ಗುರುವಾರ , ಅಕ್ಟೋಬರ್ 17, 2019
22 °C

ರಾಜಕೀಯ ಒತ್ತಡದಿಂದ ಅಮಾನತು, ವರ್ಗ: ಆರೋಪ

Published:
Updated:

ಮಂಗಳೂರು: ಸುಳ್ಯ ಘಟನೆಗೆ ಸಂಬಂಧಿಸಿದಂತೆ ಅಮಾನತು ಹಾಗೂ ವರ್ಗಾವಣೆ ಮಾಡಿರುವ ಕ್ರಮ ಪೊಲೀಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜಕೀಯ ಒತ್ತಡದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.



`ಇಲ್ಲಿಂದ ಒಮ್ಮೆ ವರ್ಗಾವಣೆಯಾದರೆ ಸಾಕು ಅನಿಸುತ್ತಿದೆ. ಈ ವರೆಗಿನ ವೃತ್ತಿ ಜೀವನದಲ್ಲಿ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಪೊಲೀಸ್ ಠಾಣೆಗೆ ಕಲ್ಲು ಬಿಸಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ತಪ್ಪಾ? ಇಂತಹ ಪರಿಸ್ಥಿತಿಯಲ್ಲಿ ಸುಮ್ಮನೆ ಇರಬೇಕಾ?~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಬಳಿ ಬೇಸರ ವ್ಯಕ್ತಪಡಿಸಿದರು.



`ಇಂತಹ ಘಟನೆಗಳು ಪೊಲೀಸರ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ. ರಾಜಕೀಯ ಒತ್ತಡಕ್ಕೆ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ದಿಟ್ಟಅಧಿಕಾರಿಗಳು ಇಲ್ಲಿಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣ ವಾಗಿದೆ~ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ನೋವು ತೋಡಿಕೊಂಡರು.



`ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಎಂಬುದು ಸಾಮಾನ್ಯ. ಇರುವಷ್ಟು ದಿನ ಉತ್ತಮ ಕೆಲಸ ಮಾಡುವುದು ಪೊಲೀಸರ ಜವಾಬ್ದಾರಿ. ನ್ಯಾಯಪರವಾಗಿ ಕೆಲಸ ಮಾಡಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಪ್ರಾಮಾಣಿಕತೆಯ ನಿರೀಕ್ಷೆ ಮಾಡುವುದು ಹೇಗೆ. ಪೊಲೀಸರಿಗೆ ಒಟ್ಟಾರೆ ಧರ್ಮ ಸಂಕಟ~ ಎಂಬುದು ಮತ್ತೊಬ್ಬ ಪೊಲೀಸ್ ಅಧಿಕಾರಿಯ ನುಡಿ.



`ನೂರು ಒಳ್ಳೆಯ ಕೆಲಸ ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ. ಸಣ್ಣ ತಪ್ಪು ಆದಾಗ ಅವರನ್ನು ಬಲಿಪಶು ಮಾಡಲಾಗುತ್ತದೆ. ಪೊಲೀಸರು ಪ್ರಾಮಾಣಿಕರು, ಪಾರದರ್ಶಕತೆಯಿಂದ ಕೆಲಸ ಮಾಡಿದರೆ ಸಾರ್ವಜನಿಕ ಬೆಂಬಲ ಜಾಸ್ತಿ ಸಿಗಬೇಕು. ಇಲ್ಲಿ ಹಾಗಾಗುತ್ತಿಲ್ಲ~ ಎಂದು ಅಧಿಕಾರಿಯೊಬ್ಬರು ಅಸಮಾಧಾನ ಸೂಚಿಸಿದರು.



`ಸುಳ್ಯ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ಈಗಿನ ಕ್ರಮದಿಂದ ಪೊಲೀಸ್ ಇಲಾಖೆಯಲ್ಲಿ ಹೆದರಿಕೆ ವಾತಾವರಣ ಮೂಡಿದೆ. ಇಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ. ತಮ್ಮ ಪರವಾಗಿ ಕೆಲಸ ಮಾಡುವ ವರು ಮಾತ್ರ ಇಲ್ಲಿರಬೇಕು ಎಂಬ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ತಡೆ ಬೇಕಿದೆ~ ಎಂದು ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಪಾದಿಸಿದರು.



`ಜಿಲ್ಲೆಯಲ್ಲಿರುವ ಕ್ರಿಮಿನಲ್ ಚಟು ವಟಿಕೆಯ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತಿಲ್ಲ. ಉತ್ತಮ ಅಧಿಕಾರಿಗಳ ಮನೋಸ್ಥೈರ್ಯ ಕುಸಿಯುವ ಕೆಲಸ ನಿರಂತರ ಆಗುತ್ತಿದೆ. ನ್ಯಾಯ ಪರಿಪಾಲನೆ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಸಂಘ ಪರಿವಾರ ಹೇಳಿದಂತೆ ಕೇಳುವ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಬೆಲೆ~ ಎಂದು ಮುನೀರ್ ಟೀಕಿಸಿದರು.



`ಕಲ್ಲಡ್ಕದ ಮುಖಂಡರೊಬ್ಬರ ಮರ್ಜಿಗೆ ತಕ್ಕಂತೆ ಜಿಲ್ಲೆಯ ಪೊಲೀಸರು ಕೆಲಸ ಮಾಡಿದರೆ ಮಾತ್ರ ಅವರಿಗೆ ಇಲ್ಲಿ ಸ್ಥಾನ. ಠಾಣೆಗೆ ಕಲ್ಲು ಹೊಡೆಯು ವವರನ್ನು ಬಂಧಿಸಬಾರದು ಎಂಬಂತೆ ವರ್ತಿಸಲಾಗುತ್ತಿದೆ. ಪೊಲೀಸರು ಅಕ್ರಮ ಚಟುವಟಿಕೆಗೆ ಬೆಂಬಲ, ಪ್ರೋತ್ಸಾಹ ಕೊಡಬೇಕು ಎಂದು ಹಿಂದೂ ಸಂಘ ಟನೆಯ ಮುಖಂಡರು ಭಾವಿಸುತ್ತಿದ್ದಾರೆ~ ಎಂದು ಜೆಡಿಎಸ್ ಮುಖಂಡ ಎಂ.ಜಿ. ಹೆಗಡೆ ಟೀಕಿಸಿದರು.

ದ.ಕ.ಕ್ಕೆ ಅಭಿಷೇಕ್ ಗೋಯೆಲ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ಅವರನ್ನು ದಾವಣಗೆರೆಗೆ ವರ್ಗ ಮಾಡಲಾಗಿದ್ದು, ಇಲ್ಲಿಗೆ ಬಾಗಲಕೋಟೆಯಲ್ಲಿ ಎಸ್‌ಪಿ ಆಗಿರುವ ಅಭಿಷೇಕ್ ಗೋಯಲ್ ಅವರನ್ನು ವರ್ಗ ಮಾಡಲಾಗಿದೆ.

Post Comments (+)