ಗುರುವಾರ , ನವೆಂಬರ್ 14, 2019
23 °C

ರಾಜಕೀಯ ಫಿಕ್ಸಿಂಗ್‌ನಿಂದ `ಕೈ' ತಪ್ಪಿದ ಟಿಕೆಟ್

Published:
Updated:

ಚನ್ನಪಟ್ಟಣ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್    ಸಮಾಜವಾದಿ (ಎಸ್.ಪಿ) ಪಕ್ಷಕ್ಕೆ ಸೇರಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಎಸ್.ಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.ಅವರು ಬುಧವಾರ ಸಹಸ್ರಾರು ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಎಸ್.ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಪಟ್ಟಣದ ಮಂಗಳವಾರಪೇಟೆಯ         `ಸ್ಪನ್‌ಸಿಲ್ಕ್‌ಮಿಲ್' ಬಳಿಯ ಬಸವನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಜಾನಪದ ಕಲಾತಂಡಗಳೊಂದಿಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಯೋಗೇಶ್ವರ್ ನಂತರ ತಾಲ್ಲೂಕು ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.ಯೋಗೇಶ್ವರ್ ಆರೋಪ: ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ರಾಷ್ಟ್ರೀಯ ನಾಯಕರ ರಾಜಕೀಯ ಸಂಬಂಧಗಳಿಂದ ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಪೂರ್ವ ನಿಯೋಜಿತವಾಗಿ ನನಗೆ ಟಿಕೆಟ್ ತಪ್ಪುವಂತೆ ಮಾಡಿದರು' ಎಂದು ಆರೋಪಿಸಿದರು.ಫಿಕ್ಸಿಂಗ್‌ನಿಂದ ತಪ್ಪಿದ ಟಿಕೆಟ್: `ನೆಲೆ ಇಲ್ಲದೆ ನಮ್ಮ ಕ್ಷೇತ್ರದಲ್ಲಿ ಆಶ್ರಯ ಅರಸಿಕೊಂಡು ಬಂದಿರುವವರು ಸೋಲಿನ ಭೀತಿಯಿಂದ ನೇರ ಸ್ಪರ್ಧೆಗಿಳಿಯದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ.ಇದರಿದ ನನಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ನನಗೆ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರಾದರೂ, ರಾಷ್ಟ್ರೀಯ ನಾಯಕರ ರಾಜಕೀಯ `ಫಿಕ್ಸಿಂಗ್'ನಿಂದ ನನಗೆ ಟಿಕೆಟ್ ತಪ್ಪಿದೆ. ಆದರೂ ಎದೆಗುಂದದೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ' ಎಂದು ಯೋಗೇಶ್ವರ್ ಪ್ರತಿಕ್ರಿಯಿಸಿದರು.`ಸಮಾಜವಾದಿ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಪಕ್ಷೇತರನಾಗಿ ಕಣಕ್ಕಿಳಿಯುವ ಯೋಚನೆ ಇತ್ತಾದರೂ ನಮ್ಮ ವಿರೋಧಿಗಳು ಈಗಾಗಲೇ ಹಲವಾರು ಮಂದಿ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವಂತೆ ಮಾಡಿರುವುದರಿಂದ ಗೊಂದಲವಾಗುವುದು ಬೇಡ ಎಂದು ಸಮಾಜವಾದಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದೇನೆ' ಎಂದು ಉತ್ತರಿಸಿದರು.ಯೋಗೇಶ್ವರ್ ಜೊತೆಯಲ್ಲಿದ್ದ ಸಮಾಜವಾದಿ ಪಕ್ಷದ ರಾಜ್ಯಘಟಕದ ಉಪಾಧ್ಯಕ್ಷ ಕರುಣಾಕರನ್ ಮಾತನಾಡಿ, `ಯೋಗೇಶ್ವರ್ ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ನಮಗೆ ಬಲ ಬಂದಂತಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ' ಎಂದು ಅವರು ಹೇಳಿದರು.ಹರಿದುಬಂದ ಜನಸಾಗರ: ಯೋಗೇಶ್ವರ್ ನಾಮಪತ್ರ ಸಲ್ಲಿಸುವ ವೇಳೆ ತಾಲ್ಲೂಕಿನ ಹಲವೆಡೆಗಳಿಂದ ಜನಸಾಗರವೇ ಹರಿದು ಬಂದಿತು. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ ಸಮಾಜವಾದಿ ಪಕ್ಷ, ಬಿಜೆಪಿ, ಕೆಜೆಪಿ, ಪಕ್ಷೇತರರು ನಾಮಪತ್ರ ಸಲ್ಲಿಸಲು ಮೆರವಣಿಗೆಗೆ ಇಳಿದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.ಭಾರಿ ಮೆರವಣಿಗೆ

ಚನ್ನಪಟ್ಟಣ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸುವ ವೇಳೆ ಕೆಲವರು ಬಲವಂತವಾಗಿ ತಾಲ್ಲೂಕು ಕಚೇರಿ ಪ್ರವೇಶಿಸಲು ಪ್ರಯತ್ನಪಟ್ಟ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಬುಧವಾರ ನಡೆಯಿತು.ಘಟನೆಯಲ್ಲಿ ಕೇಂದ್ರ ಮೀಸಲು ಪಡೆಯ ಯೋಧ ಸದಾನಂದ್ ಎಂಬುವರ ತಲೆಗೆ ಪೆಟ್ಟಾಗಿದ್ದರೆ, ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಲೋಕೇಶ್ ಗಾಯಗೊಂಡಿದ್ದಾರೆ.ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಬಂದಾಗ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನ ತಾಲ್ಲೂಕು ಕಚೇರಿ ಒಳಕ್ಕೆ ನುಗ್ಗಲು ಪ್ರಯತ್ನಿಸಿದರು.ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದರಾದರೂ ಪೊಲೀಸರನ್ನು ಲೆಕ್ಕಿಸದೆ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಬೀಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು.ಆಗ ಸಿಆರ್‌ಪಿಎಫ್ ಪಡೆ ಹಾಗೂ ಪೊಲೀಸರು ಕಾರ್ಯಕರ್ತರ ಮೇಲೆ ಅನಿವಾರ್ಯ ಎಂಬಂತೆ ಲಾಠಿ ಪ್ರಹಾರ ನಡೆಸಿದರು.

ಇದರಿಂದ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದರು. ಗಾಯಗೊಂಡಿರುವ ಯೋಧ ಹಾಗೂ ಪೊಲೀಸ್ ಪೇದೆಗೆ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದಾ ಮಾರ್ಟಿನ್ ಮರ್ಬಾನಿಯಾಂಗ್ ಸ್ಥಳಕ್ಕೆ ಆಗಮಿಸಿದ್ದರು.

ಪ್ರತಿಕ್ರಿಯಿಸಿ (+)