ಮಂಗಳವಾರ, ನವೆಂಬರ್ 19, 2019
23 °C

ರಾಜಕೀಯ ಬೇಡ

Published:
Updated:

ಬೆಂಗಳೂರಿನ ಹಳೆಯ ಹಾಗೂ ಪ್ರಶಾಂತ ಬಡಾವಣೆ ಎನಿಸಿದ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ನಗರವನ್ನು ತಲ್ಲಣಗೊಳಿಸಿದೆ. ರಾಜ್ಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಸೇರಿದಂತೆ 18 ಮಂದಿ ಗಾಯಗೊಂಡಿರುವುದಲ್ಲದೆ ಅನೇಕ ವಾಹನಗಳು ಈ ಸ್ಫೋಟದಲ್ಲಿ ಸುಟ್ಟು ಭಸ್ಮವಾಗಿವೆ. ಆಸುಪಾಸಿನ ಮನೆಗಳೂ ಅಲ್ಪಸ್ವಲ್ಪ ಜಖಂಗೊಂಡಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿ. ಅಮೆರಿಕದಲ್ಲಿ ಬಾಸ್ಟನ್ ಮ್ಯಾರಥಾನ್‌ನಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟಗಳ ಸುದ್ದಿಯ ಬಿಸಿ ತಣ್ಣಗಾಗುವ ಮೊದಲೇ, ನಮ್ಮ  ಪಕ್ಕದಲ್ಲೇ ಬಾಂಬ್ ಸ್ಫೋಟಿಸಿರುವುದು ಆತಂಕವನ್ನು ಹೆಚ್ಚಿಸಿರುವುದು ಸಹಜವೇ. ಮೂರು ವರ್ಷಗಳ ಹಿಂದೆ 2010ರಲ್ಲಿ, ಏಪ್ರಿಲ್ 17ರಂದೇ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿತ್ತು ಎಂಬುದು ಕಾಕತಾಳೀಯ.

ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಐಪಿಎಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಎರಡು ಲಘು ಸಾಮರ್ಥ್ಯದ ಬಾಂಬ್‌ಗಳು ಸ್ಫೋಟಗೊಂಡ ಪರಿಣಾಮ ಆಗ ಏಳು ಮಂದಿ ಪೊಲೀಸರು ಸೇರಿದಂತೆ 17 ಜನರು ಗಾಯಗೊಂಡಿದ್ದರು. `ನಿವೃತ್ತರ ಸ್ವರ್ಗ'ವೆಂದು ಹೆಸರಾಗಿದ್ದು ಈಗ ಮಾಹಿತಿ ತಂತ್ರಜ್ಞಾನದ ನಗರವೆನಿಸಿರುವ ಬೆಂಗಳೂರಿಗೆ ಮೊದಲ ಬಾರಿಗೆ ಭಯೋತ್ಪಾದನಾ ದಾಳಿಯ ಅನುಭವವಾಗಿದ್ದು 2005ರಲ್ಲಿ. ಆಗ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ದೆಹಲಿಯ ಪ್ರೊಫೆಸರ್ ಒಬ್ಬರು ಸತ್ತಿದ್ದರು. ನಂತರ 2008ರಲ್ಲಿ, ಸರಣಿ ಬಾಂಬ್ ಸ್ಫೋಟಗಳಲ್ಲಿ ಮಹಿಳೆಯೊಬ್ಬರು ಸತ್ತಿದ್ದರು.ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸುವ ಕಡೆಯ ದಿನದಂದೇ ಈ ಬಾಂಬ್ ಸ್ಫೋಟ ಸಂಭವಿಸಿದೆ. ಚುನಾವಣಾ ಕದನದಲ್ಲಿ ಕಾವೇರಿರುವ ವಾತಾವರಣಕ್ಕೆ ಇದು ಮತ್ತೊಂದಿಷ್ಟು ರಾಜಕೀಯ ಚಕಮಕಿಗೆ ವಸ್ತುವಾದದ್ದು ಮಾತ್ರ ಅಕ್ಷಮ್ಯ. ಬಾಂಬ್ ಸ್ಫೋಟದಂತಹ ವಿಚಾರವನ್ನೂ ರಾಜಕೀಯಗೊಳಿಸುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡಿದ್ದು ನಮ್ಮ ನೇತಾರರ ಸಂವೇದನಾಶೂನ್ಯತೆಗೆ ಸಾಕ್ಷಿ.ಘಟನೆಯ ಗಂಭೀರತೆಯನ್ನು ಮರೆತು ರಾಜ್ಯದ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದು ಬೇಜವಾಬ್ದಾರಿಯ ಪರಮಾವಧಿ. ಜನಸಮುದಾಯದಲ್ಲಿ ಭೀತಿಯನ್ನು ಬಿತ್ತಿ, ರಾಷ್ಟ್ರದ ಸುರಕ್ಷತೆ, ಸಮಗ್ರತೆಗೆ ಧಕ್ಕೆ ತರುವಂತಹ ಇಂತಹ ಘಟನೆಗಳ ಸಂದರ್ಭದಲ್ಲಿ ಅಗತ್ಯವಾಗಿರಬೇಕಾದ ಸಂಯಮ, ಪ್ರಬುದ್ಧತೆಯನ್ನು ರಾಜಕೀಯ ನಾಯಕರು ಪ್ರದರ್ಶಿಸುವುದು ಮುಖ್ಯ.ಭಯೋತ್ಪಾದಕ ದಾಳಿ ಈಗ ಜಾಗತಿಕ ಸಮಸ್ಯೆಯಾಗಿದೆ ಎಂಬುದನ್ನು ಮರೆಯಲಾಗದು. ಧರ್ಮ, ದೇಶಾಭಿಮಾನದಂತಹ ವಿಚಾರಗಳು ಅತಿರೇಕದ ಭಾವೋದ್ವೇಗಗಳಿಗೆ ಕಾರಣವಾಗಿ ಭಯೋತ್ಪಾದನೆಯ ಹಿಂಸೆಯ ರೂಪದಲ್ಲಿ ತಾಂಡವವಾಡುತ್ತಿರುವುದನ್ನು ಕಡೆಗಣಿಸಲಾಗದು. ರಾಷ್ಟ್ರದಲ್ಲಿ ಈಗಾಗಲೇ  ಪೊಲೀಸ್ ಬಲವಲ್ಲದೆ ಅನೇಕ ಗೂಢಚರ್ಯೆ ಹಾಗೂ ಭಯೋತ್ಪಾದನಾ ನಿಗ್ರಹ ದಳಗಳಿವೆ. ಹೀಗಿದ್ದೂ ಇಂತಹ ದಾಳಿಗಳ ನಿಯಂತ್ರಣ ಅಸಾಧ್ಯವಾಗಿರುವುದು ವಿಷಾದನೀಯ. ನಮ್ಮ ಮನೆಬಾಗಿಲಿಗೇ ಬಂದಿರುವ ಈ ಹಿಂಸೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವ ಬದ್ಧತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರದರ್ಶಿಸಬೇಕು.

ಪ್ರತಿಕ್ರಿಯಿಸಿ (+)