ರಾಜಕೀಯ ಪಕ್ಷಗಳಲ್ಲಿ ಸಂಚಲನ: ಕುಷ್ಟಗಿ ಕ್ಷೇತ್ರದತ್ತ ರೆಡ್ಡಿ ಒಲವು?

7

ರಾಜಕೀಯ ಪಕ್ಷಗಳಲ್ಲಿ ಸಂಚಲನ: ಕುಷ್ಟಗಿ ಕ್ಷೇತ್ರದತ್ತ ರೆಡ್ಡಿ ಒಲವು?

Published:
Updated:

ಕುಷ್ಟಗಿ: ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಸದ್ಯ ಜೈಲುಹಕ್ಕಿಯಾಗಿ ಹೈದರಾಬಾದ್ ಚಂಚಲಗುಡಾ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದಿಂದ ಬಿಎಸ್‌ಅರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ.ಬಳ್ಳಾರಿ, ಚಿತ್ರದುರ್ಗ ಅಥವಾ ಕೊಪ್ಪಳ ಜಿಲ್ಲೆಯಲ್ಲಿ ರಡ್ಡಿ ಜೈಲಿನಿಂದಲೇ ಕಣಕ್ಕಿಳಿಯಲಿದ್ದಾರೆ ಎಂದು ಸ್ವತಃ ಅವರ ಸಹೋದರ ಜಿ.ಸೋಮಶೇಖರರೆಡ್ಡಿ ಹೇಳಿದ್ದರೆ ವೈರಿಗಳೇ ಇಲ್ಲದ ಹೊಸ ಕ್ಷೇತ್ರ ಕುಷ್ಟಗಿಯಿಂದ ಕ್ಷೇತ್ರದಿಂದ ಸ್ಪರ್ಧಿಸುವುದು ಹೆಚ್ಚು ಸೂಕ್ತ ಎಂಬುದು ಬಿಎಸ್‌ಆರ್ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರವಾಗಿದೆ ಎಂದು ತಿಳಿದಿದೆ. ಜನಾರ್ಧನರೆಡ್ಡಿ ಸ್ಪರ್ಧೆ ಖಚಿತ ಆದರೆ ಕುಷ್ಟಗಿಯಿಂದಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.ಫಲಿತಾಂಶ ಏನೇ ಆಗಿರಲಿ ಆದರೆ ಬಳ್ಳಾರಿಯಲ್ಲಿ ಈ ಹಿಂದಿನ ಚುನಾವಣೆಗಳ ರೀತಿ ನೀತಿಗಳನ್ನು ಗಮನಿಸಿರುವ ಇಲ್ಲಿಯ ಚುನಾವಣಾ ಆಕಾಂಕ್ಷಿಗಳಿಗೆ ಕುಷ್ಟಗಿಯಲ್ಲಿ ಜನಾರ್ದನರೆಡ್ಡಿ ಗಾಲಿ ಉರುಳಲಿದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ ಎನ್ನಲಾಗಿದೆ. ಹಾಗಾಗಿಯೇ `ಇಲ್ಲಿ ರೆಡ್ಡಿ ಸ್ಪರ್ಧೆ ಕೇವಲ ಊಹಾಪೂಹ ಅಪರಿಚಿತ ಕ್ಷೇತ್ರದಲ್ಲಿ ಜನಾರ್ದನರೆಡ್ಡಿ ಇಳಿಯುವುದು ಸುಲಭವಲ್ಲ' ಎಂದು ಇತರೆ ರಾಜಕೀಯ ಪಕ್ಷಗಳ ಮುಖಂಡರು ಹೇಳುತ್ತಿದ್ದರೂ ಅವರಲ್ಲಿ ಅಳುಕು ಉಂಟಾಗಿರುವುದು ಸುಳ್ಳಲ್ಲ.ಈ ಮಧ್ಯೆ ಬಿಎಸ್‌ಆರ್ ಕಾಂಗ್ರೆಸ್ ನೇತಾರ ಬಿ.ಶ್ರೀರಾಮುಲು ಅವರ ನಿಕಟವರ್ತಿಯಾಗಿರುವ ರಾಜಶೇಖರಗೌಡ ಗೋನಾಳ ಅವರೇ ಕುಷ್ಟಗಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಇತ್ತೀಚೆಗೆ ನಡೆದ ಬಹಿರಂಗ ಸಭೆಯಲ್ಲಿ ಈಗಾಗಲೇ ಘೋಷಿಸಿದ್ದಲ್ಲದೇ ಪಕ್ಷದ ಮುಖಂಡರು ಮತಯಾಚನೆ ಮಾಡುತ್ತಿದ್ದಾರೆ, ಕಳೆದ ಆರು ತಿಂಗಳಿನಿಂದಲೂ ರಾಜಶೇಖರಗೌಡ ಗೋನಾಳ ಬೆಂಬಲಿಗರು, ತಂಡೋಪತಂಡವಾಗಿ ಪಟ್ಟಣ ಹಳ್ಳಿ ಎನ್ನದೇ ಸುತ್ತಾಡಿದ್ದಾಗಿದೆ.ಅನೇಕ ಸ್ವಾಮೀಜಿಗಳಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ `ಅಪ್ಪಣ'ಕೊಡಿಸಿದ್ದಲ್ಲದೇ ಬೇರೆ ಪಕ್ಷಗಳ ಚುನಾವಣಾ ಆಕಾಂಕ್ಷಿಗಳಿಗೆ ಗಾಳ ಹಾಕುವಲ್ಲಿ ಗೋನಾಳ ಸಫಲರಾಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಜನಾರ್ದನರೆಡ್ಡಿ ಇಲ್ಲಿಂದಲೇ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಸುದ್ದಿ ಬಿರುಗಾಳಿ ಎಬ್ಬಿಸಿದೆ.ಈ ಕುರಿತು ಭಾನುವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ರಾಜಶೇಖರಗೌಡ, ಜನಾರ್ದನರೆಡ್ಡಿ ಇಲ್ಲಿಂದ ಸ್ಪರ್ಧಿಸಲು ಇಚ್ಛಿಸಿದರೆ ಅದನ್ನು ಸ್ವಾಗತಿಸುತ್ತೇವೆ, ಅಲ್ಲದೇ ಈಗಿನಗಿಂತಲೂ ಹೆಚ್ಚಾಗಿ ದುಡಿಯುತ್ತೇವೆ. ಅವರು ಕೊಪ್ಪಳ ಜಿಲ್ಲೆಯಿಂದ ಕಣಕ್ಕಿಳಿಯುವುದು ಖಾತರಿ, ಆದರೆ ಯಾವ ಕ್ಷೇತ್ರ ಎಂಬುದು ನಿರ್ಧಾರವಾಗಿಲ್ಲ. ಈ ಕುರಿತು ಬಿ.ಶ್ರೀರಾಮಲು ಅವರು ತಮಗೆ ಹೇಳಿದಂತೆ ಕುಷ್ಟಗಿ ಕ್ಷೇತ್ರಕ್ಕೆ ನೀವೆ ಅಭ್ಯರ್ಥಿ ಅದರಲ್ಲಿ ಯಾವ ಗೊಂದಲವೂ ಇಲ್ಲ. ಹಾಗಾಗಿ ತಲೆಕೆಡಿಸಿಕೊಳ್ಳದೇ ಸಂಘಟನೆಯಲ್ಲಿ ತೊಡಗುವಂತೆ ತಿಳಿಸಿದ್ದಾರೆ ಎಂಬುದನ್ನು ರಾಜಶೇಖರಗೌಡ ವಿವರಿಸಿದರು.ಈ ವಿಷಯ ಕುರಿತು ವಿವರಿಸಿದ ಬಿಎಸ್‌ಅರ್‌ಸಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಸೂಡಿ, ಯಾರೇ ನಿಂತರೂ ಸಮಸ್ಯೆ ಇಲ್ಲ, ಈಗಾಗಲೇ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಿದ್ದೇವೆ, ಜನರ ಒಲವು ವ್ಯಕ್ತವಾಗಿದ್ದು ಜನಾರ್ದನರೆಡ್ಡಿ ಅಥವಾ ರಾಜಶೇಖರಗೌಡ ಇವರಲ್ಲಿ ಯಾರು ನಿಂತರೂ ಗೆಲ್ಲುವ ಶಕ್ತಿ ಪಕ್ಷಕ್ಕಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry