ರಾಜಕೀಯ ದಾಳವಾದ ಸುವರ್ಣ ಗ್ರಾಮ

7

ರಾಜಕೀಯ ದಾಳವಾದ ಸುವರ್ಣ ಗ್ರಾಮ

Published:
Updated:

ನಗರಗಳಂತೆ ಗ್ರಾಮೀಣ ಪ್ರದೇಶಗಳಲ್ಲೂ ಮೌಲಸೌಕರ್ಯಗಳನ್ನು ಕಲ್ಪಿಸುವ `ಸುವರ್ಣ ಗ್ರಾಮ~ ಯೋಜನೆ ರಾಜಕೀಯ ಸುಳಿಯಲ್ಲಿ ಸಿಲುಕಿದೆ. ಶಾಸಕರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಿದ ಹಳ್ಳಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದನೆ ನೀಡುತ್ತಾರೆ.ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರು ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸುತ್ತಾರೆ. ಮತಗಳ ಲೆಕ್ಕಾಚಾರದ ಆಧಾರದ ಮೇಲೆಯೇ ಹಳ್ಳಿಗಳ ಆಯ್ಕೆ ನಡೆಯುತ್ತದೆ. ಅತಿ ಹೆಚ್ಚು ಮತಗಳು ದೊರೆಯುವ ಅಥವಾ ಮುಂದಿನ ಚುನಾವಣೆಯಲ್ಲಿ ಹೆಚ್ಚು ಮತಗಳು ದೊರೆಯುವ ಭರವಸೆಯೊಂದಿಗೆ ಹಳ್ಳಿಗಳಲ್ಲಿ ಮಾತ್ರ ಈ ಯೋಜನೆ ಅನುಷ್ಠಾನಗೊಳ್ಳುತ್ತದೆ.ಅತಿ ಹಿಂದುಳಿದ ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸುವುದು ಈ ಯೋಜನೆ ಉದ್ದೇಶ. ಆದರೆ, ಶಾಸಕರ ಮತ್ತು ಅವರ ಹಿಂಬಾಲಕರ ರಾಜಕೀಯ ಲೆಕ್ಕಾಚಾರದಲ್ಲಿ ಹಲವು ಬಾರಿ ನಿಜವಾಗಿ ಹಿಂದುಳಿದ ಹಳ್ಳಿಗಳೇ ಈ ಯೋಜನೆಯಿಂದ ವಂಚಿತವಾಗಿವೆ.ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ತಾವು ನೀಡಿದ್ದ ಪಟ್ಟಿಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು. ಕೊನೆಗೆ ಶಾಸಕರ ಅಣತಿಯಂತೆ ಎರಡು ಹಳ್ಳಿಗಳನ್ನು ಸೇರಿಸಲು ಸರ್ಕಾರ ಒಪ್ಪಿಕೊಂಡಿತು.ಸುವರ್ಣ ಗ್ರಾಮದ ಯೋಜನೆ ಅಡಿ ಶೇಕಡಾ 70ರಷ್ಟು ರಸ್ತೆ ಮತ್ತು ಚರಂಡಿಗೆ, ಶೇಕಡಾ 3ರಷ್ಟು ಘನತಾಜ್ಯ ವಸ್ತುಗಳ ವಿಲೇವಾರಿಗೆ, ಶೇಕಡಾ 2ರಷ್ಟು  ಸೌರದೀಪಗಳು, ಶೇಕಡಾ 10ರಷ್ಟು ಅಂಗನವಾಡಿ ಕಟ್ಟಡಗಳು ಹಾಗೂ ಶೇಕಡಾ 15ರಷ್ಟು ಶಾಲಾ ಕಟ್ಟಡ, ಗ್ರಂಥಾಲಯ, ಬಯಲು ರಂಗಮಂದಿರ, ಸಮುದಾಯ ಭವನ ಮುಂತಾದ ಕಾಮಗಾರಿಗಳಿಗೆ ಹಣವನ್ನು ಬಳಸಲಾಗುತ್ತದೆ.

 

ಜಿಲ್ಲೆಯಲ್ಲಿ 2008-09ರಲ್ಲಿ ರೂ 4.79 ಕೋಟಿ, 2009-10ರಲ್ಲಿ 52 ಹಳ್ಳಿಗಳಲ್ಲಿ ರೂ 23.49 ಕೋಟಿ,  2010-11ರಲ್ಲಿ ರೂ 3.16 ಕೋಟಿ, 2011-12ರಲ್ಲಿ 4.7 ಕೋಟಿ ಅನುದಾನ ಖರ್ಚು ಮಾಡಲಾಗಿದೆ. 2012-13ನೇ ಸಾಲಿಗೆ 72 ಹಳ್ಳಿಗಳನ್ನು ಆಯ್ಕೆ ಮಾಡಿ ರೂ 35.65 ಕೋಟಿ ನಿಗದಿಪಡಿಸಲಾಗಿದೆ. ಗ್ರಾಮದ ಜನಸಂಖ್ಯೆ ಅನುಗುಣವಾಗಿ ಅನುದಾನ ನಿಗದಿಪಡಿಸಲಾಗಿದೆ. ಒಬ್ಬ ವ್ಯಕ್ತಿಗೆ ರೂ 250 ನಿಗದಿಪಡಿಸಲಾಗಿದೆ. ಸುಮಾರು 150 ಹಳ್ಳಿಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಆದರೆ, ಇನ್ನೂ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಕೆಲವೆಡೆ ಈ ಹಿಂದೆ ಇತರೆ ಯೋಜನೆ ಅಡಿ ಅನುಷ್ಠಾನಗೊಳಿಸಿದ ಕಾಮಗಾರಿಗೆ  ಇದೇ ಅನುದಾನ ಬಳಸಿದ ಪ್ರಕರಣಗಳೂ ನಡೆದಿವೆ.`ಓವರ್‌ಲ್ಯಾಪ್~ ಪ್ರಕರಣಗಳನ್ನು ತಡೆಯಲು `ಆಸ್ತಿ ದಾಖಲೆ ನಿರ್ವಹಣೆ~ ಅತ್ಯಂತ ಅಗತ್ಯವಾಗಿದೆ. ಆದರೆ, ಇದು ಸಮರ್ಪಕವಾಗಿ ನಡೆಯುತ್ತಿಲ್ಲ. ಒಟ್ಟಾರೆ ಶೇಕಡಾ 60ರಷ್ಟು ಮಾತ್ರ ಈ ಯೋಜನೆ ಯಶಸ್ವಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry