`ರಾಜಕೀಯ ಒತ್ತಡಕ್ಕೆ ಮಣಿಯಬೇಕಾಗಿಲ್ಲ'

ಶನಿವಾರ, ಜೂಲೈ 20, 2019
23 °C
ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒಗಳ ಸಮಾವೇಶ

`ರಾಜಕೀಯ ಒತ್ತಡಕ್ಕೆ ಮಣಿಯಬೇಕಾಗಿಲ್ಲ'

Published:
Updated:

ಕಾರವಾರ: ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕರ್ತವ್ಯ ನಿರ್ವಹಿಸಿದರೆ ಯಾವುದೇ ಒತ್ತಡಗಳಿಗೆ ಮಣಿಯಬೇಕಾಗಿಲ್ಲ; ಎಂದು ಶಾಸಕ ಸತೀಶ್ ಸೈಲ್ ಹೇಳಿದರು.ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. `ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒಗಳ ನಡುವೆ ಸಮನ್ವಯ ಇದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಸಾಧ್ಯ. ಇವರಿಬ್ಬರ ನಡುವೆ ಉತ್ತಮ ಸಮನ್ವಯ ಇರಬೇಕು. ಪಕ್ಷಭೇದ ಮರೆತು ಎಲ್ಲರೂ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕು. ಅನುದಾನ ಹಂಚಿಕಯಲ್ಲಿ ತಾರತಮ್ಯ ಮಾಡಬಾರದು' ಎಂದರು.`ಯೋಜನೆಗಳ ಬಗ್ಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನರಿಗೆ ಸೂಕ್ತ ಮಾಹಿತಿಯನ್ನು ಆಗಿಂದಾಗ್ಗೆ ನೀಡಬೇಕು. ಇದರಿಂದ ಪಾರದರ್ಶಕತೆ ಸಾಧಿಸಬಹುದಾಗಿದೆ' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.`ಗ್ರಾಮ ಪಂಚಾಯ್ತಿ ಅಧ್ಯಕ್ಷರು ಪಿಡಿಒಗಳ ಮೇಲೆ ಅನಗತ್ಯವಾಗಿ ಒತ್ತಡ ಹಾಕಬಾರದು. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯ ನಿರ್ವಹಿಸಲು ಒತ್ತಾಯಿಸಬಾರದು. ಒತ್ತಡಕ್ಕೆ ಮಣಿದು ಕೊನೆಗೆ ಪಿಡಿಒಗಳು ಅತಿರೇಕದ ಕಾರ್ಯಗಳಿಗೆ ಮುಂದಾಗಬಾರದು' ಎಂದರು.`ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಬಗ್ಗೆ ಹಲವು ದೂರುಗಳು ಬರುತ್ತಿದ್ದು, ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಕೂಲಿ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆ ಹೋಗುವುದಿದ್ದರೂ, ಹಣ ಜಮಾವಣೆಯ ಮಾಹಿತಿಯನ್ನು ಗ್ರಾಮಪಂಚಾಯ್ತಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿದರೆ ಹಲವು ಗೊಂದಲಗಳನ್ನು ತಪ್ಪಿಸಬಹುದಾಗಿದೆ' ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಲಲಿತಾ ಪಟಗಾರ ಮಾತನಾಡಿ, `ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ' ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್  ಪ್ರಾಸ್ತವಿಕ ಮಾತನಾಡಿ, `ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಬಾಕಿ ಪಾವತಿಗಾಗಿ ಸರ್ಕಾರ ಜಿಲ್ಲೆಗೆ ರೂ 5.20 ಕೋಟಿ ಬಿಡುಗಡೆ ಮಾಡಿದೆ. ಇದೇ ರೀತಿ 13ನೇ ಹಣಕಾಸು ಯೋಜನೆಯ ಮಾರ್ಗಸೂಚಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದೆ. ಜಿಲ್ಲೆಗೆ ಇನ್ನೂ 62 ಪಿಡಿಒಗಳ ಆಯ್ಕೆಯಾಗಿದ್ದು, ಸಧ್ಯದಲ್ಲೇ ಅವರಿಗೆ ಸ್ಥಳ ನಿಯೋಜನೆ ಆಗಲಿದೆ' ಎಂದರು.`ನಡುವಿನ ಸಮನ್ವಯದ' ಕುರಿತು ನಿವೃತ್ತ ಪ್ರಾಧ್ಯಾಪಕ ಎಸ್.ಜೆ.ಕೈರನ್ `ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಎನ್‌ಬಿಎ' ಬಗ್ಗೆ ಉಪಕಾರ್ಯದರ್ಶಿ (ಅಭಿವೃದ್ಧಿ) ನಾಗೇಶ್ ರಾಯ್ಕರ್, `ಲೆಕ್ಕಪತ್ರ ನಿರ್ವಹಣೆ' ಕುರಿತು ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ, `ಪಂಚತಂತ್ರ ಮತ್ತು ಸಕಾಲದ' ಕುರಿತು ಎನ್‌ಐಸಿ ಅಧಿಕಾರಿ ಶ್ರೀಕಾಂತ ಜೋಷಿ ಉಪನ್ಯಾಸ ನೀಡಿದರು. ಕೃಷ್ಣಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಸ್‌ಜಿಎಸ್‌ವೈ ಯೋಜನಾ ನಿರ್ದೇಶಕ ಬಿ.ಎಚ್. ನಾಯ್ಕ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry