ರಾಜಕೀಯ ದಾಳವಾದ ಬಂಗಾಳಿ ಮುಸ್ಲಿಮರು

7

ರಾಜಕೀಯ ದಾಳವಾದ ಬಂಗಾಳಿ ಮುಸ್ಲಿಮರು

Published:
Updated:
ರಾಜಕೀಯ ದಾಳವಾದ ಬಂಗಾಳಿ ಮುಸ್ಲಿಮರು

ಧುಮ್ರಿ (ಅಸ್ಸಾಂ) :  ನಿಮ್ಮ ಮೇಲೆ ದಾಳಿ ಮಾಡಿದವರು ಎಷ್ಟು ಮಂದಿ ಇದ್ದರು? ಎಂಬ ನನ್ನ ಪ್ರಶ್ನೆಗೆ ಚಾಂದ್‌ಮರಿ ನಿರಾಶ್ರಿತರ ಶಿಬಿರದಲ್ಲಿದ್ದ ಬೋಡೊ ಯುವಕ ಸುದೇವ್ ನರ್ಜರಿ ತಕ್ಷಣ `ಲಾಖ್, ಲಾಖ್ ತೇ~ ಎಂದ.ಅವನ ಮಾತುಗಳನ್ನು ನಾನು ಧ್ವನಿಮುದ್ರಿಸುತ್ತಿದ್ದುದನ್ನು ನೋಡಿದ ಜತೆಗಿದ್ದ ಸ್ಥಳೀಯ ನಾಯಕ `ಲಾಖ್ ನಹೀಂ, ಹಜಾರ್ ಹೋಗಾ~ ಎಂದು ತಿದ್ದಿದ. ಸಂಖ್ಯೆಗಳಿಗೆ ಇಲ್ಲಿ ಲೆಕ್ಕವೇ ಇಲ್ಲ. `ಅಕ್ರಮ ವಲಸಿಗರ~ ಬಗ್ಗೆ ಸರ್ಕಾರದಲ್ಲಿಯೇ ಲೆಕ್ಕ ಇಲ್ಲ ಎಂದ ಮೇಲೆ ಈ ಹುಡುಗನಲ್ಲಿ ಎಲ್ಲಿರಬೇಕು? `ವೊ ಕೈಸೆ ತೇ?~ ಎಂದು ಕೇಳಿದರೂ `ಬಾಂಗ್ಲಾದೇಶಿ ಜೈಸೆ ಲಂಬಾ,ಚೌಡಾ ತೆ~ ಎನ್ನುವ ಉತ್ತರ ಅವನಲ್ಲಿ ಸಿದ್ದ ಇತ್ತು. ಸೈಕಲ್ ರಿಕ್ಷಾ ತುಳಿಯುವ ಬಡಕಲು ದೇಹದ ಬಾಂಗ್ಲಾದೇಶಿಯರನ್ನಷ್ಟೇ ನೋಡಿರುವ ನನಗೆ ಈ ಹುಡುಗ ವರ್ಣಿಸಿದ `ಲಂಬಾ-ಚೌಡಾ~ ಬಾಂಗ್ಲಾದೇಶಿಯ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯ ಆಗಲಿಲ್ಲ.ವಿಚಾರಣೆ ಇನ್ನಷ್ಟೇ ನಡೆಯಬೇಕಾಗಿದೆ. ಆದರೆ, ಗಲಭೆಗೆ `ಅಕ್ರಮ ಬಾಂಗ್ಲಾದೇಶಿ ವಲಸಿಗ~ರೇ ಕಾರಣ ಎಂದು ಕೆಲವು ಮಾಧ್ಯಮಗಳು ಸೇರಿದಂತೆ ಬಹಳಷ್ಟು ಮಂದಿ ತೀರ್ಪು ನೀಡಿಯಾಗಿದೆ. ಇನ್ನೂ ಕೆಲವರು ಮುಂದುವರಿದು ಬಂಗಾಳಿ ಮುಸ್ಲಿಮರ ತಲೆಮೇಲೆ ನೇರವಾಗಿ ಆರೋಪ ಹೊರಿಸಿಬಿಡುತ್ತಾರೆ. ಇವರ ಪ್ರಕಾರ `ಗಡ್ಡಬಿಟ್ಟವರು, ಬಂಗಾಳಿ ಮಾತನಾಡುವವರೆಲ್ಲರೂ  ಅಕ್ರಮ ಮುಸ್ಲಿಂ ವಲಸಿಗರು~.  ವಲಸೆ ಅಸ್ಸಾಂ ರಾಜ್ಯದ ಜ್ವಲಂತ ಸಮಸ್ಯೆ. ಇದು ಹಲವು ರಾಜಕೀಯ ಹೋರಾಟಗಳ ಬೆಂಕಿಗೆ ಹಿಂದೆಯೂ ಉರುವಲು ಆಗಿತ್ತು, ಈಗಲೂ...ಬಾಂಗ್ಲಾದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಸ್ಸಾಂನ ಜಿಲ್ಲೆಗಳ ಜನಸಂಖ್ಯೆ, ಅದರ ವೃದ್ಧಿದರ ಮತ್ತು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣವನ್ನು ನೋಡಿದವರ‌್ಯಾರೂ ಬಾಂಗ್ಲಾದೇಶದಿಂದ ವಲಸೆ ನಡೆಯುತ್ತಿರುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಆದರೆ ಇವರೆಲ್ಲರೂ ಕಳೆದ ಎರಡು ಮೂರು ದಶಕಗಳಲ್ಲಿ ಇಲ್ಲವೇ 1971ರ ಬಾಂಗ್ಲಾಯುದ್ಧದ ನಂತರವೇ ಬಂದವರೆಂದು ಹೇಳುವುದಕ್ಕೆ ಯಾವ ಆಧಾರಗಳೂ ಇಲ್ಲ. ಅಸ್ಸಾಂನ ವಲಸೆಗೆ ಹೆಚ್ಚೂ ಕಡಿಮೆ ಎರಡು ದಶಕಗಳ ಇತಿಹಾಸ ಇದೆ. ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಈಗಲೂ ಅತೀ ಹೆಚ್ಚಿನ ವಲಸಿಗರು ಇರುವುದು ಈ ರಾಜ್ಯದಲ್ಲಿ. ಇದಕ್ಕೆ ಐತಿಹಾಸಿಕವಾದ ಕಾರಣಗಳಿವೆ.1826ರಲ್ಲಿ ಆಗಿನ ಬರ್ಮಾವನ್ನು ಸೋಲಿಸಿ ಅಸ್ಸಾಂ ಅನ್ನು ತಮ್ಮ ಆಳ್ವಿಕೆಗೆ ಒಳಪಡಿಸಿದ ನಂತರ ಬ್ರಿಟಿಷರು ಪೂರ್ವಬಾಂಗ್ಲಾದಿಂದ  ಬಂಗಾಳಿ ಮುಸ್ಲಿಮರನ್ನು ಇಲ್ಲಿಗೆ ಕರೆತಂದಿದ್ದರು.ಜಮೀನ್ದಾರಿ ವ್ಯವಸ್ಥೆ: ವಲಸೆಗೆ ಇನ್ನೊಂದು ಕಾರಣ ಪೂರ್ವ ಬಂಗಾಳದಲ್ಲಿದ್ದ ಜಮೀನ್ದಾರಿ ವ್ಯವಸ್ಥೆ. ಜಮೀನ್ದಾರಿ ವ್ಯವಸ್ಥೆ ಇಲ್ಲದ ಅಸ್ಸಾಂ ಬಗ್ಗೆ ಸಹಜವಾಗಿಯೇ ಆಕರ್ಷಿತರಾಗಿ ಬಂದ ವಲಸಿಗರನ್ನು ಬ್ರಿಟಿಷರು ಕೂಡಾ ಬಳಸಿಕೊಂಡರು. ಹೊಲಗದ್ದೆಗಳು ಮತ್ತು ಚಹಾತೋಟಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸಮಾಡುವ ಕೂಲಿಗಳು ಸಿಕ್ಕ ಕಾರಣಕ್ಕೆ ಬ್ರಿಟಿಷರು ಕೂಡಾ ಈ ವಲಸೆಗೆ ಉತ್ತೇಜನ ನೀಡಿದ್ದರು. ಆದರೆ ಸಾಮಾನ್ಯವಾಗಿ ಅನ್ಯ ಸಮುದಾಯಗಳನ್ನು ಜತೆಯಲ್ಲಿ ಸೇರಿಸಿಕೊಳ್ಳಲು ಇಷ್ಟಪಡದ ಬುಡಕಟ್ಟು ಸಮುದಾಯಗಳು ಬಂಗಾಳಿ ಮುಸ್ಲಿಮರ ಪ್ರವೇಶವನ್ನು ಪ್ರಾರಂಭದಿಂದಲೂ ಪ್ರತಿರೋಧಿಸುತ್ತಾ ಬಂದಿವೆ.ಈ ಕಾರಣದಿಂದಾಗಿಯೇ ಪೂರ್ವ ಬಾಂಗ್ಲಾದಿಂದ ವಲಸೆ ಬಂದವರಲ್ಲಿ ಹೆಚ್ಚಿನವರು ನೆಲೆ ಕಂಡುಕೊಂಡದ್ದು ಬ್ರಹ್ಮಪುತ್ರದ ಮರಳು ತುಂಬಿರುವ ನಡುಗಡ್ಡೆಗಳಲ್ಲಿ. ಇದನ್ನು ಇಲ್ಲಿ `ಚಾರ್~ ಎನ್ನುತ್ತಾರೆ. ಬೇರೆಬೇರೆ ಗಡಿ ಜಿಲ್ಲೆಗಳಲ್ಲಿ ಹಂಚಿಹೋಗಿರುವ ಈ `ಚಾರ್‌ಗಳು~ ರಾಜ್ಯದ ಒಟ್ಟು ಪ್ರದೇಶದ ಶೇಕಡಾ ಆರರಷ್ಟಿದೆ. ಮುಸ್ಲಿಮರು ನಿರ್ಣಾಯಕ ಮತದಾರರಾಗಿರುವ ಹನ್ನೆರಡು ವಿಧಾನಸಭಾ ಕ್ಷೇತ್ರಗಳು ಇದೇ ಭೂಪ್ರದೇಶದ ವ್ಯಾಪ್ತಿಯಲ್ಲಿವೆ.ಈ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಿಬರುವವರನ್ನು ತಡೆಯುವುದು ಕೂಡಾ ಕಷ್ಟ. ಬ್ರಹ್ಮಪುತ್ರಾ ನದಿಯನ್ನೇ ಗಡಿಯಾಗಿ ಹೊಂದಿರುವ ಧುಬ್ರಿಯೇ ಪ್ರಾರಂಭದಿಂದಲೂ ಪೂರ್ವಬಂಗಾಳದಿಂದ ಅಕ್ರಮವಾಗಿ ವಲಸೆ ಬರುವವರಿಗೆ ಸುಲಭದ ದಾರಿಯಾಗಿತ್ತು. ಧುಬ್ರಿ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಮುಸ್ಲಿಂ ಜನಸಂಖ್ಯೆಗೆ ಅಕ್ರಮ ವಲಸೆ ಕೂಡಾ ಕಾರಣ ಎನ್ನುವುದು ನಿರ್ವಿವಾದ. ಬೋಡೊ ಪ್ರಾಂತೀಯ ಸ್ವಾಯತ್ತ ಜಿಲ್ಲೆಯ (ಬಿಟಿಎಡಿ)  ವ್ಯಾಪ್ತಿಯಿಂದ ಹೊರಗೆ ಇರುವ ಧುಬ್ರಿಯ ಲೋಕಸಭಾ ಕ್ಷೇತ್ರದ ಸದಸ್ಯ ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್. `ಧುಬ್ರಿ ಗಡಿಯನ್ನು ಭದ್ರಗೊಳಿಸಲಿ ಅಕ್ರಮ ವಲಸೆ ಅರ್ಧದಷ್ಟು ನಿಂತುಬಿಡುತ್ತದೆ. ಆ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯೇ?~ ಎಂದು ಎಬಿಎಸ್‌ಯು ನಾಯಕ ಜಿರೋನಿ ಬಸುಮತಾರಿ.ವಲಸೆ ತಡೆ ಕಷ್ಟ: `ಕೆಲವೆಡೆ 22 ಕಿ.ಮೀ.ಅಗಲ ಇರುವ ಬ್ರಹ್ಮಪುತ್ರ ನದಿಯಲ್ಲಿ ಮೀನು ಹಿಡಿಯುವ ನೆಪದಲ್ಲಿ ಭಾರತದ ಗಡಿಪ್ರವೇಶಿಸುವವರನ್ನು ಪತ್ತೆಹಚ್ಚುವುದು ಕೂಡಾ ಕಷ್ಟದ ಕೆಲಸ. ಒಮ್ಮಮ್ಮೆ ಈ ಮೀನುಗಾರರು ಬಾಂಗ್ಲಾ ಗಡಿಪ್ರದೇಶದಿಂದ 400 ಕಿ.ಮೀ.ನಷ್ಟು ಒಳಭಾಗದಲ್ಲಿರುವ ಅಸ್ಸಾಂನ ತೇಜ್‌ಪುರದ ವರೆಗೂ ಬರುವುದುಂಟು. ಇಂತಹವರನ್ನು ತಡೆಯುವುದು ಕಷ್ಟದ ಕೆಲಸ ` ಎನ್ನುತ್ತಾರೆ ನಿವೃತ್ತ ಬಿಎಸ್‌ಎಫ್ ಅಧಿಕಾರಿಯೊಬ್ಬರು.ಬ್ರಹ್ಮಪುತ್ರ ನಡುಗಡ್ಡೆಗಳಲ್ಲಿದ್ದವರು ಇತ್ತೀಚಿನ ವರ್ಷಗಳಲ್ಲಿ  ಒಳನಾಡನ್ನು ಪ್ರವೇಶಿಸಿದ್ದಾರೆ, ಶ್ರಮಜೀವಿಗಳಾದ ಮತ್ತು ಕಡಿಮೆ ಸಂಬಳಕ್ಕಾಗಿ ದುಡಿಯಲು ಸಿದ್ಧ ಇರುವ ಇವರನ್ನು ಸ್ಥಳೀಯರು  ಪ್ರಾರಂಭದಲ್ಲಿ ಬರಮಾಡಿಕೊಂಡಿದ್ದರು. ಈ ವಲಸಿಗರು ಬುಡಕಟ್ಟು ಸಮುದಾಯಗಳಿಗೆ ಮೀಸಲಾಗಿದ್ದ ಮತ್ತು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಲ್ಲಿ ಘರ್ಷಣೆಗಳು ನಡೆಯುತ್ತಿದ್ದರೂ ಅದು ಗಂಭೀರ ಸ್ವರೂಪ ಪಡೆದಿರಲಿಲ್ಲ. ಎರಡು-ಮೂರು ದಶಕಗಳ ಹಿಂದೆ ವಲಸೆ ಬಂದವರಲ್ಲಿ ಹೆಚ್ಚಿನವರು ಈಗ ಅಸ್ಸಾಮಿಗಳಾಗಿ ಹೋಗಿದ್ದಾರೆ.ಇವರಲ್ಲಿ ಶೇಕಡಾ 90ಕ್ಕಿಂತಲೂ ಹೆಚ್ಚು ಮಂದಿ ಮಾತನಾಡುವುದು ಅಸ್ಸಾಮಿ.  ಇವರಿಗೆ ಹಿಂದಿ, ಉರ್ದುವಿನ ಗಂಧಗಾಳಿ ಇಲ್ಲ. ಉಳಿದೆಲ್ಲ ರಾಜ್ಯಗಳಂತೆ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದ ಮೂಲ ಅಸ್ಸಾಮಿಗಳು ಅಸ್ಸಾಮಿ ಮರೆಯತೊಡಗಿದ್ದಾರೆ. ಶೇಕಡಾ 30ರಷ್ಟು ಜನಸಂಖ್ಯೆ ಇರುವ ಬೋಡೊಗಳು ಬೋಡೊ ಭಾಷೆಯನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಅಸ್ಸಾಮಿ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮುಸ್ಲಿಮರು.2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅಸ್ಸಾಮಿ ಮಾತನಾಡುವವರು ಶೇಕಡಾ 48.80. ಆದರೆ 74.29ರಷ್ಟು ಮುಸ್ಲಿಮರು ನೆಲೆಸಿರುವ ರಾಜ್ಯದ ದುಬ್ರಿ ಜಿಲ್ಲೆಯಲ್ಲಿ ಅಸ್ಸಾಮಿ ಮಾತನಾಡುವವರ ಸಂಖ್ಯೆ ಶೇಕಡಾ 70.07. ಮುಸ್ಲಿಮರಾಗಿ ಹುಟ್ಟಿದ ತಪ್ಪಿಗೆ ಮತ್ತು ಬಂಗಾಳಿ ಮಾತನಾಡುತ್ತಿರುವ ಕಾರಣಕ್ಕೆ ಇವರೆಲ್ಲ `ಬಾಂಗ್ಲಾದೇಶಿ~ ಆಗಿಬಿಟ್ಟಿದ್ದಾರೆ.ವಲಸೆ ರಾಜಕೀಯ: ವಲಸೆ ರಾಜಕೀಯ ಚರ್ಚಾಕೂಟದ ವಿಷಯವಾಗಿದ್ದು 1971ರಲ್ಲಿ ಬಾಂಗ್ಲಾಯುದ್ಧದ ನಂತರದ ದಿನಗಳಲ್ಲಿ. ಆ ಅವಧಿಯಲ್ಲಿ ವಲಸೆ ಬಂದ ಬಹಳಷ್ಟು ಬಾಂಗ್ಲಾ ಮುಸ್ಲಿಮರು ಹಿಂದಿರುಗದೆ ಉಳಿದುಕೊಂಡಿದ್ದರು. ಕಾಂಗ್ರೆಸ್ ಅವರನ್ನು ಮತಬ್ಯಾಂಕ್ ಮಾಡಿಕೊಂಡು ರಾಜಕೀಯ ಲಾಭ ಪಡೆಯುತ್ತಾ ಹೋಯಿತು.`ವಿದೇಶಿಯರ~ ವಿರುದ್ಧ 1979ರಲ್ಲಿ ಅಸ್ಸಾಂ ಚಳವಳಿ ಪ್ರಾರಂಭವಾದ ನಂತರ  ವಲಸೆ ರಾಜಕೀಯ ಹೋರಾಟದ ಮುಂಚೂಣಿಗೆ ಬಂತು. ಈ ಚಳವಳಿಯ ಫಲವಾಗಿಯೇ ನಡೆದ ಅಸ್ಸಾಂ ಒಪ್ಪಂದದ ಅಂಗವಾಗಿ ಜಾರಿಗೆ ಬಂದ `ಅಕ್ರಮ ವಲಸಿಗರನ್ನು ನ್ಯಾಯಮಂಡಳಿ ಮೂಲಕ ನಿರ್ಧರಿಸುವ  ಕಾಯಿದೆ~ (ಐಎಂಡಿಟಿ) ಬಂಗಾಳಿ ಮುಸ್ಲಿಮ್ ಮತ್ತು ಬೋಡೊಗಳ ನಡುವಿನ ಸಂಬಂಧದಲ್ಲಿ ಇನ್ನಷ್ಟು ಬಿರುಕು ಮೂಡಲು ಕಾರಣವಾಯಿತೇ ಹೊರತು ಸಮಸ್ಯೆಗೆ ಪರಿಹಾರವಾಗಲಿಲ್ಲ. `1966ರಿಂದ 1971ರ ವರೆಗಿನ ಅವಧಿಯಲ್ಲಿ ವಲಸೆ ಬಂದವರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕಿತ್ತುಹಾಕಬೇಕು ಮತ್ತು 1971ರ ನಂತರ ಬಂದವರನ್ನು ದೇಶದಿಂದ ಹೊರಗೆ ಹಾಕಬೇಕು~ ಎಂದು ಈ ಕಾಯಿದೆ ಹೇಳಿದೆ. ಅಸ್ಸಾಂ ಗಣಪರಿಷತ್ ಸರ್ಕಾರವಾಗಲಿ, ಅದರ ನಂತರ ಬಂದ ಕಾಂಗ್ರೆಸ್ ಸರ್ಕಾರವಾಗಲಿ ಈ ಕಾಯಿದೆಯನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ 1985ರಿಂದ 2000 ವರ್ಷದ ವರೆಗಿನ ಹದಿನೈದು ವರ್ಷಗಳ ಅವಧಿಯಲ್ಲಿ ಐಎಂಡಿಟಿ ಕಾಯ್ದೆಯ ಪ್ರಕಾರ 3,10,759 ವ್ಯಕ್ತಿಗಳನ್ನು ಗುರುತಿಸಲಾಗಿತ್ತು. ಅವರಲ್ಲಿ 10,015 ವ್ಯಕ್ತಿಗಳು ಅಕ್ರಮ ವಲಸಿಗರು ಎಂದು ತೀರ್ಮಾನಿಸಲಾಗಿತ್ತು. ಅಂತಿಮವಾಗಿ ದೇಶದಿಂದ ಹೊರಗೆ ಹಾಕಿದ್ದು1,481 ವ್ಯಕ್ತಿಗಳನ್ನು ಮಾತ್ರ. ಈ ಕಾಯ್ದೆಯ ವೈಫಲ್ಯವನ್ನು ಮನಗಂಡ ಸುಪ್ರೀಂಕೋರ್ಟ್ 2005ರಲ್ಲಿ ಅದನ್ನು ರದ್ದುಗೊಳಿಸಿತ್ತು. ಇದರ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಹಳೆಯ `ವಿದೇಶಿಯರು (ನ್ಯಾಯಮಂಡಳಿ) ಕಾಯ್ದೆ~ಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿದರೂ ಇದರಿಂದ ಅಕ್ರಮ ವಲಸಿಗರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಆಗಿಲ್ಲ.1971ರ ವರ್ಷವನ್ನು ಆಧಾರವಾಗಿಟ್ಟುಕೊಂಡು ಅದರ ನಂತರ ವಲಸೆ ಬಂದವರನ್ನು ದೇಶದಿಂದ ಹೊರಗೆ ಹಾಕುವುದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ಶಾಶ್ವತವಾಗಿ ಸಮಸ್ಯೆ ಪರಿಹಾರವಾದರೆ ಸಾಕು~ ಎನ್ನುತ್ತಾರೆ ಅಖಿಲ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುರ್ ರಹೀಮ್.  ಆದರೆ ಮುಂದಿನ ಚುನಾವಣೆಯ ಮೇಲೆ ಕಣ್ಣುನೆಟ್ಟು ಕೂತಿರುವ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ವಿವಾದ ಅಷ್ಟೊಂದ ಸುಲಭದಲ್ಲಿ ಬಗೆಹರಿಯುವುದು ಬೇಕಾಗಿದ್ದಂತೆ ಕಾಣುವುದಿಲ್ಲ.(ನಾಳಿನ ಸಂಚಿಕೆಯಲ್ಲಿ 4ನೇ ಕಂತು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry