ರಾಜಕೀಯ ಜೀತದಿಂದ ಹೊರ ಬನ್ನಿ

7

ರಾಜಕೀಯ ಜೀತದಿಂದ ಹೊರ ಬನ್ನಿ

Published:
Updated:
ರಾಜಕೀಯ ಜೀತದಿಂದ ಹೊರ ಬನ್ನಿ

ಬೆಳಗಾವಿ: “ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಜನರ ವೋಟನ್ನು ಖರೀದಿಸುವ ಮೂಲಕ ಅವರನ್ನು `ರಾಜಕೀಯ ಜೀತ~ಕ್ಕೆ ಇಟ್ಟುಕೊಳ್ಳುತ್ತಿವೆ. ಹೀಗಾಗಿ ಗ್ರಾಮದ ಅಭಿವೃದ್ಧಿ ಬಗ್ಗೆ ನೈಜ ಕಾಳಜಿ ಇರುವವರನ್ನು ಆಯ್ಕೆ ಮಾಡುವ ಮೂಲಕ ಜೀತದಿಂದ ಹೊರ ಬರಬೇಕು” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಉಪನ್ಯಾಸಕ ಪ್ರೊ. ಚಂದ್ರ ಪೂಜಾರಿ ಸಲಹೆ ನೀಡಿದರು.ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಜಿಲ್ಲಾ ಸಮಾವೇಶ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.“ಈ ಹಿಂದೆ ಇದ್ದ ಜೀತ ಪದ್ಧತಿಯನ್ನು ಮುಕ್ತಗೊಳಿಸಿದ್ದೇವೆ ಎಂದು ಸರ್ಕಾರ ಬೀಗಬಹುದು. ಆದರೆ, ರಾಜಕೀಯ ಪಕ್ಷಗಳು ಹಣ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡುವ ಮೂಲಕ ಜನರ ವೋಟನ್ನು ಖರೀದಿಸುತ್ತಿವೆ. ಜಾತಿ, ಲಿಂಗ, ಭಾಷೆಗಳ ನಡುವೆ ಭೇದಗಳನ್ನು ಹುಟ್ಟುಹಾಕಿ ಜನರನ್ನು ಒಡೆದು `ರಾಜಕೀಯ ಗುಲಾಮ~ರನ್ನಾಗಿ ಮಾಡಿಕೊಳ್ಳುತ್ತಿವೆ. ಹೀಗಾಗಿ ಯಾರು ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುತ್ತಾರೆಯೋ ಅಂಥವರನ್ನು ಮಾತ್ರ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು” ಎಂದರು.“ಇಂದಿನ ಕೇಂದ್ರೀಕೃತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. 60 ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೆಲ್ಲ ಉಳ್ಳವರ ಪರವಾಗಿಯೇ ನಡೆದಿವೆ. ಬಡವರು, ಜನಸಾಮಾನ್ಯರು ಇನ್ನೂ ಅದೇ ಸ್ಥಿತಿಯಲ್ಲೇ ಉಳಿದುಕೊಂಡಿದ್ದಾರೆ. ಶೇ. 50ರಷ್ಟು ಜನರಿಗೆ ಮನೆ ಇಲ್ಲ. ಆದರೆ, ಸಚಿವರು, ಐಎಎಸ್ ಅಧಿಕಾರಿಗಳಿಗೆ ಎಕರೆಗಟ್ಟಲೆ ಪ್ರದೇಶಗಳಲ್ಲಿ ಪ್ರತ್ಯೇಕ ಬಂಗಲೆಗಳಿವೆ. ಹೀಗಿದ್ದಾಗ ಇದನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ?” ಎಂದು ಪ್ರೊ. ಪೂಜಾರಿ ಪ್ರಶ್ನಿಸಿದರು.“ದೇಶದಲ್ಲಿ ಶೇ. 50ರಷ್ಟು ಜನರಿಗೆ ಸರಿಯಾಗಿ ಊಟು, ಆರೋಗ್ಯ ಸೇವೆ ಸಿಗುತ್ತಿಲ್ಲ. ಕೇವಲ 50 ಕುಟುಂಬಗಳಲ್ಲೇ ರಾಷ್ಟ್ರದ ಸಂಪತ್ತಿನ ಶೇ. 50ರಷ್ಟು ಭಾಗವಿದೆ. ಬ್ರಿಟಿಷರು ಹೋದ ಮೇಲೆ ನಾವು ವೋಟು ಹಾಕಿ ಗೆಲ್ಲಿಸಿದ ನಾಯಕರು ರೂಪಿಸಿದ ನೀತಿಯಿಂದಾಗಿಯೇ ಈ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಲವಾದ ಪಂಚಾಯಿತಿ ವ್ಯವಸ್ಥೆ ಅಗತ್ಯವಿದೆ. ಸ್ಥಳೀಯ ಜನರಿಗೇ ತಮಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ನೀಡಬೇಕು” ಎಂದು ಅವರು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ರೈತ ಕಾರ್ಮಿಕ ಮುಖಂಡ ವಿ.ಪಿ. ಕುಲಕರ್ಣಿ, “ಸರ್ಕಾರ ರಚಿಸಿದ ಎ.ಜಿ. ಕೊಡಗೆ ನೇತೃತ್ವದ ಸಮಿತಿಯ ವರದಿಯನ್ನು ಕೂಡಲೇ ಜಾರಿಗೆ ತರಬೇಕು. ಪ್ರತಿ ಗ್ರಾಮ ಪಂಚಾಯಿತಿಗೂ ಕನಿಷ್ಠ 1 ಕೋಟಿ ರೂಪಾಯಿ ಅನುದಾನವನ್ನು ನೇರವಾಗಿ ನೀಡಬೇಕು. ಹಣವನ್ನು ಯಾವುದಕ್ಕೆ ವಿನಿಯೋಗಿಸಬೇಕು ಎಂದು ನಿರ್ಧರಿಸುವ ಅಧಿಕಾರ ಪಂಚಾಯಿತಿಗೇ ಇರಬೇಕು” ಎಂದು ಒತ್ತಾಯಿಸಿದರು.“ಕೇರಳ ಮಾದರಿಯಲ್ಲಿ ಜನಸಂಖ್ಯೆ ಆಧರಿಸಿ ಪಂಚಾಯಿತಿಗೆ ಅನುದಾನವನ್ನು ಹೆಚ್ಚಿಸಬೇಕು. ಸದಸ್ಯರ ಗೌರವ ಧನವನ್ನು ಕನಿಷ್ಠ ರೂ. 2000ಕ್ಕೆ ಹೆಚ್ಚಿಸಬೇಕು. ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸುವಂತೆ ಒತ್ತಾಯಿಸಲು ಮಾರ್ಚ್ 2ರಂದು ಬೆಂಗಳೂರಿನಲ್ಲಿ ಪಂಚಾಯಿತಿ ಸದಸ್ಯರ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದೆ” ಎಂದು ಹೇಳಿದರು.ಜಿ.ಎಂ. ಜೈನೆಖಾನ್, ಎಸ್.ವೈ. ಗೊಂದಿ, ಎಸ್.ಬಿ. ಹಳ್ಳಿ, ಎನ್.ಎಲ್. ಸಂಗೊಳ್ಳಿ ಹಾಜರಿದ್ದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.ಸುವರ್ಣ ಬಿಂದು ಪ್ರಾಶನ ನಾಳೆ

ಬೆಳಗಾವಿ:
ನಗರದ ಟಿಳಕವಾಡಿಯ ಸುಭಾಷ ಪುಕಾಳೆ ಆಯುರ್ವೇದ ಡಿಸ್ಪೆನ್ಸರ್ಸ್‌ನಲ್ಲಿ ಫೆಬ್ರುವರಿ 7ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಐದು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಬಿಂದು ಪ್ರಾಶನ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಕೆ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಭಿಷೇಕ - ಸ್ವಾತಿ

ಹುಕ್ಕೇರಿ:
ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಪಾಟೀಲ ಅವರ ಪುತ್ರ ಅಭಿಷೇಕ ಅವರ ವಿವಾಹ ಬೆಳಗಾವಿಯ ಅನಿಲ ಅಪ್ಪಾಸಾಹೇಬ  ಪಾಟೀಲ ಅವರ ಪುತ್ರಿ ಸ್ವಾತಿ ಜೊತೆ ಶನಿವಾರ ಬೆಳಗಾವಿ ಮಹಾತ್ಮಾ ಗಾಂಧಿ ಭವನದಲ್ಲಿ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry