ಭಾನುವಾರ, ಮಾರ್ಚ್ 7, 2021
32 °C
ಶಿವನಗೌಡ ನಾಯಕ್‌ ಆರೋಪ: ಮಾತಿನ ಚಕಮಕಿ

ರಾಜಕೀಯ ತಿರುವು ಪಡೆದ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ತಿರುವು ಪಡೆದ ಕಾರ್ಯಕ್ರಮ

ದೇವದುರ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಮಾನಗೆಟ್ಟ ಸರ್ಕಾರವಾಗಿದೆ. ಜನರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಕೆ. ಶಿವನೌಡ ನಾಯಕ ವಾಗ್ದಾಳಿ ನಡೆಸಿದರು.ತಾಲ್ಲೂಕಿನ ದೇವರಗುಂಡಗುರ್ತಿ ಮೈಲಾರ­ಲಿಂಗೇಶ್ವರ ಶರಣ ಸಂಸ್ಥಾನದಲ್ಲಿ ಸೋಮವಾರ ನಡೆದ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ­ನಾಡಿ, ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗ­ಳಲ್ಲಿಯೇ ರಾಜ್ಯದಲ್ಲಿನ ಮಠಗಳನ್ನು ಸರ್ಕಾರ ವಶಕ್ಕೆ ಪಡೆಯುವ ಬಗ್ಗೆ ತಿರ್ಮಾನ ತೆಗೆದು­ಕೊಂಡಿರುವುದು ಖಂಡನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಏರುಧ್ವನಿಯಲ್ಲಿ ಮನ ಬಂದಂತೆ ಆರೋಪ ಮಾಡುತ್ತಿದ್ದ ನಾಯಕ್‌ ಅವರ ವಿರುದ್ಧ ಸಭೆಯಲ್ಲಿದ್ದ ಕಾಂಗ್ರೆಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದರು.ಮಾತಿನ ಚಕಮಕಿ: ಯಾದಗಿರ ಜಿಲ್ಲೆಯ ಕಾಂಗ್ರೆಸ್‌ ಮುಖಂಡ ಶರಣಪ್ಪ  ಅವರು ಎದ್ದು ನಿಂತು ಶಿವನಗೌಡ ಅವರ ಭಾಷಣ ನಿಲ್ಲಿಸುವಂತೆ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಜಕೀಯ ವೇದಿಕೆಯಲ್ಲ. ಇದು ಧಾರ್ಮಿಕ ಕಾರ್ಯಕ್ರಮ. ಸಾವಿರಾರೂ ಜನ ಭಕ್ತರೂ ಬಂದಿದ್ದಾರೆ. ಇಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಮೇಲೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಕೆಲವು ಹೊತ್ತು ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರೂ ಜನರು ಕೆಲವು ಹೊತ್ತು ಮೂಕ ಪ್ರೇಕ್ಷಕರಾಗಿ ಮುಖಂಡರ ರಾಜಕೀಯ ಜಗಳವನ್ನು ನೋಡುತ್ತಾ ನಿಂತಿದ್ದರು.ವೇದಿಕೆ ಮೇಲೆ ಇದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಜಿಪಂ ಉಪಾಧ್ಯಕ್ಷ ಶರಣಪ್ಪ ಕಲ್ಮಲ, ಕಾಂಗ್ರೆಸ್‌ ಪಕ್ಷದ ರಾಯಚೂರು ನಗರ ಘಟಕದ ಅಧ್ಯಕ್ಷ ಬಸವರಾಜರೆಡ್ಡಿ, ಯಾದಗಿರಿ ಶರಣಪ್ಪ ಅವರ ಬೆಂಬಲಕ್ಕೆ ನಿಂತರು ಶಿವನಗೌಡ ನಾಯಕ ಅವರ ಆರೋಪವನ್ನು ಖಂಡಿಸುವ ಜತೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ಮಾಜಿ ಸಚಿವರ ಭಾಷಣವನ್ನು ಸಮರ್ಥಿಸಿಕೊಂಡರು ಅಷ್ಟರಲ್ಲಿ ವೇದಿಕೆ ಮೇಲೆ ಇದ್ದ ಗಣ್ಯರು, ಸ್ವಾಮೀಜಿಗಳು ಕಾರ್ಯಕ್ರಮದಿಂದ ಹೊರ ನಡೆದರು. ಸ್ವಾಮೀಜಿಗಳ ದರ್ಶನಕ್ಕೆ ಬಂದಿದ ಭಕ್ತರು ಜಗಳದಿಂದ  ನಿರಾಶೆ ಉಂಟಾಯಿತು.  ಭಕ್ತರು ಮುಖಂಡರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.‘ರಾಜಕೀಯ ಅನಾವಶ್ಯ’

ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಸಾವಿರಾರೂ ಜನರು ಭಾಗವಹಿಸಿದ್ದು ಮತ್ತು ಧಾರ್ಮಿಕ ವೇದಿಕೆಯಾಗಿರುವುದರಿಂದ ಅಂಥ ಸಂದರ್ಭದಲ್ಲಿ ಶಿವನಗೌಡ ನಾಯಕ ಅವರು ರಾಜಕೀಯ ವಿಷಯವನ್ನು ಪ್ರಸ್ತಾವನೆ ಮಾಡಿ ಇನ್ನೊಬ್ಬರ ಬಗ್ಗೆ ಆರೋಪಿಸಿರುವುದು ಸರಿಯಾದ ಕ್ರಮವಲ್ಲ.

–ಬಸವರಾಜ ಪಾಟೀಲ ಇಟಿಗಿ, ವಿಧಾನ ಪರಿಷತ್‌ ಮಾಜಿ ಸದಸ್ಯ

‘ಇದು ಖಂಡನೀಯ’

ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಜವಾಗಿ ಸಾವಿರಾರೂ ಜನ ಸೇರಿರುವುದನ್ನು ಕಂಡು ಶಿವನಗೌಡ ನಾಯಕ ಅವರು ಅದನ್ನು ರಾಜಕೀಯವಾಗಿ ದುರಪಯೋಗ ಪಡೆದುಕೊಂಡಿದ್ದು ಖಂಡನೀಯ. ಇದು ಸಮಾಜಕ್ಕೆ ಕೆಟ್ಟ ಹೆಸರು ತರುವಂಥ ಸಂಪ್ರದಾಯವಾಗಿದೆ.

-ಶರಣಪ್ಪ ಕಲ್ಮಲ, ಜಿಪಂ ಉಪಾಧ್ಯಕ್ಷ, ರಾಯಚೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.