ಗುರುವಾರ , ನವೆಂಬರ್ 21, 2019
27 °C

ರಾಜಕೀಯ ನಿವೃತ್ತಿ- ಕೃಷ್ಣಯ್ಯ ಶೆಟ್ಟಿ

Published:
Updated:

ಮಾಲೂರು:  ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಹಿನ್ನೆಲೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿರುವ ಶಾಸಕ ಕೃಷ್ಣಯ್ಯ ಶೆಟ್ಟಿ ರಾಜಕೀಯ ನಿವೃತ್ತಿ ಹೊಂದುವುದಾಗಿ ಶನಿವಾರ ಘೋಷಿಸಿದರು.ಪಟ್ಟಣದ ಹೊರವಲಯದಲ್ಲಿ ಏರ್ಪಡಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, `ಪಕ್ಷದಲ್ಲಿನ ಘಟನಾವಳಿಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲು ಬಯಸಿರುವೆ' ಎಂದರು.`ಎರಡು ಬಾರಿ ಶಾಸಕನಾಗಿ, ಒಮ್ಮೆ ಸಚಿವನಾಗಿ ಸೇವೆ ಸಲ್ಲಿಸಿರುವ ನನಗೆ ಕಳೆದ ಬಾರಿ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವೆ. ಮೊದಲನೇ ಪಟ್ಟಿಯಲ್ಲಿ ಹೆಸರು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ ಹೆಸರು ಪ್ರಕಟವಾಗದಿರುವುದು ಮನಸ್ಸಿಗೆ ಘಾಸಿ ಉಂಟು ಮಾಡಿದೆ' ಎಂದರು.ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಮುಖಂಡರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ, ಅದನ್ನು ತಪ್ಪಿಸಲು ಸಕ್ರಿಯ ರಾಜಕಾರಣದಿಂದ ದೂರವಿರಲು ಕುಟುಂಬದ ಸದಸ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಈ ತೀರ್ಮಾನ ಕೈಗೊಂಡಿರುವೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವೆ ಎಂದು ಹೇಳಿದರು.ಆದರೆ ಸಭೆಯಲ್ಲಿದ್ದ ಬೆಂಬಲಿಗರು ಶಾಸಕರ ಮಾತನ್ನು ಒಪ್ಪಲಿಲ್ಲ. `ಪಕ್ಷೇತರರಾಗಿಯಾದರೂ ನಿಮ್ಮನ್ನು ಕಣಕ್ಕಿಳಿಸಿ ಬಹುಮತದಿಂದ ಗೆಲ್ಲಿಸುತ್ತೇವೆ' ಎಂದರು. `ನಾವೆಲ್ಲರೂ ನಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ' ಎಂದು ಸ್ಥಳೀಯ ಸಂಸ್ಥೆಗಳ ಹಲವು ಸದಸ್ಯರು ಹೇಳಿದರು.

ಪ್ರತಿಕ್ರಿಯಿಸಿ (+)