ವೇದಿಕೆಯ ಮೇಲೆ ಹೋಗಿ ಕಾರ್ಯಕಲಾಪಗಳಿಗೆ ಅಡಚಣೆಯನ್ನುಂಟು ಮಾಡಿದರೆ ಅಂತಹ ಶಾಸಕರನ್ನು ವಿಧಾನಸಭೆಯ ಉಳಿದ ಅವಧಿಗೆ ಅಮಾನತುಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಸಭಾಧ್ಯಕ್ಷರ ಚುನಾವಣೆಯಂದು ಗದ್ದಲವನ್ನುಂಟು ಮಾಡಿದ ಸದಸ್ಯರಿಗೆ ಎಚ್ಚರಿಕೆ ನೀಡಿ ಇನ್ನು ಮುಂದೆ ಈ ರೀತಿ ವರ್ತಿಸದಂತೆ ಸೂಚಿಸಬೇಕು’ ಎಂದು ಶಿಫಾರಸು ಮಾಡಿದೆ.‘ಜಮೀರ್ ಅಹಮದ್ ಖಾನ್, ಕಾಕಾ ಸಾಹೇಬ್ ಪಾಟೀಲ, ಎಚ್.ಸಿ.ಬಾಲಕೃಷ್ಣ ಮತ್ತು ರಹೀಂ ಖಾನ್ ಅವರು ಅಂದು ಕಾಗದ ಪತ್ರಗಳನ್ನು ಹರಿದು ಹಾಕಿ ಬಿಸಾಡಿದ್ದಾರೆ. ಇದರಿಂದ ಸದನಕ್ಕೆ ಅಗೌರವವಾಗಿದೆ. ಇಂತಹ ಘಟನೆಗಳು ಪುನರಾವರ್ತನೆ ಆಗುವುದನ್ನು ತಡೆಯುವ ದೃಷ್ಟಿಯಿಂದ ಸದಸ್ಯರಿಗೆ ಗಂಭೀರ ಎಚ್ಚರಿಕೆ ನೀಡಬೇಕು. ಸಂಸತ್ತಿನ ನಡವಳಿಕೆ ಕುರಿತ ಕೌಲ್ ಅಂಡ್ ಶಕ್ದರ್ ಪುಸ್ತಕದಲ್ಲಿ ಹೇಳಿರುವ ಹಾಗೆ ಕ್ರಮಕೈಗೊಳ್ಳಬೇಕು’ ಎಂದು ಸಮಿತಿ ಸೂಚಿಸಿದೆ.      ರಾಜೀನಾಮೆಗೆ ಮುಂದಾದ ಸುರೇಶ್

ಬೆಂಗಳೂರು: ಅಶಿಸ್ತು ತೋರಿರುವ 15 ಮಂದಿ ಶಾಸಕರ ಅಮಾನತಿಗೆ ಸಂಬಂಧಿಸಿದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಲು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಹಿಂದೇಟು ಹಾಕಿದ್ದಲ್ಲದೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಗುರುವಾರ ನಡೆಯಿತು.ಮಧ್ಯಾಹ್ನ ಸದನ ಸೇರುವುದಕ್ಕೂ ಮುನ್ನ ಈ ಕಸರತ್ತು ನಡೆಯಿತು. ‘ಶಾಸಕರನ್ನು ಅಮಾನತು ಮಾಡುವುದು ಸರಿಯಲ್ಲ. ಹೀಗಾಗಿ ಈ ನಿರ್ಣಯ ಮಂಡಿಸಲು ನನ್ನಿಂದ ಸಾಧ್ಯ ಇಲ್ಲ. ಮಾಡಲೇಬೇಕೆಂದರೆ ನನ್ನ ರಾಜೀನಾಮೆ ತೆಗೆದುಕೊಳ್ಳಿ.  ಸದನ ಸಮಿತಿ ನೀಡುವ ವರದಿಯ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವರೇ ಸದನದಲ್ಲಿ ಮಂಡಿಸಬೇಕು. ಇದು ನಿಯಮ. ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಸದಸ್ಯರನ್ನು ಹೊರಗೆ ಹಾಕುವುದು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ’ ಎಂದು ಸುರೇಶ್‌ಕುಮಾರ್ ಹೇಳಿದರು ಎನ್ನಲಾಗಿದೆ.ವಿಧಾನಸಭೆ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ಅವರು ಸುರೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಇವರ ಜತೆಗೆ ಅಧಿಕಾರಿಗಳು ಕೂಡ ಸೇರಿ, ಸಚಿವರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.   ಒತ್ತಡಕ್ಕೆ ಮಣಿದು ಮಧ್ಯಾಹ್ನ ಸದನಕ್ಕೆ ಆಗಮಿಸಿದ ಅವರು ಅಪ್ಪಚ್ಚು ರಂಜನ್ ಮಂಡಿಸಿದ ವರದಿಗೆ ಸಂಬಂಧಿಸಿದ ನಿರ್ಣಯವನ್ನು ಮಂಡಿಸಿದರು. ಸದನದಿಂದ ಹೊರ ಬಂದ ಅವರು ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry