ರಾಜಕೀಯ- ಧರ್ಮ ಬೆರೆಸದಿರಿ

ಶನಿವಾರ, ಜೂಲೈ 20, 2019
23 °C

ರಾಜಕೀಯ- ಧರ್ಮ ಬೆರೆಸದಿರಿ

Published:
Updated:

ಆಲಮೇಲ: ರಾಜಕೀಯ ಮತ್ತು ಧರ್ಮ ಬೇರೆಯಾಗಿದ್ದು ಇವುಗಳನ್ನು ಬೆರೆಸುವ ಪ್ರಯತ್ನ ಮಾಡಬಾರದು. ಮನುಕುಲದ ಉದ್ಧಾರಕ್ಕೆ ವೀರಶೈವ ಧರ್ಮದ ಅಗತ್ಯವಿದೆ. ಅದರಿಂದಲೇ ಶಾಂತಿ ಸಿಗುತ್ತದೆ ಎಂದು ಕಾಶಿಪೀಠದ  ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ಅವರು ಇಲ್ಲಿಗೆ ಸಮೀಪದ ತಾವರಖೇಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ತೋಟೇಶ್ವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅಂತರ್ಜಲ ಹೆಚ್ಚಿಸಲು ಕೆರೆಗಳನ್ನು ಕಟ್ಟುವ ಮೂಲಕ ಸಿದ್ದರಾಮೇಶ್ವರ ಕಾಯಕಯೋಗಿಯಾದ. ಶುದ್ಧ ಕಾಯಕ ಪ್ರತಿಯೊಬ್ಬನದ್ದಾಗಬೇಕು. ಅದಕ್ಕೆ ತಕ್ಕ ಫಲ ಸಿಗುತ್ತದೆ ಎಂದು ಹೇಳಿದರು.ಪಂಚ ಪೀಠಗಳು ಸನಾತವಾದವು. ವೀರಶೈವ ಧರ್ಮದ ಸ್ಥಾಪನೆಗೆ ನಾಂದಿ ಹಾಡಿವೆ ಎಂದ ಅವರು ಎಲ್ಲ ಧರ್ಮಗಳು ಸಾಮರಸ್ಯದೊಂದಿಗೆ ಬೆರೆಯಬೇಕು ವೀರಶೈವ ಧರ್ಮದ ಸಂಸ್ಕಾರದ ಜೊತೆಗೆ ಅನ್ಯಧರ್ಮವನ್ನು ಪ್ರೀತಿಸುವುದನ್ನು ಕಲಿತು ಸಾಮರಸ್ಯ ದಿಂದ ಬಾಳಿ ಎಂದು ಹಾರೈಸಿದರು,

ಇದಕ್ಕೂ ಮುನ್ನ ಮಾತನಾಡಿದ ಆಗ್ರೋ ಕಾರ್ನ್ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ ಗುಂದಗಿ “ಆರ್ಥಿಕ ಬಲಿಷ್ಠತೆಯಲ್ಲಿ ಧಾರ್ಮಿಕ ಪ್ರಗತಿ ಮೂಲಕ ಧಾರ್ಮಿಕ ಮನೋ ಭಾವ ಬೆಳೆಸುವ ಕಾರ್ಯ ನಡೆಯಬೇಕು ಎಂದರು.ಗಡಿಗೌಡಗಾಂವದ ಶಾಂತವೀರ ಶಿವಾಚಾರ್ಯರು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ವಹಿಸಿದ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಈ ಪುಟ್ಟ ಗ್ರಾಮದಲ್ಲಿ ಇಂತಹ ಬೃಹತ್ ಪ್ರಮಾಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ಧಾರ್ಮಿಕ ಭಾವನೆ ವೃದ್ಧಿಸುತ್ತದೆ ಎಂದು ತಿಳಿಸಿದರು.ಜಿ.ಪಂ. ಸದಸ್ಯ ಕಾಶಿನಾಥ ಗಂಗನಳ್ಳಿ ಧರ್ಮಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ವಿರಕ್ತಮಠದ ಶ್ರೀಗಳು, ಜಿಪಂ ಸದಸ್ಯ ಮಲ್ಲಪ್ಪ ತೋಡಕರ, ತಾಪಂ ಸದಸ್ಯ ಕಮಲಾಕರ ಕತ್ತಿ, ಡಾ.ಶ್ರೀಶೈಲ ಪಾಟೀಲ, ಯಶ್ವಂತರಾಯ ರೂಗಿ, ಪ್ರಾ.ಎಸ್.ಎಸ್. ಧನಶೆಟ್ಟಿ, ಪ್ರಾ.ಆರ್.ಎಸ್. ಗಂಗನಳ್ಳಿ, ಕಡಣಿ ಗ್ರಾಪಂ ಅಧ್ಯಕ್ಷ ಹಣಮಂತ್ರಾಯ ಕಳಸಗೊಂಡ, ತಾಪಂ ಮಾಜಿ ಸದಸ್ಯ ಬಸವರಾಜ ತೆಲ್ಲೂರ, ಬಸವರಾಜ ತಾವರಗೇರಿ, ಬಸವರಾಜ ಬಾಗೇವಾಡಿ, ದುಂಡಪ್ಪ ಲಾಳಸಂಗಿ ವೇದಿಕೆಯಲ್ಲಿದ್ದರು.ಯಶವಂತ ಬಡಿಗೇರ, ಬಂಡಯ್ಯ ಸುಂಟನೂರ ಪ್ರಾರ್ಥಿಸಿದರು. ಶಿವು ಸರ್ ಗುಂದಗಿ ಸ್ವಾಗತಿಸಿದರು.ಶ್ರೀಶೈಲ ಮಠಪತಿ ಕಾರ್ಯಕ್ರಮ ನಿರೂಪಿಸಿದರು.ಮೆರೆವಣಿಗೆ: ಧರ್ಮಸಭೆಗೂ ಮೊದಲು  ಗ್ರಾಮದ ಅಗಸಿಯಿಂದ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು.

250ಕ್ಕೂ ಹೆಚ್ಚು ಸುಮಂಗಲೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಗೆ ಕಳೆ ತಂದಿದ್ದರು. ಚಕ್ಕಲಗಿ ಮೇಳ, ಡೊಳ್ಳು ಕುಣಿತ, ಭಜನಾ ತಂಡಗಳು ಭಾಗವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry