ರಾಜಕೀಯ ಮುಖಂಡರ ಸ್ವಾಗತ

ಶುಕ್ರವಾರ, ಜೂಲೈ 19, 2019
26 °C

ರಾಜಕೀಯ ಮುಖಂಡರ ಸ್ವಾಗತ

Published:
Updated:

ಸಕಲೇಶಪುರ: ಪಟ್ಟಣದಲ್ಲಿ ಹಾದು ಹೋಗಿರುವ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರವನ್ನು ತಾಲ್ಲೂಕಿನ ಹಲವು ಸಂಘಟನೆಗಳು, ವಿವಿಧ ರಾಜಕೀಯ ಮುಖಂಡರು ಸ್ವಾಗತಿಸಿದ್ದಾರೆ.`ಮಾಲೀಕರಿಗೆ ನಷ್ಟ ಆಗದಂತೆ ವಿಸ್ತರಣೆ ಆಗಲಿ~

`ಪಟ್ಟಣದಲ್ಲಿ ಬಿ.ಎಂ.ರಸ್ತೆ ವಿಸ್ತರಣೆ ಅನಿವಾರ್ಯ, ಇವತ್ತಲ್ಲಾ ನಾಳೆ ಆ ಕೆಲಸ ಆಗಲೇಬೇಕು. ಜಿಲ್ಲಾಧಿಕಾರಿಗಳು ಕಟ್ಟಡದ ಮಾಲೀಕರ ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು 14.5 ಮೀಟರ್ ವಿಸ್ತರಣೆ ಮಾಡುತ್ತಿರುವುದು ಒಪ್ಪಲೇ ಬೇಕು. ತಾವು ಸಹ ಹಲವು ಬಾರಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಅನುಭವಿಸಿದ್ದೇನೆ. ತಾವು ಶಾಸಕರಾಗಿದ್ದ ಸಂದರ್ಭದಲ್ಲಿಯೇ ರಸ್ತೆ ವಿಸ್ತರಣೆ ಬಗ್ಗೆ ಆಗಿನ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಸರ್ಕಾರ ಬೇರೆ ಆಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಸಹಕಾರ ದೊರೆಯಲಿಲ್ಲ. ಒಟ್ಟಿನಲ್ಲಿ ಸಾರ್ವ ಜನಿಕರಿಗೆ ಅನುಕೂಲವೂ ಆಗಬೇಕು. ಅದೇ ರೀತಿ ಕಟ್ಟಡದ ಮಾಲೀಕರಿಗೆ ಹೆಚ್ಚು ನಷ್ಟವೂ ಸಹ ಆಗದಂತೆ ವಿಸ್ತರಣೆ ಆಗಲಿ~ ಎಂದರು.

-ಬಿ.ಬಿ.ಶಿವಪ್ಪ, ಮಾಜಿ ಶಾಸಕರುರಸ್ತೆ ವಿಸ್ತರಣೆ ಸ್ವಾಗತಾರ್ಹ

ಪೊಲೀಸ್ ಇಲಾಖೆ ನೀಡಿರುವ ವರದಿಯಂತೆ ಪಟ್ಟಣದ ಒಳಗೆ ಪ್ರತಿ 15 ನಿಮಿಷಕ್ಕೊಮ್ಮೆ ಟ್ರಾಫಿಕ್ ಜಾಮ್ ಆಗುತ್ತದೆ. ಪಟ್ಟಣದಲ್ಲಿ ಇರುವುದೇ ಬಿ.ಎಂ.ರಸ್ತೆ, ಆಜಾದ್ ರಸ್ತೆ ಹಾಗೂ ಅಶೋಕ ರಸ್ತೆ (ವಾಸವಿ ದೇವಸ್ಥಾನ ರಸ್ತೆ) ತಾಲ್ಲೂಕು ಕೇಂದ್ರದ ಜನರ ವ್ಯಾಪಾರ ವಹಿವಾಟುಗಳು ನಡೆಯುವುದೇ ಈ ಮೂರು ರಸ್ತೆಗಳಲ್ಲಿ. ಅದರಲ್ಲಿಯೂ ಬಿ.ಎಂ. ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಮಹಿಳೆಯರು, ಮಕ್ಕಳು ಗ್ರಾಮೀಣ ಪ್ರದೇಶದಿಂದ ಬರುವ ರೈತರು ಸಂಚರಿಸುತ್ತಾರೆ. ಭಾರೀ ತೂಕ ಹೊತ್ತ ಲಾರಿಗಳು ಸೇರಿದಂತೆ ನಿತ್ಯ 25 ಸಾವಿರಕ್ಕೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಓಡಾಡುವುದರಿಂದ ರಸ್ತೆ ದಾಟುವುದು, ಕಿಷ್ಕಿಂಧೆಯಾಗಿರುವ ಫುಟ್‌ಪಾತ್ ಮೇಲೆ ನಡೆದಾಡುವುದಕ್ಕೆ ಕಷ್ಟವಾಗುತ್ತಿದೆ. ದಶಕದ ಹಿಂದೆಯೇ ಈ ರಸ್ತೆ ವಿಸ್ತರಣೆ ಆಗಬೇಕಿತ್ತು. ರಸ್ತೆ ಬದಿಯಲ್ಲಿರುವ ಅಂಗಡಿ ಮಾಲೀಕರಿಗೆ ಹೆಚ್ಚು ನಷ್ಟ ಆಗದಂತೆ ಜಿಲ್ಲಾಧಿಕಾರಿಗಳು ರಸ್ತೆ ವಿಸ್ತರಣೆಗೆ ನಿರ್ಧರಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.

-ಬಿ.ಆರ್.ಗುರುದೇವ್, ಮಾಜಿ ಶಾಸಕರು:ಬೇಡಿಕೆ ಈಡೇರಿಕೆ

ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆ ಆಗಬೇಕು ಎಂಬುದು ಎರಡು ದಶಕಗಳ ಬೇಡಿಕೆ. ಪಟ್ಟಣದ ವಾಣಿಜ್ಯ ವ್ಯವಹಾರಗಳ ಹೃದಯ ಭಾಗದ ಬಿ.ಎಂ. ರಸ್ತೆಯಲ್ಲಿ ವಯಸ್ಸಾದವರು, ಅಂಗವಿಲಕರು, ಶಾಲಾ ಮಕ್ಕಳು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ನಡೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಿಷ್ಕಿಂಧೆಯಾದ ಈ ರಸ್ತೆಯಲ್ಲಿ ಕಳೆದ 5 ವರ್ಷಗಳಲ್ಲಿ 15 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 150ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲತೆ ಹೊಂದಿರುವುದಾಗಿ ಪೊಲೀಸ್ ಇಲಾಖೆ ಲಿಖಿತ ಮಾಹಿತಿ ನೀಡುತ್ತದೆ. ಈ ರಸ್ತೆಯ ವಿಸ್ತರಣೆಗೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಾಗಲಿ, ಸ್ವತಃ ಅದೇ ರಸ್ತೆಯ ಕಟ್ಟಡದ ಮಾಲೀಕರಿಂದಲಾಗಲಿ ಅಂತಹ ಯಾವುದೇ ವಿರೋಧ ಇದುವರೆಗೂ ಇಲ್ಲ. ಒಟ್ಟಿನಲ್ಲಿ ರಸ್ತೆ ವಿಸ್ತರಣೆಗೆ ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎಂದರು.

-ಎಚ್.ಎಂ.ವಿಶ್ವನಾಥ್, ಮಾಜಿ ಶಾಸಕರು

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಬಿ.ಯಜಮಾನ್, ಜಿಲ್ಲಾ ಪಂಚಾಯ್ತಿ ಸದಸ್ಯ ಬೈರಮುಡಿ ಚಂದ್ರು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಕೆ.ಕುಮಾರಸ್ವಾಮಿ, ಪರ್ವತಯ್ಯ, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್, ಮಾಜಿ ಉಪಾಧ್ಯಕ್ಷ ಹೆಗ್ಗೋವೆ ಗೋಪಾಲಸ್ವಾಮಿ, ಪರಿಸರ ಪ್ರೇಮಿ ಗೊದ್ದು ಉಮೇಶ್, ಎಪಿಎಂಸಿ ಅಧ್ಯಕ್ಷ ಎಚ್.ಎಚ್.ಉದಯ್, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಅಲಂ, ವಕೀಲರ ಸಂಘ, ದಲಿತ ಸಂಘರ್ಷ ಸಮಿತಿ, ಜೈ ಭೀಮ್ ಯುವಕ ಸಂಘ, ಭುವನೇಶ್ವರಿ ಯುವಕ ಸಂಘ, ಟಿಪ್ಪು ಯುವಕ ಸಂಘ, ಆಟೋ ಚಾಲಕರು ಹಾಗೂ ಮಾಲಿಕರ ಸಂಘ, ಕಾರು ಮಾಲಿಕರು ಹಾಗೂ ಚಾಲಕರ ಸಂಘ, ಲಾರಿ ಮಾಲಿಕರ ಸಂಘ, ಸೇರಿದಂತೆ ಹಲವು ಸಂಘಟನೆಗಳು ಹೆದ್ದಾರಿ ವಿಸ್ತರಣೆಯನ್ನು ಸ್ವಾಗತಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry