ರಾಜಕೀಯ ಜಂಗೀಕುಸ್ತಿ: ನಗರ ಕಸಮಯ

7

ರಾಜಕೀಯ ಜಂಗೀಕುಸ್ತಿ: ನಗರ ಕಸಮಯ

Published:
Updated:

ತುಮಕೂರು: ಭವಿಷ್ಯದ ಬೆಂಗಳೂರಿನ ಉಪ ನಗರಿ, ರಾಜ್ಯದ ಹೆಬ್ಬಾಗಿಲು ಎಂದೇ  ಬೀಗುವ ನಗರ,  ಕಸ ವಿಲೇ ವಾರಿ `ಮಹಾ ಸಮಸ್ಯೆ~ ಹೊತ್ತು ಹೈರಾಣಾಗುತ್ತಿದೆ. ನಗರಸಭೆಯ ಇಬ್ಬರು ಪ್ರಬಲ ಸದಸ್ಯೆಯರ ನಡುವಿನ ಜಂಗೀ ಕುಸ್ತಿ ಕಾರಣ ಹಲವು ದಿನಗ ಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಬಂದ್ ಆಗಿದೆ.ಪರಿಣಾಮ: ನಗರ ಪೂರಾ ಕಸಮಯ. ಶಿವರಾತ್ರಿ ಹಬ್ಬದ ಮುನ್ನಾ ದಿನವಾದ ಭಾನುವಾರ ಬೆಳ್ಳಂಬೆಳಗ್ಗೆ ನಗರದ ವಿವಿಧ ಬಡಾವಣೆಯನ್ನು ಹೊಕ್ಕು ಬಂದ `ಪ್ರಜಾವಾಣಿ~ ಪ್ರತಿನಿಧಿಗೆ ತೆರೆದು ಕೊಂಡ ಸತ್ಯ ದರ್ಶನ `ಕೊಳೆತು ನಾರುತಿದೆ ನಗರ~.ಕುಣಿಗಲ್ ರಸ್ತೆ, ಬನಶಂಕರಿ, ಗೂಡ್ಸ್ ಶೆಡ್ ರಸ್ತೆ, ವಿನೋಬನಗರ, ಎಸ್‌ಎಸ್ ಪುರಂ ಮುಖ್ಯರಸ್ತೆ, ನಂದೀಶ್ ಲೇಔಟ್, ಹನುಮಂತಪುರ, ಹೊರಪೇಟೆ, ಬಾರ್‌ಲೈನ್ ರಸ್ತೆ, ಚಿಕ್ಕ ಪೇಟೆ, ಕೆಆರ್ ಬಡಾವಣೆ, ಬಿ.ಎಚ್. ರಸ್ತೆ... ಹೀಗೆ  ಎತ್ತ ಕಡೆ ಸಾಗಿದರೂ ರಸ್ತೆ ಬದಿಗಳಲ್ಲಿ,  ಚರಂಡಿಯಲ್ಲಿ ರಾಶಿ ರಾಶಿ ಕಸ. ಎದುರಿಗೆ ಸಿಕ್ಕವರನ್ನು ಇದೇಕೆ ಹೀಗೆ ಎಂದು ಕೇಳಿದರೆ, ಯಾವಾಗಲೂ ಹೀಗೇ ಇರಲ್ಲ, ಆದರೆ ಈಗ ಕೌನ್ಸಿಲರ್‌ಗೆ ದೂರಬೇಕು ಎನ್ನುತ್ತಾರೆ.ಇನ್ನೇನು ಬೇಸಿಗೆ ಆರಂಭವಾಯಿತು. ರಣ ಬಿಸಿಲು ಒಂದೆಡೆಯಾದರೆ ರಸ್ತೆ ಬದಿಯಲ್ಲಿ, ಕಸದ ತೊಟ್ಟಿಯಿದ್ದರೂ ಅದರ ಸುತ್ತ-ಮುತ್ತ ಸುರಿದಿರುವ ತ್ಯಾಜ್ಯ ಮತ್ತೊಂದೆಡೆ. ದುರ್ನಾತ ಸಹಿಸ ಲಾರದೆ ಯಾಂತ್ರಿಕವಾಗಿ ಮೂಗಿಗೆ ಅಡ್ಡ ವಾಗಿ ಕೈ ಹಿಡಿದು ನಡೆದು ಹೋಗುವ ಜನತೆ. ಕೆಲವು ಕಡೆ ಕಸದ ತೊಟ್ಟಿ ಇರುವ ಅಕ್ಕ-ಪಕ್ಕದ ಮನೆಯವರೊ, ಅಂಗಡಿಯವರೊ ಅನ್ಯ ಮಾರ್ಗವಿಲ್ಲದೆ ಕಸಕ್ಕೆ ಬೆಂಕಿ ಕೊಟ್ಟಿದ್ದಾರೆ.ನಗರದ ಸ್ವಚ್ಛತೆ, ಆರೋಗ್ಯದ ಪ್ರಮುಖ ಮಾನದಂಡವಾದ ತ್ಯಾಜ್ಯ ವಿಲೇವಾರಿಯನ್ನು ರಾಜಕಾರಣಗೊಳಿ ಸಿದ್ದು ರಾಜ್ಯದ ಯಾವ ಭಾಗದಲ್ಲೂ ನಡೆದಿರಲಿಕ್ಕಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಜಿಲ್ಲಾಡಳಿತ ಭೂಮಿ ನೀಡದ ಕಾರಣ ನಗರಸಭೆ ಸದಸ್ಯೆ ದೇವಿಕಾ ಸಿದ್ದಲಿಂಗೇಗೌಡ ಅವರಿಂದಾಗಿ ಅವರ ತಂದೆ ಸಿದ್ದಲಿಂಗೇಗೌಡ ಅವರ ಭೂಮಿ ಬಾಡಿಗೆ ಪಡೆದು ಕಸ ಸುರಿಯುವ ತಾತ್ಕಾಲಿಕ ಪರಿಹಾರವನ್ನು ನಗರಸಭೆ ಕಂಡುಕೊಂಡಿತ್ತು.

 

ಆದರೆ ನಗರಸಭೆ ಈ ಹಿಂದಿನ ಅಧ್ಯಕ್ಷೆ ಯಶೋಧಾ ಗಂಗಪ್ಪ, ಸದಸ್ಯೆ ದೇವಿಕಾ ಅವರ ನಡುವಿನ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ಈಗ ಇಡೀ ನಗರವನ್ನೇ ಕಸದ ಗೂಡಾಗಿಸಿದೆ. ಜನತೆ ಆನಾರೋಗ್ಯ, ಕೊಳಕು ವಾತಾವರಣ ದಲ್ಲಿ ಬದುಕುವಂಥ ಅನಿವಾರ್ಯ ಸೃಷ್ಟಿ ಮಾಡಿದೆ ಎಂದು ನಗರಸಭೆ ಅಧಿಕಾರಿ ಯೊಬ್ಬರು ಹೇಳಿದರು.ಗೂಳೂರು ಬಳಿ ಕಸ ವಿಲೇವಾರಿ ಜಾಗದಲ್ಲಿ ನಗರಸಭೆ ಜೆಸಿಬಿ ಬಳಸಿ ಸಿದ್ದಲಿಂಗೇಗೌಡ ಅವರ ತೋಟದಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಯಶೋಧಾ ಗಂಗಪ್ಪ ಮತ್ತು ಅವರ ಟೀಂ ಆರೋಪ ಮಾಡಿತ್ತು. ಇದರಿಂದ ಕೋಪಗೊಂಡ ಸಿದ್ದಲಿಂಗೇಗೌಡ ಈ ಹಿಂದೆ ನಗರಸಭೆಯೊಂದಿಗೆ ಮಾಡಿ ಕೊಂಡಿದ್ದ ಒಪ್ಪಂದ ಮುರಿದು ಕಸ ಹಾಕಲು ಅವಕಾಶ ಕೊಡುತ್ತಿಲ್ಲ. ದಾರಿ ಕಾಣದ ನಗರಸಭೆ ಈಗ ನಗರದಲ್ಲಿ ಹಲವು ದಿನಗಳಿಂದ ಕಸ ಎತ್ತುವುದನ್ನೇ ಬಂದ್ ಮಾಡಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಇನ್ನು ಜನರ ಪಾಡೇನು ಅಂದರೆ, ಮನಸ್ಸಿಗೆ ಬಂದಾಗ ನಗರಸಭೆಯವರು ಕಸ ಎತ್ತುತ್ತಾರೆ, ನಗರದ ಜನರು. ಬನಶಂಕರಿಯಲ್ಲಿ ಖಾಸಗಿ ಕ್ಲಿನಿಕ್ ಇದೆ. ಯಾವಾಗಲೂ ಗಿಜಿಗುಡು ತ್ತಿರುತ್ತದೆ. ಅಲ್ಲಿ ಬಳಸಿದ ಸಿರಿಂಜ್, ಹತ್ತಿ ಮತ್ತಿತರ ವೈದ್ಯಕೀಯ ತ್ಯಾಜ್ಯ ಗಳನ್ನು ತಂದು ರಸ್ತೆಗೆ ಸುರಿಯುತ್ತಿ ದ್ದಾರೆ. ಆಸ್ಪತ್ರೆಯವರು ರಸ್ತೆಗೆ ತ್ಯಾಜ್ಯ ಸುರಿಯುವುದನ್ನು ಬಿಟ್ಟಿಲ್ಲ. ನಗರಸಭೆ ಸಿಬ್ಬಂದಿ ಆ ತ್ಯಾಜ್ಯವನ್ನು ಅಲ್ಲಿಂದ ಎತ್ತುತ್ತಿಲ್ಲ ಎಂದು ಪುನೀತ್ ಅಸಹಾಯ ಕತೆ ತೋಡಿಕೊಂಡರು.ಗೂಡ್ಸ್‌ಶೆಡ್ ಕಾಲೊನಿಯ ಕಸ ಎತ್ತುವುದು ಐದು ತಿಂಗಳಿಗೆ ಒಮ್ಮೆ ಮಾತ್ರ ಎನ್ನುತ್ತಾರೆ ಪ್ರಸನ್ನ ರೇಣುಕಾ. ಹೊರಪೇಟೆ ಸರ್ಕಾರಿ ಶಾಲೆಯ ಮುಂಭಾಗ,  ಹಿಂಭಾಗ ಸುರಿದಿರುವ ಕಸದ ರಾಶಿಯ ದುರ್ನಾತ ನಗರ ಸಭೆ ಆಡಳಿತಕ್ಕೆ, ಇಲ್ಲಿನ ಜನಪ್ರತಿನಿಧಿಗಳ ಮನಸ್ಸಿಗೆ ಕನ್ನಡಿ ಹಿಡಿದಂತೆ ಕಾಣುತ್ತದೆ.

 

ಸಿದ್ದಲಿಂಗೇಗೌಡಗೆ ನೋಟಿಸ್

ಕಸ ಸುರಿಯುವ ವಿಚಾರದಲ್ಲಿ ನಗರಸಭೆ ಹಾಗೂ ಸಿದ್ದಲಿಂಗೇಗೌಡ ನಡುವೆ  ಒಂದು ವರ್ಷದ ಒಪ್ಪಂದ ಆಗಿತ್ತು. ಅದರಂತೆ ಗೂಳೂರು ಬಳಿಯ ಅವರ 2 ಎಕರೆ ಜಮೀನಲ್ಲಿ ಕಸ ಸುರಿಯಲಾಗುತ್ತಿತ್ತು. ಕಸದ ತೂಕದ ಆಧಾರದಲ್ಲಿ ಈ ಎರಡು ತಿಂಗಳಲ್ಲಿ ರೂ. 50 ಸಾವಿರ ಬಾಡಿಗೆ ನೀಡಲಾಗಿದೆ.

 

ಆದರೆ ಈಗ ಕರಾರು ಉಲ್ಲಂಘಿಸಿ ಕಸ ಹಾಕಲು ಬಿಡುತ್ತಿಲ್ಲ. ಈ ಸಂಬಂಧ ಸಿದ್ದಲಿಂಗೇಗೌಡ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನಗರಸಭೆ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್ ಅವರು `ಪ್ರಜಾವಾಣಿ~ಗೆ ತಿಳಿಸಿದರು. ಕರಾರು ಮುರಿಯುವಂತಿಲ್ಲ. ಒಪ್ಪಂದದಂತೆ ವರ್ಷ ಕಾಲ ಕಸ ಹಾಕಲು ಬಿಡಬೇಕು. ಆದರೆ ಬಾಡಿಗೆ ನೀಡಿರುವ ಜಮೀನಲ್ಲಿ ಅವರು ಕಸ ಹಾಕಲು ತಡೆ ಹಾಕಿರುವುದರಿಂದ ನಗರದಲ್ಲಿ ಮತ್ತೇ ಕಸ ವಿಲೇವಾರಿ ಸಮಸ್ಯೆಯಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry